ಕೊಡಗು: ವಿರಾಜಪೇಟೆ ತಾಲ್ಲೂಕಿನ ಮರಂದೋಡ ಗ್ರಾಮದಲ್ಲಿ ಕಾಫಿ ತೋಟದ ಮಧ್ಯೆ 35 ವರ್ಷದ ಹೆಣ್ಣಾನೆ ಮೃತಪಟ್ಟಿದೆ.
ಕೆಲ ವರ್ಷಗಳಿಂದಲೂ ಅನೇಕ ಆನೆಗಳು ಈ ಪ್ರದೇಶದ ಸುತ್ತಮುತ್ತ ತೋಟಗಳಿಗೆ ನುದ್ದಿ ದಾಂಧಲೆ ನಡೆಸುತ್ತಿದ್ದದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆನೆಗಳು ಒಂದಿಬ್ಬರ ಮೇಲೆ ಮಾರಣಾಂತಿಕ ದಾಳಿಯನ್ನೂ ಮಾಡಿದ್ದವು. ಹಾಗಾಗಿ ಇದನ್ನ ಸೆರೆಹಿಡಿಯಲಿಕ್ಕೆ ಅರಣ್ಯ ಇಲಾಖೆಗೆ ಆದೇಶವಾಗಿತ್ತು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಒಟ್ಟು ಐದು ಆನೆಗಳನ್ನು ಹಿಡಿಯುವ ಯೋಜನೆ ರೂಪಿಸಿದ್ದರು.
ಇದನ್ನೂ ಓದಿ | Viral Video; ಫೋಟೋಕ್ಕಾಗಿ ಮೊಬೈಲ್ ತೆಗೆದ ಹುಡುಗಿ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ
ಯೋಜನೆಯಂತೆ ಮೂರು ದಿನದ ಹಿಂದೆ ಒಂದು ಆನೆಯನ್ನು ಅರವಳಿಕೆ ಇಂಜೆಕ್ಷನ್ ನೀಡಿ ಸೆರೆಹಿಡಿಯಲಾಯಿತು. ಅದನ್ನು ಸುರಕ್ಷಿತವಾಗಿ ದುಬಾರೆಗೆ ಕಳಿಸಿಕೊಡಲಾಯಿತು. ಬಳಿಕ ಇನ್ನೊಂದು ಹೆಣ್ಣಾನೆಯನ್ನು ಮಂಗಳವಾರ ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯಲಾಯಿತು. ಅರವಳಿಕೆ ಮದ್ದಿನ ಪ್ರಭಾವ ಕಡಿಮೆಯಾದ ನಂತರ ಆನೆ ಚೇತರಿಸಿಕೊಂಡಿತ್ತು. ನಂತರ ಆನೆಯನ್ನು ಹಗ್ಗ ಕಟ್ಟಿ ಎಳೆದು ತರಲಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಕೆಲವೇ ಸಮಯದಲ್ಲಿ ಆನೆ ಮೃತಪಟ್ಟಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ವೈದ್ಯರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಪ್ರಿಕ್ರಿಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಒಟ್ಟು ಐದು ಆನೆಗಳನ್ನು ಹಿಡಿಯಬೇಕಿದೆ. ಈಗ ಎರಡು ಆನೆಗಳನ್ನು ಹಿಡಿಯಲಾಗಿದೆ. ಅದರಲ್ಲಿ ಒಂದು ಹೆಣ್ಣಾನೆ ಮೃತಪಟ್ಟಿದೆ. ಈ ಆನೆಗೆ ಸುಮಾರು ಮೂವತ್ತೈದು ವರ್ಷವಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯ ನಂತರ, ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮಸ್ಥರು, ಆನೆಗಳು ಸತತ 12 ವರ್ಷಗಳಿಂದ ದಾಳಿಗಳನ್ನು ಮಾಡುತ್ತಿದ್ದವು. ಬೆಳೆ ಕೃಷಿ ಫಸಲನ್ನು ನಾಶಪಡಿಸುತ್ತಿದ್ದವು. ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆಯನ್ನು ಉಂಟು ಮಾಡುತ್ತಿತ್ತು. ನಾವು ರಾತ್ರಿ ಹೊತ್ತು ಹೊರಗಡೆ ತಿರುಗಾಡಲು ಭಯಪಡಬೇಕಿತ್ತು ಎಂದಿದ್ದಾರೆ.
ಆನೆಗಳು ದಾಂಧಲೆ ಮಾಡುತ್ತಿದ್ದುದೇನೋ ನಿಜ. ಆದರೆ ಸಾಯುವಂತಹ ತಪ್ಪು ಮಾಡಿರಲಿಲ್ಲ ಎಂದು ಗ್ರಾಮಸ್ಥರು ಮರಗುತ್ತಿದ್ದಾರೆ. ಬಹಳ ದುಃಖದಿಂದಲೇ ಗ್ರಾಮಸ್ಥರು ಮೂರು ಹಿಡಿ ಮಣ್ಣು ಹಾಕಿ ಆನೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನಾದ್ರೂ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿ ಕಾರ್ಯಾಚರಣೆ ನಡೆಸಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಆನೆ ಸಾವಿಗೆ ಗುಂಡೇಟು ಕಾರಣ