Site icon Vistara News

Car Catches fire: ಮಡಿಕೇರಿ ಬಳಿ ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸ್ವಿಫ್ಟ್‌ ಕಾರು!

Car Catches fire

ಕೊಡಗು: ಮಡಿಕೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 275ರ ಸಂಪಿಗೆ ಕಟ್ಟೆ ಬಳಿ ತಾಂತ್ರಿಕ ದೋಷದಿಂದ ಸ್ವಿಫ್ಟ್‌ ಕಾರು (Car Catches fire) ಹೊತ್ತಿ ಉರಿದಿದೆ. ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕಾರು ಸುಟ್ಟು ಕರಕಲಾಗಿದೆ.

ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ಬೆಳಗ್ಗೆ ಅಪಘಾತವಾಗಿದ್ದ ಕಾರನ್ನು ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ಸಂಜೆ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನ ಶ್ರೀನಿವಾಸ್ ಎಂಬುವವರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮ‌ಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ‌ ನಂದಿಸಿದರು. ಮಡಿಕೇರಿ ಸಂಚಾರಿ ಪೊಲೀಸರು ಹಾಗೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ರಾಷ್ಟ್ರೀಯ ಹೆದ್ದಾರಿ‌ 275ರಲ್ಲಿ‌ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಇದನ್ನೂ ಓದಿ | Radioactive Material: ಅಪಾಯಕಾರಿ ರಾಸಾಯನಿಕ ವಸ್ತು ತುಂಬಿದ್ದ ಬಾಕ್ಸ್‌ಗಳು ಪತ್ತೆ; ಐವರು ಅರೆಸ್ಟ್‌

ಜೀಪ್ ಪಲ್ಟಿಯಾಗಿ ಎಂಟು ಜನರಿಗೆ ಗಂಭಿರ ಗಾಯ

ಕಲಬುರಗಿ: ಚಾಲಕ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿ 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲಯ ಚಿಂಚೋಳಿ ಪಟ್ಟಣ ಹೊರವಲಯದಲ್ಲಿ ನಡೆದಿದೆ. ಸಂಬಂಧಿಕರ ಅಂತ್ಯಕ್ರಿಯೆಗಾಗಿ ಚಿಂಚೋಳಿಯಿಂದ ಶಿಕಾರ ಮೊತಕಪಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪಲ್ಟಿಯಾಗಿದೆ.
ಘಟನೆಯಲ್ಲಿ ಕೆಲವರ ಕೈಕಾಲು ಮುರಿದಿವೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಿಂಚೋಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Murder case : ಪ್ರೀತಿ ವಿಷ್ಯಕ್ಕೆ ಯುವಕನಿಗೆ ಬೆಂಕಿ ಹಚ್ಚಿ ಕೊಂದವರ ವಿರುದ್ಧ ಚಾಜ್೯ ಶೀಟ್ ಸಲ್ಲಿಕೆ

ಪೇಂಟಿಂಗ್ ಮಾಡುವಾಗ ವಿದ್ಯುತ್ ತಗುಲಿ ಯುವಕ ಸಾವು

ಧಾರವಾಡ: ಪೇಂಟಿಂಗ್ ಮಾಡುವಾಗ ವಿದ್ಯುತ್ ತಗುಲಿ ಯುವಕ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ. ಅಣ್ಣಿಗೇರಿ ಗಾಂಧಿನಗರದ ನಿವಾಸಿ ಮಂಜುನಾಥ್ ಶಿರಹಟ್ಟಿ (26)ಮೃತ ಯುವಕ. ಹೊಸ ಮನೆಗೆ ಪೇಂಟ್ ಮಾಡುವಾಗ ಸರ್ವೀಸ್ ವೈಯರ್ ತಗುಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



Exit mobile version