ಕೊಡಗು: ಸೋಮವಾರಪೇಟೆ ಸಮೀಪದ ನಗರೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಿಆರ್‌ಪಿಎಫ್ ಯೋಧ ಕೆ ಬಿ ಡಾಲು ಶುಕ್ರವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯೋಧ ಡಾಲು ಯಡವಾರೆ ಗ್ರಾಮದ ಕಲ್ಲುಗದ್ದೆ ಮನೆ ದಿ ಬಾಲಕೃಷ್ಣ ಎಂಬುವರ ಪುತ್ರ. ಕಳೆದ 13 ವರ್ಷದಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸದ್ಯ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಲು, ಮೂರು ದಿನಗಳ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದರು. ಸೋಮವಾರಪೇಟೆ ಪಟ್ಟಣಕ್ಕೆ ಬಂದು ಬ್ಯಾಂಕ್ ವ್ಯವಹಾರ ಮುಗಿಸಿ, ಸ್ಕೂಟರ್‌ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ನಗರೂರು ಸಮೀಪ ಹೆದ್ದಾರಿಯಲ್ಲಿ ಇವರು ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ಬೈಕೊಂದು ಡಿಕ್ಕಿ ಹೊಡೆದುಕೊಂಡಿದ್ದವು.
ರಸ್ತೆ ಮೇಲೆ ಬಿದ್ದ ಯೋಧ ಡಾಲು ಗಂಭೀರವಾಗಿ ಗಾಯಗೊಂಡಿದ್ದು, ಹೆಲ್ಮೆಟ್ ಧರಿಸದೇ ಇದ್ದುದ್ದರಿಂದ ಅವರ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮೈಸೂರಿಗೆ ಕರೆದೊಯ್ಯಲಾಗಿತ್ತು.
ಬೈಕ್‌ನಲ್ಲಿ ಚಲಾಯಿಸುತ್ತಿದ್ದ ಕಾಗಡಿಕಟ್ಟೆ ಗ್ರಾಮದ ಮನೋಜ್‌ಭಟ್ ಹಾಗು ಪೈಂಟರ್ ಆಸೀಫ್ ಕೂಡ ತೀವ್ರ ಗಾಯಗೊಂಡಿದ್ದು, ಮಡಿಕೇರಿ ಮತ್ತು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷಿ ಕುಟುಂಬದಿಂದ ಬಂದಿದ್ದ ಯೋಧ ಡಾಲ ಅವರಿಗೆ ಯಡವಾರೆ ಗ್ರಾಮದಲ್ಲಿ ಮುಕ್ಕಾಲು ಎಕರೆ ಕೃಷಿ ಭೂಮಿಯಿದೆ.
ಇದನ್ನೂ ಓದಿ| ರಾಮನಗರದಲ್ಲಿ ಭೀಕರ ಅಪಘಾತಕ್ಕೆ ಉಡುಪಿಯ ಮೂವರ ಸಾವು
ಡಾಲು ಅವರಿಗೆ ಏಳು ಮತ್ತು ಎರಡೂವರೆ ವರ್ಷದ ಇಬ್ಬರು ಪುತ್ರಿಯರಿದ್ದು, ಪತ್ನಿ ರಾಜೇಶ್ವರಿ ಮತ್ತು ತಾಯಿ ನಾಗವೇಣಿಯವರೊಂದಿಗೆ ವಾಸಿಸುತ್ತಿದ್ದರು. ಇಬ್ಬರು ಸಹೋದರಿಯರಿದ್ದು, ಅವರ ವಿವಾಹವಾಗಿದೆ. ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಯೋಧನ ಸಾವಿಗೆ ಗ್ರಾಮಸ್ಥರು ತೀವ್ರ ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ| ಸೋಮವಾರಪೇಟೆಯಲ್ಲಿ ಬೈಕ್, ಸ್ಕೂಟರ್ ಡಿಕ್ಕಿ: ಸಿಆರ್‌ಪಿಎಫ್ ಯೋಧನ ಸ್ಥಿತಿ ಗಂಭೀರ