ಕೊಡಗು: ದೀಪಾವಳಿ ಹಬ್ಬದ (Deepawalli 2024) ಪ್ರಯುಕ್ತ ಮಡಿಕೇರಿಯ ಕಾಲನಗರ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ 11ನೇ ವರ್ಷದ ದೀಪಾವಳಿ ಉತ್ಸವವು ಬಹಳ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಸಮಾಜ ಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರ್ ಮಲ್ಪೆ, ಮಡಿಕೇರಿಯ ಕಲಾ ನಗರಕ್ಕೆ ಕರೆಸಿರೋದು ಬಹಳ ಸಂತೋಷವಾಗಿದೆ. ನಾನೂ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿ ನೀರಿನಲ್ಲಿ ಮುಳುಗಿದ್ದ ಶವ ಹೊರ ತೆಗೆದಿದ್ದೇನೆ. ಕಳೆದ ವರ್ಷ ಕೂಡ ಇಲ್ಲಿಗೆ ಬಂದು ಒಂದು ಶವವನ್ನು ಹೊರ ತೆಗೆದಿದ್ದೇನೆ. ಈ ಒಂದು ಸಣ್ಣ ಸಮಾಜಮುಖಿ ಕಾರ್ಯವನ್ನು ಗುರುತಿಸಿ ನನ್ನ ಈ ಕಾರ್ಯಕ್ರಮಕ್ಕೆ ಕರೆಸಿರೋದು ಬಹಳ ಸಂತಸ ತಂದಿದೆ. ಕಲಾನಗರದಲ್ಲಿ ಕಲಾ ರಸಿಕರೆ ಇದ್ದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತಷ್ಟು ಸಾಧನೆ ಮಾಡಲೆಂದು ಹಾರೈಸಿದರು.
ಇನ್ನೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ವಯನಾಡು ದುರಂತದ ಕುರಿತು ಪ್ರತ್ಯಕ್ಷ ವರದಿಗಾರಿಕೆ ಮಾಡಿದ್ದ ಕೊಡಗಿನ ಪತ್ರಕರ್ತರಾದ ವಿಸ್ತಾರ ನ್ಯೂಸ್‌ನ ಜಿಲ್ಲಾ ವರದಿಗಾರ ಲೋಹಿತ್ ಎಂ.ಆರ್, ಕ್ಯಾಮೆರಾಮನ್ ಮನೋಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಪ್ರಜ್ವಲ್ ಎನ್.ಸಿ, ನಗರದ ಸ್ವಚ್ಚತಾ ಕಾರ್ಯದಲ್ಲಿ ಶ್ರಮಿಸುತ್ತಿರುವ ನಗರಸಭೆಯ ರಂಗಪ್ಪ , ಆರೋಗ್ಯ ಇಲಾಖೆಯ ಪ್ರತಿಮಾ ರೈ, ಅಣ್ಣಯ್ಯ, ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಿವೈಎಸ್ಪಿ ಮಹೇಶ್ ಕುಮಾರ್, ಆಕಾಶವಾಣಿಯ ಸುಬ್ರಾಯ ಸಂಪಾಜೆ ಅಧ್ಯಕ್ಷರಾದ ಮಹೇಶ್, ಆಶಾ ನಟರಾಜ್, ಸ್ಥಾಪದ ಸದಸ್ಯರು ಚಂದ್ರು, ಕೆ.ಎಸ್ ರಮೇಶ್,ಕೋಡಿ ಭರತ್, ತಿಲಖ್ ಸಿಂಗ್ ಕುಮಾರ್ ಉಪಸ್ಥಿತರಿದ್ದರು.