ಮಡಿಕೇರಿ: ಕೊಡಗಿನಲ್ಲಿ (Kodagu News) ಆನೆ ದಾಳಿಗೆ (Elephant Attack) ಕಾಫಿ ಪ್ಲ್ಯಾಂಟರ್ ಒಬ್ಬರು ಬಲಿಯಾಗಿದ್ದಾರೆ. ಶನಿವಾರ ಬೆಳಗ್ಗೆ ಮನೆ ಸಮೀಪದ ತಮ್ಮ ಕಾಫಿ ತೋಟಕ್ಕೆ (Coffee Plantation) ಹೋದಾಗ ಆನೆ ದಾಳಿ ನಡೆಸಿದೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ಘಟನೆ ಘಟನೆಯಲ್ಲಿ ಮೃತಪಟ್ಟ ದುರ್ದೈವಿಯನ್ನು ಕಂಬೆಯಂಡ ರಾಜ ದೇವಯ್ಯ(59) ಎಂದು ಗುರುತಿಸಲಾಗಿದೆ.
ಇವರು ಬೆಳಗ್ಗೆ ಎದ್ದು ಮನೆಯಿಂದ ತೋಟಕ್ಕೆ ಹೋಗಿದ್ದರು. ಈ ವೇಳೆ ಕಾಡಾನೆ ಅಲ್ಲಿ ಹೊಂಚಿ ಹಾಕಿದಂತೆ ನಿಂತಿತ್ತು. ಅಲ್ಲಿ ಆನೆ ಇದೆ ಎಂಬ ಸುಳಿವೂ ಇಲ್ಲದೆ ಇದ್ದ ದೇವಯ್ಯ ಅವರು ತಮ್ಮ ಪಾಡಿಗೆ ಸಾಗುತ್ತಿದ್ದಾಗ ಆನೆ ಒಮ್ಮಿಂದೊಮ್ಮೆಗೇ ದಾಳಿ ಮಾಡಿ ಅವರ ಪ್ರಾಣವನ್ನು ಕಿತ್ತುಕೊಂಡಿದೆ.
ಘಟನೆಯಿಂದ ಆ ಭಾಗದ ಜನರು ಭಾರಿ ಆತಂಕಗೊಂಡಿದ್ದು, ಮನೆಯವರ ಅಳು, ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಮಕ್ಕಳು, ನಾಯಿ ಕೂಡಾ ಶವದ ಮುಂದೆ ರೋದಿಸುತ್ತಿರುವುದು ಕಂಡುಬಂತು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ.
ಕೆಲವೇ ದಿನದ ಹಿಂದೆ ಮಹಿಳೆಯನ್ನು ಬಲಿ ಪಡೆದಿದ್ದ ಕಾಡಾನೆ
ಕೊಡಗು ಜಿಲ್ಲೆಯಲ್ಲಿ ಆನೆ ದಾಳಿಗೆ (Elephant Attack) ಮರಣ ಹೊಂದಿರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೆಲವೇ ದಿನಗಳ ಹಿಂದೆ ಕಾಫಿ ತೋಟದಲ್ಲಿ (Coffee Plantation) ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಆನೆ ಬಲಿ ಪಡೆದಿತ್ತು.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೆನ್ನಂಗಿ ಬಳಿಯ ಅಬ್ಬೂರು ಗ್ರಾಮದ ಬೀಚ್ ಲ್ಯಾಂಡ್ ಕಾಫಿ ತೋಟಕ್ಕೆ ನುಗ್ಗಿದ ಆನೆ ಅಸ್ಸಾಂ ಮೂಲದ ಮಹಿಳೆ ಅಜಬಾನು(37) ಎಂಬವರ ಮೇಲೆ ದಾಳಿ ಮಾಡಿತ್ತು. ಅಜಬಾನು ಅವರು ಇತರ ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸುತ್ತಿದ್ದರು. ಆಗ ಆನೆ ದಾಳಿ ಮಾಡಿದೆ. ದಾಳಿ ಮಾಡಿದಾಗ ಅಜಬಾನು ಆನೆಯ ದಾಳಿಗೆ ಸಿಲುಕಿದ್ದರು. ಈ ಘಟನೆಯ ಬಳಿಕ ಪ್ಲಾಂಟೇಷನ್ ಕಾರ್ಮಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದರು.
ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮದ ನಿಶಾನಿಬೆಟ್ಟದಲ್ಲಿ ಗಾಳಿಬೀಡು ಗ್ರಾಮದ ವರಡ ನಿವಾಸಿ ಅಪ್ಪಚ್ಚ(60) ಅವರ ಶವ (Man dies of Elephant Attack) ಕಳೆದ ಭಾನುವಾರ (ಮಾರ್ಚ್ 10) ಪತ್ತೆಯಾಗಿತ್ತು. ಅವರು ಕಾಡಾನೆ ತುಳಿದು ವ್ಯಕ್ತಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : Elephant Attack : ತೋಟಕ್ಕೆ ಹೋದ ಕಾರ್ಮಿಕನನ್ನು ಅಟ್ಟಾಡಿಸಿ ಕೊಂದ ಒಂಟಿ ಸಲಗ
ಆನೆ ಹಾವಳಿ ನಿಯಂತ್ರಿಸಬೇಕಾದ ಆರ್‌ಆರ್‌ಟಿ ಸದಸ್ಯರೇ ಆನೆ ದಾಳಿಗೆ ಬಲಿ
ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು. RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು.
ಆಗಸ್ಟ್ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು
ಕಳೆದ ಆಗಸ್ಟ್ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.
ಅಂದು ಮುಂಜಾನೆ ಈರಪ್ಪ ತಮ್ಮ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ. ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಆಗಸ್ಟ್ 20ರಂದು ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೃತ್ಯು
ಕಳೆದ ಆಗಸ್ಟ್ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.