ಮಡಿಕೇರಿ: ಎರಡು ದಿನದ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕಾಜೂರು ಬಳಿ ಇರುವ ಕೋವರ್‌ಕೊಲ್ಲಿ ಎಸ್ಟೇಟ್‌ನಲ್ಲಿ ಭಾರಿ ದಾಂಧಲೆ ನಡೆಸಿದ ಮದವೇರಿದ ಒಂಟಿ ಸಲಗ (Elephant attack) ಇದೀಗ ಮತ್ತೆ ಅಟಾಟೋಪ ತೋರಿಸಿದೆ. ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್‌ಗೆ (Kovar kolli Tata Estate) ಬಂದಿದ್ದ ಮಾಹಿತಿ ಪಡೆದ ಆರ್‌ಆರ್‌ಟಿ ಮತ್ತು ಅರಣ್ಯ ಸಿಬ್ಬಂದಿ (Forest Department) ಅಲ್ಲಿಗೆ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್‌ನಿಂದ ಅರಣ್ಯಕ್ಕೆ ವಾಪಸ್ ತೆರಳಿತ್ತು. ಆದರೆ, ಇದೀಗ ಮತ್ತೆ ಅದು ಅದೇ ಪರಿಸರಕ್ಕೆ ಮರಳಿ ಮತ್ತೆ ದಾಂಧಲೆ ಮಾಡಿದೆ.
ಎರಡು ದಿನದ ಹಿಂದೆ ದ್ವಿಚಕ್ರ ಹಾನಿ ಪಡಿಸಿ ವಸತಿಗೃಹಕ್ಕೆ ನುಗ್ಗಲೆತ್ನಿಸಿದ ಪುಂಡಾನೆ ಸ್ವಲ್ಪ ದೂರದಲ್ಲೇ ಮತ್ತೆ ಕಾಣಿಸಿಕೊಂಡಿದೆ. ತೋಟದಿಂದ ಬಂದು ದಾಳಿ ನಡೆಸಿ ಕಾಡಿಗೆ ಓಡಿದ ಪುಂಡಾನೆಯಿಂದಾಗಿ ಇಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಕಬ್ಬಿಣ ಸೇತುವೆಯಿಂದ ಕೋವರ್ ಕೊಲ್ಲಿ ವರೆಗೆ ಅಲರ್ಟ್ ಘೋಷಣೆ ಮಾಡಲಾಗಿದ್ದು, ವಾಹನ ಸವಾರರು ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಓಡಾಡುವವರು ಎಚ್ಚರ ವಹಿಸಿ : ಅರಣ್ಯ ಇಲಾಖೆ ಸೂಚನೆ
- ಐಗೂರು, ಕಾಜೂರು, ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಚಲನವಲನ ಹೆಚ್ಚಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಕೋರುತ್ತೇವೆ.
- ಐಗೂರು ಗ್ರಾಮದ ಕಬ್ಬಿಣ ಸೇತುವೆಯಿಂದ ಕಾಜೂರು ಜಂಕ್ಷನ್, ಕಾಜೂರು ಕೃಷ್ಣರವರ ಅಂಗಡಿಯಿಂದ ಅರಣ್ಯ ವಸತಿ ಗೃಹದ ಮುಂಭಾಗ, ಟಾಟಾ ಎಸ್ಟೇಟ್‌ನ ಮುಂಭಾಗ ಜ್ಯೋತಿ ಸರ್ಕಲ್, ಕೊವರಕೊಲ್ಲಿವರೆಗೆ, ಸೋಮವಾರಪೇಟೆ – ಮಡಿಕೇರಿ ಮುಖ್ಯರಸ್ತೆಯಲ್ಲಿ ತುಂಬ ಎಚ್ಚರಿಕೆ ಇರಬೇಕು.
- ಬೆಳಗಿನ ಸಮಯ ವಾಕಿಂಗ್ ಮಾಡುವವರು ಅರಣ್ಯದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡ ಬಾರದು.
- ಅರಣ್ಯದ ಪಕ್ಕದ ರಸ್ತೆಯಲ್ಲಿ ಅನಗತ್ಯವಾಗಿ ವಾಹನಗಳನ್ನು ನಿಲ್ಲಸಬಾರದು.
- ಟಾಟಾ ಕಂಪನಿಯಲ್ಲಿ ಕೆಲಸ ಮಾಡುವವರು, ಐಗೂರು, ಕಾಜೂರು ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.
- ಇದನ್ನೂ ಓದಿ: Elephant attack : ವೃದ್ಧೆಯ ಕಾಲು ಮುರಿದ ಆನೆ; ಕೆಟ್ಟು ನಿಂತ ಲಾರಿಯ ಟಾರ್ಪಲ್ ಕಿತ್ತೆಸೆದು ದಾಂಧಲೆ
ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಒಂಟಿಸಲಗ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಒಂಟಿ ಸಲಗವೊಂದು ಹೋಬಳಿ ಕೇಂದ್ರಕ್ಕೆ ನುಗ್ಗಿದೆ. ತಡರಾತ್ರಿ ಗ್ರಾಮದೊಳಗೆ ಬಂದ ಕಾಡಾನೆ ಕಂಡು ಬೈಕ್‌ನಲ್ಲಿ ಬರುತ್ತಿದ್ದ ಸವಾರರು ಎದ್ದು ಬಿದ್ದು ಓಡಿದ್ದಾರೆ. ಇತ್ತ ನೈಟ್ ಬೀಟ್‌ನಲ್ಲಿದ್ದ ಪೊಲೀಸರು ಒಂಟಿಸಲಗವನ್ನು ಕಂಡು ಠಾಣೆಯೊಳಗೆ ಓಡಿ ಹೋಗಿದ್ದಾರೆ.
ಒಂಟಿಸಲಗವು ರಸ್ತೆ ಬದಿ ನಿಂತಿದ್ದ ವಾಹನಗಳನ್ನು ಬೀಳಿಸಿ ಹೋಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಯಸಳೂರು ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದೆ. ಕಾಡಾನೆ ಇರುವ ಬಗ್ಗೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ