Site icon Vistara News

Elephant Attack : ಆನೆ ದಾಳಿಗೆ ಕೃಷಿಕ ಬಲಿ; ಹಸುವನ್ನು ಹುಡುಕಿ ಹೋದಾಗ ಬೆನ್ನಟ್ಟಿದ ಗಜರಾಜ, ಕೊಡಗಿನಲ್ಲಿ ವಾರದಲ್ಲಿ 2 ಸಾವು

Elephant attack

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ (Human-Elephant Conflict) ಅತಿರೇಕಕ್ಕೆ ಹೋಗಿದ್ದು ದಿನ ಬೆಳಗಾದರೆ ಆನೆಗಳು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ದಾಳಿ (Elephant attack) ನಡೆಸುವ ಘಟನೆ ನಡೆಯುತ್ತಲೇ ಇರುತ್ತದೆ. ಇದೀಗ ಶುಕ್ರವಾರ ರೈತರೊಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ (Farmer death). ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಎರಡು ಸಾವು ಸಂಭವಿಸಿದಂತಾಗಿದೆ.

ಆನೆ ದಾಳಿಗೆ ಕೃಷಿಕನೊಬ್ಬ ಪ್ರಾಣ ತೆತ್ತಿರುವ ಘಟನೆ ಕೊಡಗು ಜಿಲ್ಲೆ ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು ಕೃಷಿಕರೊಬ್ಬರನ್ನು ಕೊಂದು ಹಾಕಿದೆ. 60 ವರ್ಷದ ಕೃಷಿಕ ಈರಪ್ಪ ಮೃತ ದುರ್ದೈವಿಯಾಗಿದ್ದಾರೆ.

ಶುಕ್ರವಾರ ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗಸ್ಟ್‌ 20ರಂದು ವಾಕಿಂಗ್‌ ಮಾಡುತ್ತಿದ್ದ ಮಹಿಳೆ ಮೃತ್ಯು

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

ದಿನ ಬೆಳಗಾದರೆ ಸಾಕು ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಆನೆ ಮಾನವ ಸಂಘರ್ಷಕ್ಕೆ ಮುಕ್ತಿ ನೀಡುವಂತೆ ಕಾಡಂಚಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Elephant attack : ಮಹಿಳೆ ಕೊಂದಿದ್ದ ಒಂಟಿ ಸಲಗ ಮತ್ತದೇ ಜಾಗದಲ್ಲಿ ಪ್ರತ್ಯಕ್ಷ!

ಬೆಳಗ್ಗೆ ಮತ್ತು ಸಂಜೆಯ ಹೊತ್ತು ಎಚ್ಚರಿಕೆ ವಹಿಸಿ

ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಆನೆ ಚಲನವಲನ ಇರುತ್ತದೆ. ಈ ಸಮಯದಲ್ಲಿ ಜನ ಎಚ್ಚರಿಕೆಯಿಂದ ಇರಬೇಕು ಎನ್ನುವ ಸೂಚನೆ ನೀಡುತ್ತಿದ್ದೇವೆ. ಆದರೂ ದುರಂತ ಸಂಭವಿಸಿದೆ. ಈಗಾಗಲೇ ಪರಿಹಾರ ವಿತರಣೆ ಹಾಗೂ ಆನೆ ಓಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಫ್‌ ಎ.ಟಿ.ಪೂವಯ್ಯ ತಿಳಿಸಿದ್ದಾರೆ.

Exit mobile version