ಕೊಡಗು: ಮದುವೆ ರದ್ದಾಗಿದ್ದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಬಾಲಕಿಯನ್ನು ಕೊಲೆ (Murder Case) ಮಾಡಿ ರುಂಡದೊಂದಿಗೆ ಪರಾರಿ ಆಗಿದ್ದ. ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ ಪೊಲೀಸರು ಶನಿವಾರ ಬಂಧಿಸಿದ್ದರು. ಆದರೆ ಆರೋಪಿ ಸಿಕ್ಕರೂ ಬಾಲಕಿಯ ರುಂಡ ಪತ್ತೆಯಾಗಿರಲಿಲ್ಲ. ಇದೀಗ ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದೆ. ಬಾಲಕಿಯ ತಲೆಯನ್ನು ಆರೋಪಿ ಪ್ರಕಾಶ್ ಮರದ ಮೇಲೆ ಇರಿಸಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಶುಕ್ರವಾರ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾಳ ತಲೆ ಸಿಕ್ಕಿರಲಿಲ್ಲ. ಇತ್ತ ಮಗಳ ತಲೆ ಸಿಗದೆ ಮೃತದೇಹದ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದರು. ಹೀಗಾಗಿ ಶನಿವಾರ ಮತ್ತೆ 40ಕ್ಕೂ ಹೆಚ್ಚು ಪೊಲೀಸರಿಂದ ಶೋಧ ಕಾರ್ಯ ನಡೆದಿದ್ದು, ಹತ್ಯೆಯಾಗಿದ್ದ ಮೀನಾ ರುಂಡ ಪತ್ತೆ ಮಾಡಿದ್ದಾರೆ. ತಲೆ ವಶಕ್ಕೆ ಪಡೆದು ಬಾಲಕಿ ಮನೆ ಬಳಿ ಮಹಜರ್ ನಡೆಸಿದ್ದಾರೆ.
ರುಂಡ ಕಂಡು ವಿಚಿತ್ರವಾಗಿ ವರ್ತಿಸಿದ ಸಹೋದರ
ಕೊಡಗಿನಲ್ಲಿ ಬಾಲಕಿ ಹತ್ಯೆಯ ಸ್ಥಳ ಮಹಜರು ವೇಳೆ ವಿಚಿತ್ರ ಘಟನೆಯೂ ನಡೆದಿದೆ. ರುಂಡ ಪತ್ತೆ ಸ್ಥಳದಲ್ಲಿ ಬಾಲಕಿ ಸಹೋದರನ ಮೈಮೇಲೆ ಶಕ್ತಿ ಆವಾಹನೆ ಆದ ರೀತಿ ವರ್ತಿಸಿದ್ದಾನೆ. ರುಂಡ ಪತ್ತೆಯಾದ ಸ್ಥಳಕ್ಕೆ ಆರೋಪಿ ಪ್ರಕಾಶ್ ಮತ್ತು ಬಾಲಕಿ ಸಹೋದರ ಹೋದಾಗ ಏಕಾಏಕಿ ಶಕ್ತಿ ಆವಾಹನೆ ಆದಂತೆ ವರ್ತಿಸಿದ್ದಾನೆ. ಏಕಾಏಕಿ ಆತನ ವರ್ತನೆಗೆ ಪೊಲೀಸರು ಕ್ಷಣಕಾಲ ಬೆಚ್ಚಿ ಬಿದ್ದರು. ಕೂಡಲೇ ಅಲ್ಲಿದ್ದವರು ಮೀನಾಳ ಸಹೋದರನನ್ನು ಹಿಡಿದುಕೊಂಡು ಸಮಾಧಾನಪಡಿಸಿದರು.
ಏನಿದು ಪ್ರಕರಣ?
ಮೀನಾ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಹೀಗಾಗಿ ಗುರುವಾರ ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿತ್ತು. ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ಪ್ರಕಾಶ್ ಮೀನಾಳನ್ನು ಎಳೆದೊಯ್ದು ಕತ್ತು ಕೊಯ್ದಿದ್ದ. ನಂತರ ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದ. ಭೀಕರ ಘಟನೆಯು ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿತ್ತು.
ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಪ್ರಕಾಶ್ ಕೊಲೆ ಮಾಡಿದ್ದ.
ಬಾಲಕಿಯನ್ನು ಆರೋಪಿ ಪ್ರಕಾಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದ.
ಎಸ್ಎಸ್ಎಲ್ಸಿ ಪಾಸಾಗಿದ್ದ ಬಾಲಕಿ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಭಯಾನಕವಾಗಿ ಕೊಲೆಯಾಗಿದ್ದಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ