Site icon Vistara News

Naxal Activity : ವಯನಾಡಿನಲ್ಲಿ ನಕ್ಸಲ್‌ ಚಟುವಟಿಕೆ; ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ

Naxal activity in wayanad high alert in Karnataka-kerala border

ಮಡಿಕೇರಿ: ಕೇರಳದ ವಯನಾಡಿನಲ್ಲಿ (Wayanad in Kerala) ಕಳೆದ ಒಂದು ತಿಂಗಳಿನಿಂದ ನಕ್ಸಲ್‌ ಚಟುವಟಿಕೆ (Naxal Activity) ಮತ್ತೆ ಚುರುಕುಗೊಂಡಿದ್ದು, ಇದರ ಪ್ರಭಾವ ಕರ್ನಾಟಕದ ಮೇಲೂ ಬೀಳುವ ಅಪಾಯ ಕಾಣಿಸಿಕೊಂಡಿದೆ. ವಯನಾಡಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಕ್ಸಲರನ್ನು ಬೆನ್ನಟ್ಟಿದ ಪೊಲೀಸರು ಕರ್ನಾಟಕ ಮೂಲದ ಶ್ರೀಮತಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಉಳಿದ ಇಬ್ಬರು ತಪ್ಪಿಸಿಕೊಂಡಿದ್ದರು. ಇವರಲ್ಲದೆ ಇನ್ನೂ ಹಲವರು ಮಂದಿ ಈ ಭಾಗದಲ್ಲಿ ಚಿಗುರಿಕೊಂಡಿರಬಹುದು ಎಂಬ ಸಂಶಯ ಪೊಲೀಸರಿಗೆ ಇದೆ. ಹೀಗಾಗಿ ಕೂಂಬಿಂಗ್‌ ಕಾರ್ಯಾಚರಣೆ (Combing operation) ಮುಂದುವರಿಸಿದೆ. ಕೇರಳ ಪೊಲೀಸರ ಕಾರ್ಯಾಚರಣೆಗೆ ಹೆದರಿ ಈ ನಕ್ಸಲರು ಕರ್ನಾಟಕ ಪ್ರವೇಶ ಮಾಡುವ ಅಪಾಯ ಇರುವುದರಿಂದ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ (Karnataka -Kearal Border) ಕಟ್ಟೆಚ್ಚರ ವಹಿಸಲಾಗಿದೆ.

ಕೊಡಗು ಭಾಗದಲ್ಲಿರುವ ಕರ್ನಾಟಕ-ಕೇರಳ ಗಡಿ ಭಾಗವಾದ ಕುಟ್ಟ ಪ್ರದೇಶಕ್ಕೆ ಕೊಡಗು ಎಸ್ಪಿ ರಾಮರಾಜನ್ (Kodagu SP Ramarajan) ಭೇಟಿ ನೀಡಿದ್ದು, ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಡಗಿನಲ್ಲಿ ನಕ್ಸಲ್ ಚಟುವಟಿಕೆ ಇಲ್ಲವಾದರೂ ಕೇರಳ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನ ಗಡಿಭಾಗ ಕುಟ್ಟ, ಬಿರುನಾಣಿ, ತೆರಾಲು ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ‌.

ಮುಂಜಾಗ್ರತಾ ಕ್ರಮವಾಗಿ ಗಡಿಭಾಗದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಕುಟ್ಟ ಗಡಿಯ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ.

ದಿನದ 24 ಗಂಟೆ ಪೊಲೀಸರು ಕರ್ತವ್ಯದಲ್ಲಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡುಬಂದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಪೊಲೀಸರಿಗೆ ಎಸ್.ಪಿ. ರಾಮರಾಜನ್ ನಿರ್ದೇಶನ ನೀಡಿದ್ದಾರೆ. ಕುಟ್ಟ ಭಾಗದಲ್ಲಿ ಎ.ಎನ್.ಎಫ್. ತಂಡ ಕಳೆದ ಹಲವು ಸಮಯದಿಂದ ಕೆಲಸ ನಿರ್ವಹಿಸುತ್ತಿದೆ. ಅಲ್ಲದೆ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ.

ಇದನ್ನೂ ಓದಿ : Chhattisgarh Naxal Attack : ನಕ್ಸಲ್‌ ದಾಳಿಯ ಮಾಸ್ಟರ್‌ಮೈಂಡ್‌ ಫೋಟೊ ಬಿಡುಗಡೆ

ವಯನಾಡಿನಲ್ಲಿ ಸಿಕ್ಕಿಬಿದ್ದ ಶೃಂಗೇರಿಯ ಶ್ರೀಮತಿ

ವಯನಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವಿನ ಚಕಮಕಿಯ ವೇಳೆ ಕರ್ನಾಟಕದ ಶ್ರೀಮತಿ ಅಲಿಯಾಸ್‌ ಉನ್ನಿಮಾಯಾ, ತಮಿಳುನಾಡಿನ ಚಂದ್ರು, ಅನೀಷ್‌ ಬಾಬು ಅಲಿಯಾಸ್‌ ತಂಪಿ ಅವರನ್ನು ಬಂಧಿಸಲಾಗಿತ್ತು. ಶ್ರೀಮತಿ ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಬೆಳಗೋಡಿನ ಕೂಡಿಗೆ ನಿವಾಸಿಯಾಗಿದ್ದಾಳೆ.

ಕೇರಳದ ವಯನಾಡಿನಲ್ಲಿ ಬಂಧಿತಳಾದ ಕರ್ನಾಟಕದ ಶ್ರೀಮತಿ

ಶ್ರೀಮತಿ 2007ಲ್ಲಿ ಮನೆ ಬಿಟ್ಟು ನಕ್ಸಲ್‌ ಗ್ರೂಪ್‌ ಸೇರಿಕೊಂಡಿದ್ದಳು. ಆಕೆಯ ವಿರುದ್ಧ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯಲ್ಲಿ ಸುಮಾರು 15 ಕೇಸುಗಳು ದಾಖಲಾಗಿವೆ. 2009ರಲ್ಲಿ ತನಿಕೋಡು ಚೆಕ್‌ಪೋಸ್ಟ್‌ ಧ್ವಂಸ ಪ್ರಕರಣ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾತೊಳ್ಳಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲೂ ಆಕೆ ಭಾಗಿಯಾಗಿದ್ದಾಳೆ.

ಶ್ರೀಮತಿ ಮತ್ತು ಚಂದ್ರು ಅವರನ್ನು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಶ್ರೀಮತಿ ಮೇಲಿನ ಕರ್ನಾಟಕದ ಪ್ರಕರಣಗಳು ಕೂಡಾ ವಿಚಾರಣೆಗೆ ಒಳಪಡಲಿವೆ.

Exit mobile version