ಬೆಂಗಳೂರು: ಕೊಡಗಿನಲ್ಲಿ ಮಳೆ ಹಾನಿಯಿಂದಾದ ಪ್ರದೇಶ ವೀಕ್ಷಣೆಗೆ ತೆರಳಿದ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ಕರೆ ನೀಡಿದ್ದ ಮಡಿಕೇರಿ ಚಲೋ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಆದರೆ ಇದರ ಹಿಂದೆ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ ನಡೆದು, ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶಿಸಿ ನಿರ್ಧಾರ ಮಾಡಲಾಗಿದೆ.
ಪ್ರಮುಖವಾಗಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದದ್ದು ಕಾಂಗ್ರೆಸ್ ಸಿಟ್ಟಿಗೆ ಕಾರಣವಾಗಿತ್ತು. ಮೊಟ್ಟೆ ಎಸೆದಿದ್ದು ತಾನೇ ಎಂದು ಒಪ್ಪಿಕೊಂಡ ಸಂಪತ್ ಎಂಬವರು ಬಿಜೆಪಿ ಕಾರ್ಯಕರ್ತನೋ ಅಥವಾ ಕಾಂಗ್ರೆಸ್ ಕಾರ್ಯಕರ್ತನೊ ಎಂಬ ಚರ್ಚೆಗಳು ಇನ್ನೂ ನಡೆಯುತ್ತಲೇ ಇವೆ.
ತಾವು ವಿಪಕ್ಷ ನಾಯಕ, ಶ್ಯಾಡೋ ಸಿಎಂ ಇದ್ದಂತೆ. ನಾನು ಪ್ರದೇಶ ವೀಕ್ಷಣೆಗೆ ತೆರಳಿದಾಗ ಸರ್ಕಾರ ಭದ್ರತೆ ನೀಡದೆ ಪೊಲೀಸರ ಕೈಕಟ್ಟಿಹಾಕಿದೆ ಎಂದು ಅಬ್ಬರಿಸಿದ್ದ ಸಿದ್ದರಾಮಯ್ಯ, ಮಡಿಕೇರಿಗೆ ಮತ್ತೆ ಆಗಮಿಸುವುದಾಗಿ ಘೋಷಣೆ ಮಾಡಿದ್ದರು.
ಈ ಅಭಿಯಾನವನ್ನು ಹಮ್ಮಿಕೊಳ್ಳುವುದರಿಂದ ಪಕ್ಷಕ್ಕೆ ಕೊಡಗಿನಲ್ಲಿ ಲಾಭವಾಗುತ್ತದೆ ಎಂದು ಪ್ರಾರಂಭದಲ್ಲಿ ಅಂದಾಜಿಸಲಾಗಿತ್ತು. ನಡುವೆ ಒಮ್ಮೆ ಜೆಡಿಎಸ್ ಅಭ್ಯರ್ಥಿ ಎರಡನೇ ಸ್ಥಾನ ಗಳಿಸಿರುವುದು ಬಿಟ್ಟರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ನಡೆದಿದೆ. ಬಿಜೆಪಿ ಯಾವಾಗಲೂ ಮೊದಲ ಸ್ಥಾನದಲ್ಲಿದ್ದು, ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಹೇಗಾದರೂ ಮಾಡಿ ಮೊದಲ ಸ್ಥಾನಕ್ಕೆ ಏರಬಹುದು ಎಂಬ ಲೆಕ್ಕಾಚಾರದಲ್ಲಿ ಅಭಿಯಾನವನ್ನು ರೂಪಿಸಲಾಯಿತು.
ಸ್ಥಳೀಯವಾಗಿ ತಿರುಗುಬಾಣ
ಕಾಂಗ್ರೆಸ್ ಕರೆ ನೀಡಿದ ಮಡಿಕೇರಿ ಚಲೋ ಅಭಿಯಾನಕ್ಕೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿಕೊಳ್ಳಲು ನಿರ್ಧಾರ ಮಾಡಲಾಯಿತು. ಇದು ಕೊಡಗಿನಲ್ಲಿ ಕಾಂಗ್ರೆಸ್ ವಿರುದ್ಧ ವಾತಾವರಣ ನಿರ್ಮಿಸಲು ಕಾರಣವಾಯಿತು. ಕೊಡಗು ಚಲೊ ಎಂದರೆ ಇದು ದಂಡಯಾತ್ರೆಯೇ? ದಂಡೆತ್ತಿ ಬರುತ್ತಿರುವುದೇ? ಎಂದು ಬಿಜೆಪಿ ನಾಯಕರು ಪ್ರಶ್ನಿಸಿದರು. ಹೊರಗಿನವರು ಬಂದು ಕೊಡಗು ಸರಿಯಿಲ್ಲ, ಇಲ್ಲಿನ ಜನರು ಸರಿಯಿಲ್ಲ ಎಂದು ಹೇಳಿದರೆ ಕೊಡಗಿನವರಿಗೆ ಮಾಡುವ ಅವಮಾನ ಎಂಬ ಚರ್ಚೆಗಳು ಆರಂಭವಾದವು.
ಅದೇಕೊ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಲು ಪ್ರಾರಂಭವಾಯಿತು. 2008ರಿಂದ 20೧೮ರವರೆಗಿನ ಮೂರು ಚುನಾವಣೆಯಲ್ಲೂ ಬಿಜೆಪಿಯೇ ಜಯಿಸಿದೆ. ಕೊಡಗಿನಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಿವೆ. ಮಡಿಕೇರಿಯಲ್ಲಿ 2008ರಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಎರಡನೇ ಸ್ಥಾನ ಗಳಿಸಿದ್ದ ಅಭ್ಯರ್ಥಿ ನಡುವೆ 6,585 ಮತಗಳ ಅಂತರವಿದ್ದರೆ 2013ರಲ್ಲಿ 4,629 ಆಗಿತ್ತು. ಆದರೆ 2018ರಲ್ಲಿ ಇದ್ದಕ್ಕಿದ್ದಂತೆ 16,015ಕ್ಕೆ ಅಂತರ ಹೆಚ್ಚಾಯಿತು. ಅದೇ ರೀತಿ ವಿರಾಜಪೇಟೆಯಲ್ಲಿ 2008ರಲ್ಲಿ 15,073 ಇದ್ದ ಬಿಜೆಪಿ ಗೆಲುವಿನ ಅಂತರ 2013ರಲ್ಲಿ ಕೇವಲ 3,414ಕ್ಕೆ ಇಳಿಯಿತು. ಆದರೆ 2018ರಲ್ಲಿ 13,353ಕ್ಕೆ ಏರಿತು.
2018ರ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಟಿಪ್ಪು ಜಯಂತಿ ಕಾವು ಆರಂಭವಾಗಿದ್ದೇ ಕೊಡಗಿನಿಂದ. ಟಿಪ್ಪು ಜಯಂತಿ ಘೋಷಣೆಯಾಗಿದ್ದಕ್ಕೆ ಅತಿ ಹೆಚ್ಚು ಪ್ರತಿರೋಧ ಕೊಡಗಿನಲ್ಲಿ ವ್ಯಕ್ತವಾಗಿತ್ತು. ಅಲ್ಲಿನ ಹಿಂದು ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಸಾವಿನ ನಂತರವಂತೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೆಚ್ಚಳವಾಗಿತ್ತು. ಇದೇ ಕಾವು ನಂತರ ರಾಜ್ಯಾದ್ಯಂತ ಹರಡಿತು. ಟಿಪ್ಪು ವಿರೋಧಿ ಘೊಷಣೆಗಳು ಹಾಗೂ ಕಾರ್ಯಕ್ರಮಗಳು ಬೆಂಗಳೂರು, ಮೇಲುಕೋಟೆ, ದಕ್ಷಿಣ ಕನ್ನಡ, ಚಿತ್ರದುರ್ಗಕ್ಕೂ ಹಬ್ಬಿತು. ಇದು ಒಟ್ಟಾರೆ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಎಂದು ಬಿಂಬಿಸಲು ಕಾರಣವಾಯಿತು. ಇದೆಲ್ಲದರ ಪರಿಣಾಮ 2018ರ ಚುನಾವಣೆಯಲ್ಲಿ ಕೊಡಗಿನ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಗಣನೀಯವಾಗಿ ಏರಿಕೆ ಕಂಡಿತು.
ಇದನ್ನೂ ಓದಿ | ಮೊಟ್ಟೆ ಎಸೆದ ಸಂಪತ್‌ಗೆ ನಾನು ಜಾಮೀನು ಕೊಡಿಸಿಲ್ಲ; ಶಾಸಕ ಅಪ್ಪಚ್ಚು ರಂಜನ್
144 ನಿಷೇಧಾಜ್ಞೆ ಅನುಕೂಲ
ಕೊಡಗಿನಲ್ಲಿ ಮೊಟ್ಟೆ ಚರ್ಚೆ ನಡೆಯುತ್ತಿರುವಾಗಲೇ ದೇವಸ್ಥಾನಕ್ಕೆ ಸಿದ್ದರಾಮಯ್ಯ ಮಾಂಸ ಸೇವಿಸಿ ತೆರಳಿದ್ದರು ಎಂಬ ಮಾತು ಆಕ್ರೋಶವನ್ನು ಹೆಚ್ಚಿಸಿತು. ತಾವು ಮಾಂಸಾಹಾರವನ್ನು ತಯಾರಿಸಿಯೇ ಇರಲಿಲ್ಲ ಎಂದು ಕಾಂಗ್ರೆಸ್ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ತಿಳಿಸಿದರೆ, ತಾವು ಅಂದು ಮಾಂಸಾಹಾರ ಸೇವಿಸಿಲ್ಲ ಎಂದು ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದಕ್ಕೂ ಮೊದಲು ಅವರು, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಎಂದು ಪ್ರಶ್ನಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದ ಡ್ಯಾಮೇಜ್ ತಪ್ಪಿಸಲು ಈ ಸ್ಪಷ್ಟೀಕರಣಗಳು ಉಪಯೋಗಕ್ಕೆ ಬರುವಂತೆ ಕಾಣುತ್ತಿಲ್ಲ.
ಇದೆಲ್ಲದರ ನಡುವೆ ಬಿಜೆಪಿಯಿಂದಲೂ ಆಗಸ್ಟ್ 26ಕ್ಕೆ ಜನಜಾಗೃತಿ ಅಭಿಯಾನ ಘೋಷಿಸಲಾಯಿತು. ಈ ಕಾರಣವನ್ನು ಮುಂದಿಟ್ಟುಕೊಂಡು ಕೊಡಗು ಜಿಲ್ಲಾಡಳಿತ ಆಗಸ್ಟ್ 24 ರಿಂದ 26ರವರೆಗೆ ನಿಷೇಧಾಜ್ಞೆ ಘೋಷಿಸಿತು. ನಿಷೇಧಾಜ್ಞೆಯನ್ನೂ ಧಿಕ್ಕರಿಸಿ ಮಡಿಕೇರಿ ಚಲೊ ನಡೆಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದು ನೇರವಾಗಿ ಕಾಂಗ್ರೆಸ್ ಮೇಲೆಯೇ ಬರುತ್ತದೆ. ಮಡಿಕೇರಿ ಚಲೋ ಕುರಿತು ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಫೀಡ್‌ಬ್ಯಾಕ್ ಹಾಗೂ ರಾಜ್ಯಮಟ್ಟದಲ್ಲಿ ಆಗುತ್ತಿರುವ ಡ್ಯಾಮೇಜ್ ಸರಿಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಮಂಗಳವಾರ ಬೆಳಗ್ಗೆ ಈ ಕುರಿತು ಹೇಳಿಕೆ ನೀಡಿದ್ದ ಶಿವಕುಮಾರ್, ಅಭಿಯಾನ ನಡೆಸದಂತೆ ನಿಷೇಧಾಜ್ಞೆ ಹೇರಲಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದಿದ್ದರು.
ಶಿವಕುಮಾರ್ ಹೇಳಿಕೆ ನೀಡಿದ ಎರಡು ಗಂಟೆ ಅವಧಿಯಲ್ಲಿ ತುರ್ತು ಸುದ್ದಿಗೋಷ್ಠಿ ಆಹ್ವಾನಿಸಿದ ಸಿದ್ದರಾಮಯ್ಯ, ಮಡಿಕೇರಿ ಚಲೋವನ್ನು ರದ್ದುಪಡಿಸಲಾಗಿದೆ ಎಂದು ಘೋಷಣೆ ಮಾಡಿದರು. ಈ ಮೂಲಕ, ಕೊಡಗಿನಲ್ಲಿ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುವುದನ್ನು ತಪ್ಪಿಸಲು ಹಾಗೂ ಇದರ ಪ್ರಭಾವ ರಾಜ್ಯದ ಇತರೆಡೆಗೆ ಹರಡದಂತೆ ತಡೆಯಲು ಕಾಂಗ್ರೆಸ್ ಮುಂದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ | ಸೆಕ್ಷನ್ 144: ಮಡಿಕೇರಿ ಚಲೋ ರದ್ದು ಎಂದು ಘೋಷಿಸಿದ ಸಿದ್ದರಾಮಯ್ಯ