Site icon Vistara News

Road Accident : ಅಪಘಾತದಲ್ಲಿ ಯುವಕ ಸಾವು; ಡಿಕ್ಕಿ ಹೊಡೆದ ಸವಾರ ಪಶ್ಚಾತ್ತಾಪದಿಂದ ಆತ್ಮಹತ್ಯೆ

Road Accident death kodagu news

ಮಡಿಕೇರಿ: ಸಾಮಾನ್ಯವಾಗಿ ಅಪಘಾತಗಳು (Road Accident) ನಡೆದಾಗ ಇನ್ನೊಬ್ಬರ ಮೇಲೆ ಆರೋಪ ಹೊರಿಸಿ ತಾವೇ ಸರಿ ಎಂದು ವಾದಿಸುವವರು ಹೆಚ್ಚು. ಆದರೆ, ಇಲ್ಲೊಬ್ಬರು ತನ್ನಿಂದಾದ ಪ್ರಮಾದದಿಂದ ಯುವಕನೊಬ್ಬನ ಬಾಳು ಹಾಳಾಯಿತಲ್ಲ ಎಂಬ ಪಶ್ಚಾತ್ತಾಪದಿಂದ ತಾವೇ ಪ್ರಾಣ ಕಳೆದುಕೊಂಡಿದ್ದಾರೆ (Man ends life after accident). ದುರಂತವೆಂದರೆ, ಈ ಅಪಘಾತದಲ್ಲಿ ಗಾಯಗೊಂಡ ಯುವಕನೂ ಮೃತಪಟ್ಟಿದ್ದಾನೆ (Young man dies in Accident). ಅಲ್ಲಿಗೆ ಒಂದು ಅಪಘಾತ ಇಬ್ಬರನ್ನು ಬಲಿ ಪಡೆದಂತಾಗಿದೆ. ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ.

ಅಪಘಾತದ ದೃಶ್ಯ

ಶುಕ್ರವಾರ ಮಡಿಕೇರಿಯ (Madikeri news) ಚೈನ್‌ ಗೇಟ್‌ ಬಳಿ ಒಂದು ಅಪಘಾತ ನಡೆದಿತ್ತು. ವಿದ್ಯಾರ್ಥಿಯೊಬ್ಬ ಬೈಕ್‌ನಲ್ಲಿ ಬರುತ್ತಿದ್ದ. ಮೂರು ರಸ್ತೆ ಸೇರುವಲ್ಲಿ ಸವಾರರೊಬ್ಬರು ಸ್ಕೂಟಿಯಲ್ಲಿ ಬಂದರು. ಆಗ ಸ್ಕೂಟಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ರಸ್ತೆಗೆ ಬಿದ್ದ. ಅಷ್ಟೇ ಹೊತ್ತಿಗೆ ಒಂದು ಲಾರಿ ಆತನ ಪಕ್ಕದಲ್ಲೇ ಹಾದು ಹೋಗಿದೆ. ರಸ್ತೆಗೆ ತಲೆ ಬಡಿದ ಹೊಡೆತ ಮತ್ತು ಲಾರಿಗೂ ದೇಹ ತಾಗಿದ್ದರಿಂದ ಆತ ತೀವ್ರವಾಗಿ ಗಾಯಗೊಂಡ. ಆತನನ್ನು ಮೊದಲು ಮಡಿಕೇರಿ ಬಳಿಕ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆತನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಲಾಯಿತು.

ಇತ್ತ ಡಿಕ್ಕಿ ಹೊಡೆದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಿ ಆ ಹುಡುಗನಿಗೆ ಏನಾಗಿದೆ ಎಂದು ಕೇಳಿಕೊಂಡಿದ್ದಾರೆ. ಆ ಯುವಕನಿಗೆ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಕೇಳುತ್ತಲೇ ಅವರಿಗೆ ಪಶ್ಚಾತ್ತಾಪವಾಗಿದೆ. ನನ್ನಿಂದಾಗಿ ಒಬ್ಬ ಯುವಕನ ಬಾಳು ಹೀಗಾಯಿತಲ್ಲ ಎಂದು ತೀವ್ರವಾಗಿ ನೊಂದ ಅವರು ಬದುಕನ್ನೇ ಅಂತ್ಯ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇತ್ತ ಅದೇ ಹೊತ್ತಿಗೆ ಮೆದುಳು ನಿಷ್ಕ್ರಿಯಗೊಂಡು ಜೀವಚ್ಛವವಾಗಿದ್ದ ಹುಡುಗನೂ ಕೊನೆಯುಸಿರೆಳೆದಿದ್ದಾನೆ.

ಹೀಗೆ ರಸ್ತೆ ಅಪಘಾತಕ್ಕೆ ನಾನೇ ಕಾರಣ, ಯುವಕನ ಸಂಕಷ್ಟಕ್ಕೆ ಕಾರಣನಾದೆನಲ್ಲ ಎಂದು ಪಶ್ಚಾತ್ತಾಪದಿಂದ ನೊಂದು ಪ್ರಾಣ ಕಳೆದುಕೊಂಡವರ ಹೆಸರು ಹೆಚ್.ಡಿ.ತಮ್ಮಯ್ಯ. ವಯಸ್ಸು 57. ಅವರ ಸ್ಕೂಟರ್‌ ಡಿಕ್ಕಿ ಹೊಡೆದು ‌ ರಸ್ತೆಗೆ ಬಿದ್ದು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟವನು ವಿದ್ಯಾರ್ಥಿ ಧನಲ್ ಸುಬ್ಬಯ್ಯ (24).

ಶುಕ್ರವಾರ ಸಂಜೆಯ ಹೊತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿ ಧನಲ್‌ ಸುಬ್ಬಯ್ಯ ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದರು. ಮಡಿಕೇರಿಯ ಚೈನ್‌ ಗೇಟ್‌ ಬಳಿ ಬರುತ್ತಿದ್ದಾಗ ಇನ್ನೊಂದು ರಸ್ತೆಯಿಂದ ಬಂದ ಹೆಚ್‌ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಧನಲ್‌ ರಸ್ತೆಗೆ ಬಿದ್ದಿದ್ದಾರೆ. ಅಷ್ಟು ಹೊತ್ತಿಗೆ ಎದುರಿನಿಂದ ಬಂದ ಲಾರಿ ಕೂಡಾ ಅವರಿಗೆ ಬಡಿದಿದೆ. ತೀವ್ರ ಪ್ರಮಾಣದ ಗಾಯಗಳಾಗಿವೆ. ಈ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : Elephant Attack : ಟಾಟಾ ಎಸ್ಟೇಟ್‌ ಬಳಿ ಮತ್ತೆ ಒಂಟಿ ಸಲಗ ದಾಂಧಲೆ, ಹುಷಾರ್‌ ಎಂದ ಅರಣ್ಯ ಇಲಾಖೆ

ಇತ್ತ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತನ ಸ್ಥಿತಿ ಜಿಂತಾಜನಕವಾಗಿತ್ತು. ಮತ್ತೊಂದು ಕಡೆ ತಮ್ಮಯ್ಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ ಅವನ ಮನಸ್ಸಿನಲ್ಲಿ ಅಪಘಾತದ ವಿಚಾರವೇ ಕೊರೆಯುತ್ತಿತ್ತು. ಅಪಘಾತಕ್ಕೆ ನಾನೇ ಕಾರಣ, ಹುಡುಗನ ದುರಂತಕ್ಕೆ ಕಾರಣವಾದೆ ಎಂದೆಲ್ಲ ಯೋಚಿಸಿದ ಅವರು ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ನೇಣಿಗೆ ಕೊರಳೊಡ್ಡಿದರು. ಇತ್ತ ಅದೇ ಹೊತ್ತಿಗೆ ಗಾಯಗಳಿಂದ ಜರ್ಜರಿತವಾಗಿದ್ದ ಧನಲ್‌ ಕೂಡಾ ಪ್ರಾಣ ಕಳೆದುಕೊಂಡಿದ್ದ.

ಮಡಿಕೇರಿ ಸಮೀಪದ ಹೆರವನಾಡಿನ ನಿವಾಸಿಯಾಗಿರುವ ಎಚ್.ಡಿ.ತಮ್ಮಯ್ಯ ಅವರು ವೃತ್ತಿಯಲ್ಲಿ ಕಾರ್ಮಿಕರಾಗಿದ್ದಾರೆ. ಎಲ್ಲರಿಗೂ ಬೇಕಾದವರಾಗಿ ಜನಾನುರಾಗಿಯಾಗಿದ್ದರು. ಒಬ್ಬ ಪುತ್ರನನ್ನು ಸಿಆರ್‌ಪಿಎಫ್‌ ಯೋಧನಾಗಿ ಮಾಡಿದ್ದಾರೆ. ಅಂಥ ತಮ್ಮಯ್ಯ ಅವರಿಗೆ ಮಗನ ವಯಸ್ಸಿನ ಹುಡುಗನ ಬದುಕಿಗೇ ಕೊಳ್ಳಿ ಇಟ್ಟೆನಲ್ಲಾ ಎನ್ನುವ ಪಶ್ಚಾತ್ತಾಪದ ಉರಿ ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿತು.

ಅಪಘಾತ ನಡೆದಿದ್ದು ಹೀಗೆ.. ಇಲ್ಲಿದೆ ವಿಡಿಯೊ

Exit mobile version