ಕೊಡಗು: ಯುವಕನೊಬ್ಬ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ (Murder Case) ಮಾಡಿದ್ದ. ಈ ಘಟನೆಯಿಂದ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಮೀನಾ ಎಂಬಾಕೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಆರೋಪಿ ಪ್ರಕಾಶ್ ತನ್ನ ಮನೆಯ ಸಮೀಪದಲ್ಲೆ ನೇಣಿಗೆ (Self Harming) ಶರಣಾಗಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಲದಲ್ಲಿ ಘಟನೆ ನಡೆದಿದೆ.
ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಪ್ರಕಾಶ್ ರುಂಡ ಸಮೇತ ನಾಪತ್ತೆಯಾಗಿದ್ದ. ಆದರೆ ಶುಕ್ರವಾರ ಆತನ ಮನೆಯ ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ. ಆದರೆ ಪ್ರಕಾಶ್ ತೆಗೆದುಕೊಂಡು ಹೋಗಿದ್ದ ಬಾಲಕಿಯ ರುಂಡ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಜತೆಗೆ ಆರೋಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್ ಹಾಕಿ ಎಳೆಯುವಾಗ ಸಾವು
ಏನಿದು ಘಟನೆ?
ಮೀನಾ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಹೀಗಾಗಿ ಗುರುವಾರ ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿತ್ತು. ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ಪ್ರಕಾಶ್ ಮೀನಾಳನ್ನು ಎಳೆದೊಯ್ದು ಕತ್ತು ಕೊಯ್ದಿದ್ದ. ನಂತರ ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದ. ಭೀಕರ ಘಟನೆಯು ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿತ್ತು.
ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಪ್ರಕಾಶ್ ಕೊಲೆ ಮಾಡಿದ್ದ.
ಬಾಲಕಿಯನ್ನು ಆರೋಪಿ ಪ್ರಕಾಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದ.
ಎಸ್ಎಸ್ಎಲ್ಸಿ ಪಾಸಾಗಿದ್ದ ಬಾಲಕಿ
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಭಯಾನಕವಾಗಿ ಕೊಲೆಯಾಗಿದ್ದಳು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ