ಕೊಡಗು: ಆಟೋ ಚಾಲಕನ ಸಾವಿನ ಸುತ್ತ ಅನುಮಾನದ ಹುತ್ತ (Suspicious Death) ಮೂಡಿದೆ. ಇದು ಆತ್ಮಹತ್ಯೆಯಲ್ಲ ಹಲ್ಲೆ ನಡೆಸಿ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಹೊರವಲಯದ ಬೆಟ್ಟತ್ತೂರು ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಟ್ಟತ್ತೂರು ಗ್ರಾಮದ ಕೊಂಪುಳ್ಳೀರಾ ಕರುಂಬಯ್ಯ ಎಂಬುವವರ ಪುತ್ರ 27 ವರ್ಷದ ವಿನೋದ್ ಅಲಿಯಾಸ್ ದೇವಿಪ್ರಸಾದ್ ಕಳೆದ ಹಲವು ವರ್ಷಗಳಿಂದ ಮದೆನಾಡು ಗ್ರಾಮದಲ್ಲಿ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಆಗ ತಾನೆ ಡೆಲಿವರಿಯಾಗಿದ್ದ ತನ್ನ ಅಕ್ಕನನ್ನು ಆಸ್ಪತ್ರೆಯಿಂದ ಮನೆಗೆ ಬಿಟ್ಟು ಬಂದಿದ್ದ. ಮಗುವಿಗೆ ಬೇಕಾದ ಸಾಬೂನು ಇತರೆ ವಸ್ತುಗಳು ತರಲೆಂದು ಚೇರಂಬಾಣೆ ಎಂಬ ಊರಿಗೆ ಹೋದವನು, ಆಟೋ ಶೆಡ್‌ನಲ್ಲಿ ಹೆಣವಾಗಿದ್ದ.
ಇದನ್ನೂ ಓದಿ: Morarji Desai School : ವಸತಿ ಶಾಲಾ ಶಿಕ್ಷಕನ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ವಿಡಿಯೊ, ಫೋಟೊಗಳು ಪತ್ತೆ!
ಈ ಸಾವನ್ನು ಕೊಲೆ ಎಂದು ಊರಿನವರು ಹಾಗೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಆತನ ಮುಖದಲ್ಲಿದ್ದ ರಕ್ತದ ಕಲೆಗಳು ಹಾಗೂ ಅನುಮಾನಾಸ್ಪದ ರೀತಿಯಲ್ಲಿ ನೇತಾಡುತ್ತಿದ್ದ ವಿನೋದ್‌ನ ಶವ. ಆಟೋ ಚಾಲಕ ದೇವಿಪ್ರಸಾದ್ ಹಾಗೂ ಊರಿನ ಕೆಲ ಯುವಕರ ನಡುವೆ ವೈ ಮನಸು ಇತ್ತೆಂಬ ಆರೋಪ ಇದ್ದು, ಟೌನ್‌ಗೆ ಹೋಗಿ ಬರುವಾಗ ವಿನೋದ್‌ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಕೊಂದು ಹಾಕಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಹಲ್ಲೆ ನಡೆಸಿದ ಕೆಲ ಯುವಕರು ವಿನೋದ್‌ನ ಸಂಬಂಧಿಕರ ಬಳಿ ನಾವು ಹಲ್ಲೆ ನಡೆಸಿದ್ದವಿ ಅಂತನೂ ಹೇಳಿದ್ದಾರಂತೆ. ಏನೆ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳುವ ಯುವಕ ಅಲ್ಲ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಈ ಪ್ರಕರಣ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಾಗಿದೆ. ಈಗಾಗಲೇ ಕೆಲ ಯುವಕರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಊರಿನ ಮಂದಿ ಹಾಗೂ ಗ್ರಾಮಸ್ಥರು ಇದು ಒಂದು ಕೊಲೆ, ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅಕ್ಕನ ಮಗುವಿಗೆ ಸೋಪು ತರಲೆಂದು ಹೋದ ಯುವಕ ತನ್ನದೇ ಆಟೋ ಶೆಡ್‌ನಲ್ಲಿ ಅನುಮಾನಸ್ಪಾದವಾಗಿ ಹೆಣವಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ