Site icon Vistara News

Attention divert : ಹಣ ಬಿದ್ದಿದೆ ಎಂದು ಯಾಮಾರಿಸಿ 2 ಲಕ್ಷ ರೂ. ಲಪಟಾಯಿಸಿದ ಖದೀಮರು!

Attention divert case in Kodagu

ಮಡಿಕೇರಿ: ಬ್ಯಾಂಕಿಗೆ ಲೋನ್ ಹಣ ಕಟ್ಟಲು ಚಿನ್ನ ಅಡವಿಟ್ಟು ಕೊಂಡೊಯ್ಯುತ್ತಿದ್ದ ಎರಡು ಲಕ್ಷ ರೂ. ಹಣವನ್ನು ಖದೀಮರು ಗಮನ ಬೇರೆಡೆ ಸೆಳೆದು (Attention divert) ಲಪಟಾಯಿಸಿದ (Money Snatching) ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ (Kushalagara town) ನಡೆದಿದೆ. ಮೂಲತಃ ಪಿರಿಯಾಪಟ್ಟಣ ತಾಲೂಕು ಬೆಣಗಾಲ್ ವ್ಯಾಪ್ತಿಯ ಆನಂದನಗರದ ನಿವಾಸಿ ಓಹಿಲೇಶ್ (52) ಎಂಬವರು ಹಣ ಕಳೆದುಕೊಂಡ ವ್ಯಕ್ತಿ.

ಓಹಿಲೇಶ್‌ ಅವರು ಬ್ಯಾಂಕ್‌ನಿಂದ ಲೋನ್‌ ಪಡೆದಿದ್ದರು. ಅದರ ಕಂತು ಪಾವತಿಸಲು ಆಗದೆ ಕಷ್ಟಪಟ್ಟಿದ್ದರು. ಕೊನೆಗೆ ಬ್ಯಾಂಕ್‌ನಿಂದ ಒತ್ತಡ ಬಂದಾಗ ಹೇಗಾದರೂ ಮಾಡಿ ಹಣ ಹೊಂದಿಸುವ ಅನಿವಾರ್ಯತೆ ಎದುರಾಗಿತ್ತು. ಆಗ ಅವರು ಪತ್ನಿಯ ಚಿನ್ನವನ್ನು ಅಡವಿಟ್ಟು ಬ್ಯಾಂಕ್‌ ಲೋನ್‌ ಪಾವತಿಸಲು ಮುಂದಾದರು.

ಕುಶಾಲನಗರಕ್ಕೆ ಹೋಗಿ ಅಲ್ಲಿ ಒಂದು ಕಡೆ ಚಿನ್ನವನ್ನು ಅಡವಿಟ್ಟು ಓಹಿಲೇಶ್‌ ಅವರು ತಮ್ಮ ಆತ್ಮೀಯರೊಬ್ಬರನ್ನು ಬಸ್‌ ನಿಲ್ದಾಣಕ್ಕೆ ಡ್ರಾಪ್‌ ಮಾಡಿದ್ದರು. ಅಲ್ಲಿಂದ ಅದೇ ಬೈಕ್‌ನಲ್ಲಿ ಮುಂದೆ ಸಾಗಿದ್ದರು. ಈ ವೇಳೆ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬಳಿ ನಿಂತಿದ್ದ ಕೆಲವರು ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದೆ ಎಂದು ಹೇಳಿದರು.

ಆಗಷ್ಟೇ ಹಣ ಹಿಡಿದುಕೊಂಡು ಬಂದಿದ್ದ ಓಹಿಲೇಶ್‌ ಹಣ ಬಿದ್ದಿರಬಹುದು ಎಂಬ ಗುಮಾನಿಯಲ್ಲಿ ಬೈಕ್‌ ನಿಲ್ಲಿಸಿ ಕೆಳಗಿಳಿದರು. ಅವರು ಹೇಳಿದಂತೆ ಹಣವೂ ಬಿದ್ದಿತ್ತು. ಆ ಹಣವನ್ನು ಸಂಗ್ರಹಿಸಿ ಮರಳಿ ಬೈಕ್‌ ಬಳಿ ಬರುವಷ್ಟು ಹೊತ್ತಿಗೆ ಅವರ ಬೈಕ್‌ನಲ್ಲಿದ್ದ ಹಣ ಕಾಣೆಯಾಗಿತ್ತು. ಅವರು ಹಣವನ್ನು ಬೈಕ್‌ನ ಪರ್ಸ್‌ನಲ್ಲಿಟ್ಟಿದ್ದರು. ವಂಚಕರು ಪಾಸ್ ಬುಕ್ ಸಹಿತ 2 ಲಕ್ಷ 9 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದರು.

ಖದೀಮರು ಬೈಕ್ ನಿಂದ ಹಣ ಎಗರಿಸುವ ದೃಶ್ಯ ಸಮೀಪದ ಖಾಸಗಿ ಹೋಟೆಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಖದೀಮರನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಭಾವಿಸಲಾಗಿದೆ.

ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದು, ನಾಲ್ವರ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಖದೀಮರ ಪತ್ತೆಗೆ ತಂಡ ರಚಿಸಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಹಣದ ವ್ಯವಹಾರ ನಡೆಸುವಾಗ, ಹಣ ಹಿಡಿದುಕೊಂಡು ಹೋಗುವಾಗ ಬಹಳ ಎಚ್ಚರವಾಗಿರಬೇಕು ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ. ಈ ಜಾಲ‌‌ ಮೈಸೂರು, ಮಂಗಳೂರು ಭಾಗದಲ್ಲೂ ಹರಡಿರುವುದಾಗಿ ಎಸ್ಪಿ‌ ತಿಳಿಸಿದರು.

ಇದನ್ನೂ ಓದಿ: Accidental death : ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯ ತಲೆಯೇ ಕಟ್‌

ಎಲ್ಲ ಬಲ್ಲವರೇ ಹೊಂಚು ಹಾಕಿದರೇ?

ಈ ಕೃತ್ಯವನ್ನು ಯಾರು ಮಾಡಿದರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಓಹಿಲೇಶ್‌ ಅವರ ಚಲನವಲನಗಳನ್ನು ಸರಿಯಾಗಿ ಗಮನಿಸಿಯೇ ಈ ವಂಚಕರು ತಮ್ಮ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಪಷ್ಟ. ಅವರು ಚಿನ್ನ ಅಡವಿಟ್ಟು ಹಣ ಪಡೆದಿರುವುದು, ಅದನ್ನು ಬೈಕ್‌ನ ಎದುರಿನ ಪರ್ಸ್‌ನಲ್ಲಿಟ್ಟಿದ್ದು, ಬಸ್‌ ಸ್ಟಾಂಡ್‌ಗೆ ಹೋಗಿ ಮರಳಿದ್ದು, ಬರುವ ದಾರಿಯ ಬಗ್ಗೆ ಸ್ಪಷ್ಟತೆ ಇದ್ದವರೇ ಈ ಕೃತ್ಯ ನಡೆಸಿರುವುದು ಖಚಿತವಾಗಿದೆ.

ಖದೀಮರು ಕರಾಮತ್ತು ನಡೆಸುವ ವಿಡಿಯೊ ಇಲ್ಲಿದೆ

Exit mobile version