Site icon Vistara News

Hindu Girls kidnapped : ಕೊಡಗಿನಿಂದ ಇಬ್ಬರು ಹಿಂದು ಹುಡುಗಿಯರ ಸಿನಿಮೀಯ ಕಿಡ್ನಾಪ್‌; ನಾಲ್ವರು ಮುಸ್ಲಿಂ ಯುವಕರು ಅರೆಸ್ಟ್‌

Kidnap Case in Madikeri

ಮಡಿಕೇರಿ: ನಾಲ್ವರು ಮುಸ್ಲಿಮ್‌ ಯುವಕರು (Four Muslim youths) ಇಬ್ಬರು ಹಿಂದು ಹುಡುಗಿಯರನ್ನು (Hindu girls Kidnapped) ಕಾರಿನಲ್ಲಿ ಅಪಹರಿಸಿದ ಘಟನೆಯೊಂದು ಕೊಡಗಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಹುಡುಗಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಈ ನಡುವೆ ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಹರಣಕ್ಕೆ ಒಳಗಾದ ಹುಡುಗಿಯರು ಮಡಿಕೇರಿ ಗ್ರಾಮಾಂತರ ಭಾಗದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಪಹರಣ ಮಾಡಿದ ಯುವಕರನ್ನು ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಇವರು ಮಡಿಕೇರಿಯಲ್ಲಿ ಪೇಂಟಿಂಗ್‌ ಕೆಲಸ ಮಾಡುತ್ತಿದ್ದವರು. ಇವರನ್ನು ಪೊಲೀಸರು ಮೈಸೂರಿನ ಮಂಡಿ ಮೊಹಲ್ಲಾದಿಂದ ಬಂಧಿಸಿದ್ದಾರೆ. ಈ ನಡುವೆ ಅಪಹರಣಕ್ಕೆ ಒಳಗಾದ ಒಬ್ಬ ಯುವತಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು ಪ್ರಕರಣಕ್ಕೆ ಇನ್ನೊಂದು ಗಂಭೀರ ತಿರುವು ನೀಡಿದೆ.

ಅಪಹರಣ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌

ಈ ಅಪಹರಣ ನಡೆದಿರುವುದು ಗುರುವಾರ ಬೆಳಗ್ಗೆ. ಮಧ್ಯಾಹ್ನದ ಹೊತ್ತಿಗೆ ಹುಡುಗಿಯರು ಮನೆಗೆ ಬಂದೂ ಆಗಿದೆ. ಆರೋಪಿಗಳನ್ನು ಬಂಧಿಸಿಯೂ ಆಗಿದೆ. ಅಂದರೆ ಈ ಪ್ರಕರಣದಲ್ಲಿ ಕ್ಷಣಕ್ಷಣವೂ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಂಭವಿಸಿದೆ.

ಮಡಿಕೇರಿ ಹೊರವಲಯದ ಇಬ್ಬರು ಪಿಯು ವಿದ್ಯಾರ್ಥಿನಿಯರು ಎಂದಿನಂತೆ ಮಡಿಕೇರಿ ಗ್ರಾಮಾಂತರ ಭಾಗದ ಒಂದು ಸರ್ಕಾರಿ ಕಾಲೇಜಿಗೆ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಗೆ ಹರಡಿತು. ಕಾಲೇಜಿಗೆ ಹೋಗುವ ದಾರಿಯಲ್ಲೇ ಘಟನೆ ನಡೆದಿದ್ದರಿಂದ ಹಲವು ಮಂದಿ ಹುಡುಗಿಯರು ಕಾರಿನೊಳಗೆ ಹೋಗುವುದನ್ನು ನೋಡಿದ್ದಾರೆ. ಮತ್ತು ಹುಡುಗಿಯರೂ ಪರಿಚಯದವರೇ ಆಗಿದ್ದರಿಂದ ತಕ್ಷಣವೇ ಅದು ಸೌಂಡ್‌ ಆಯಿತು.

Madikeri kidnap case hospital

ವಿದ್ಯಾರ್ಥಿಗಳು ಕೂಡಲೇ ಕಾಲೇಜಿನ ಶಿಕ್ಷಕರಿಗೆ ತಿಳಿಸಿದರು. ಕೂಡಲೇ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಎಲ್ಲ ಕಡೆ ಹುಡುಕಾಟಕ್ಕೆ ಸೂತ್ರ ಹೆಣೆದರು. ಎಲ್ಲ ಕಡೆ ತಪಾಸಣೆಗೆ ಸೂಚಿಸಿದರು. ಮಡಿಕೇರಿಯಲ್ಲಿ ಈ ರೀತಿ ಅಲ್ಲೋಲಕಲ್ಲೋಲ ಸಂಭವಿಸುತ್ತಿರುವ ಸಂಗತಿ ಕಾರಿನಲ್ಲಿ ಹೋಗುತ್ತಿದ್ದ ಯುವಕರಿಗೆ ವಾಟ್ಸ್‌ ಆಪ್‌ ಮೂಲಕ ತಿಳಿಯಿತು.

ಅಷ್ಟು ಹೊತ್ತಿಗೆ ಅವರ ಕಾರು ಕುಶಾಲ ನಗರ ದಾಟಿ ಮೈಸೂರು ಕಡೆಗೆ ವೇಗವಾಗಿ ಸಾಗುತ್ತಿತ್ತು. ಈ ಅಲ್ಲೋಕಕಲ್ಲೋಲಕ್ಕೆ ಬೆದರಿದ ಮುಸ್ಲಿಂ ಯುವಕರು ಇಬ್ಬರೂ ಹುಡುಗಿಯರನ್ನು ಕಾರಿನಿಂದ ಇಳಿಸಿದ್ದಾರೆ. ಯುವತಿಯರು ಕುಶಾಲನಗರ ಸಮೀಪದ ರಂಗಸಮುದ್ರದಿಂದ ಬಸ್‌ ಹತ್ತಿ ಮಡಿಕೇರಿಗೆ ಬಂದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.

ಈ ನಡುವೆ ಪೊಲೀಸರು ತಮ್ಮ ಹುಡುಕಾಟದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೈಸೂರು ಪೊಲೀಸರು ಮಂಡಿ ಮೊಹಲ್ಲಾಕ್ಕೆ ದಾಳಿ ಮಾಡಿ ನಾಲ್ಕು ಮಂದಿಯನ್ನು ಅರೆಸ್ಟ್‌ ಮಾಡಿದ್ದಾರೆ. ಯುವಕರ ಮೊಬೈಲ್‌ ಟ್ರ್ಯಾಕ್‌ ಮಾಡಿ ಅವರನ್ನು ಅಲ್ಲೇ ಹಿಡಿದು ಹಾಕಲಾಗಿದೆ.

ಇದೀಗ ನಾಲ್ವರು ಆರೋಪಿಗಳನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ.

ಆರೋಪಿಗಳ ದೈಹಿಕ ಪರೀಕ್ಷೆ ನಡೆಯುತ್ತಿರುವ ಮಡಿಕೇರಿ ಆಸ್ಪತ್ರೆ

ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ

ಈ ನಡುವೆ ಕುಶಾಲನಗರದಲ್ಲಿ ಕಾರಿನಿಂದ ಇಳಿದು ಬಸ್ಸಿನ ಮೂಲಕ ಮಡಿಕೇರಿಗೆ ಬಂದು ಅಲ್ಲಿಂದ ತಮ್ಮ ಮನೆಗೆ ಹೋಗಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಾಕೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ಘಟನೆಯಿಂದ ತನಗೆ ಅಪಮಾನವಾಗಿದೆ ಎಂದು ಬೇಸರ ಮಾಡಿಕೊಂಡ ಆಕೆ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾಳೆ. ಕೂಡಲೇ ವಿಷಯ ತಿಳಿದ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ.

ಮಡಿಕೇರಿಯಲ್ಲಿ ಹೆಚ್ಚುತ್ತಿರುವ ನಾಪತ್ತೆ, ಅಪಹರಣ

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ಯುವತಿಯರ ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಮಡಿಕೇರಿಯಿಂದ ನಾಪತ್ತೆಯಾಗಿದ್ದ ಬಾಲಕಿಯರಲ್ಲಿ ಒಬ್ಬಳು ಮಲ್ಪೆ ಕಡಲ ತೀರದಲ್ಲಿ ನೀರಿನ ಅಲೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಳು. ಮತ್ತೊಬ್ಬಳು ಬಚಾವಾಗಿದ್ದಳು. ಅದಕ್ಕಿಂತ ಹಿಂದೆ ನಾಲ್ವರು ಬಾಲಕಿಯರು ಕಾಣೆಯಾದ ಬಗ್ಗೆ ಪೊಲೀಸರೇ ಪ್ರಕಟಣೆ ನೀಡಿದ್ದರು. ಹೀಗೆ ನಾಪತ್ತೆಯಾಗುವ ಹುಡುಗಿಯರಲ್ಲಿ ಕೆಲವರು ಮರಳಿ ಬರುತ್ತಾರೆ, ಇನ್ನು ಕೆಲವರು ಬರುವುದೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರು ಮತ್ತು ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ಕಣ್ಮರೆಯಾಗುತ್ತಿದ್ದು, ಅವರನ್ನು ಆಮಿಷ ಒಡ್ಡಿ ನಾಪತ್ತೆ ಮಾಡುವವರು ಯಾರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Exit mobile version