ಹಾಸನ: ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು (MLA Shivalingegowda) ಮಂತ್ರಿ ಮಾಡದೆ ಇದ್ದಿದ್ದಕ್ಕೆ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swameeji) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಜತೆಗೆ ಮಾತು ಬಿಟ್ಟಿದ್ದರಾ? ಹೌದು ಎಂದು ಸ್ವತಃ ಸ್ವಾಮೀಜಿಗಳೇ ಹೇಳಿಕೊಂಡಿದ್ದಾರೆ. ಶಿವಲಿಂಗೇಗೌಡರನ್ನು ಮಂತ್ರಿ ಮಾಡದೆ ಇದ್ದ ಮೇಲೆ ನಿಮ್ಮಲ್ಲೇನು ಮಾತು ಎಂದು ನೇರವಾಗಿ ಹೇಳಿದ್ದಾಗಿ ಕೋಡಿ ಶ್ರೀಗಳು ತಮಾಷೆಯಾಗಿ ಹೇಳಿದರು.
ಕೃಷಿ ಸಚಿವ ಚೆಲುವರಾಯ ಸ್ವಾಮಿ (Cheluvaraya Swami) ಅವರು ಬುಧವಾರ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯ ಕೋಡಿ ಮಠಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದರು. ಅವರಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಸಾಥ್ ನೀಡಿದ್ದರು.
ಕೋಡಿ ಮಠದ ಶ್ರೀಗಳನ್ನು ನೋಡಿದ ಕೂಡಲೇ ನಮಿಸಿದ ಚೆಲುವರಾಯ ಸ್ವಾಮಿ ಅವರು, ʻʻನಾನು ಶಾಸಕನಾಗಿ, ಮಂತ್ರಿಯಾಗಿ ಬರಬೇಕು ಎಂದುಕೊಂಡಿದ್ದೆ, ಈಗ ಬಂದಿದ್ದೇನೆʼʼ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ಶಿವಲಿಂಗೇಗೌಡರನ್ನು ತೋರಿಸಿ ʻʻಈ ವೇಳೆ ಗೌಡ್ರುನು ನಿಮ್ಮ ಜೊತೆ ಸೇರಿಸಿಕೊಳ್ಳಿʼʼ ಎಂದರು.
ನೀವು ಆಶೀರ್ವಾದ ಮಾಡಿಲ್ಲ ಎಂದ ಚೆಲುವರಾಯ ಸ್ವಾಮಿ!
ಆಗ ಮರು ಪ್ರತಿಕ್ರಿಯೆ ನೀಡಿದ ಚೆಲುವರಾಯ ಸ್ವಾಮಿ ಅವರು, ʻʻಗೌಡ್ರನು ನಮ್ಮ ಜೊತೆ ಸೇರುಸ್ಕಂಡು ಮಂತ್ರಿನೇ ಮಾಡೋಣ ಅಂತಾ ಆಗಿತ್ತು. ಅದೇನೋ ಅದೃಷ್ಟ ನೀವು ಸರಿಯಾಗಿ ಆಶೀರ್ವಾದ ಮಾಡಿಲ್ಲʼʼ ಎಂದರು ಚೆಲುವರಾಯಸ್ವಾಮಿ.
ಅದಕ್ಕೆ ಸ್ವಾಮೀಜಿಗಳು ಪ್ರತಿಕ್ರಿಯಿಸಿ ʻʻಸಿದ್ದರಾಮಯ್ಯ ಅವರು ನಂಗೆ ಫೋನ್ ಮಾಡಿದ್ರು. ನಾನು ನಿಮ್ ಕಡೆ ಮಾತಾಡಲ್ಲ ಅಂದೆ. ಆಗ ಅವರು ಯಾಕೆ ಗುರುಗಳೇ ಅಂದ್ರು. ಆಗ ನಾನು- ಕೊಟ್ಟ ಮಾತಿಗೆ ತಪ್ಪಿದ್ದೀಯಾ, ಇನ್ ಏನಪ್ಪ ಮಾತನಾಡೋದು ಅಂದೆ. ಆಗ ಅವರು ನಾನು ಅವನನ್ನೇ ಶಿವಲಿಂಗೇಗೌರು) ಕರ್ಕಂಡು ಬರ್ತೀನಿ ಅಂದಿದ್ದೀನಿ- ಎಂದರು. ಇಬ್ಬರು ಒಂದು ಗಂಟೆ ಹೊತ್ತು ಮಾತನಾಡಿದೆವು. ಆಗ ಶಿವಲಿಂಗೇಗೌಡರನ್ನು ಮಂತ್ರಿ ಮಾಡೋಣ ಅಂದಿದ್ರುʼʼ ಎಂದು ಹೇಳಿದರು ಕೋಡಿಮಠ ಸ್ವಾಮೀಜಿ.
ಡಾ. ಸುಧಾಕರ್ ಹೆಸರು ಬಂದಿದ್ದರಿಂದ ಕೈ ಬಿಟ್ಟೋಯ್ತು
ಆಗ ಸಚಿವ ಚೆಲುವರಾಯ ಸ್ವಾಮಿ ಅವರು ಶಿವಲಿಂಗೇಗೌಡರಿಗೆ ಮಂತ್ರಿ ಸ್ಥಾನ ಬಿಟ್ಟು ಹೋಗಿದ್ದು ಯಾಕೆ ಎಂಬ ಬಗ್ಗೆ ವಿವರಣೆ ನೀಡಿದರು.
ʻʻಇಲ್ಲಾ ಶಿವಲಿಂಗೇಗೌಡರನ್ನು ಮಂತ್ರಿ ಮಾಡಬೇಕು ಅನ್ಕಂಡಿದ್ವಿ. ಲಿಂಗಾಯಿತರು ಹಾಗೂ ಡಾ.ಸುಧಾಕರ್ ಹೆಸರು ಬಂದಿದ್ದರಿಂದ ಕೈಬಿಟ್ಟೋಯ್ತು. ಮಂತ್ರಿ ಮಾಡಬಹುದಿತ್ತು ನಮ್ಮ ಪಾರ್ಟಿಲಿ ಎಲ್ಲಾ ಸೀನಿಯರ್ ಇದ್ದಾರೆ. ಡಾ.ಸುಧಾಕರ್‌ದು ಇರ್ಲಿಲ್ಲಾ ಅಂದಿದ್ರೆ ಕ್ಲಿಯರ್ ಆಗೋದುʼʼ ಎಂದು ಚೆಲುವರಾಯಸ್ವಾಮಿ ವಿವರಿಸಿದರು.