Site icon Vistara News

Congress ticket : ಇನ್ನೂ ಕೋಲಾರ ಕ್ಷೇತ್ರ ಖಾಲಿ ಇದೆ, ಸಿದ್ದರಾಮಯ್ಯ ಬಂದೇ ಬರ್ತಾರೆ; ಅಭಿಮಾನಿಗಳ ವಿಶ್ವಾಸ

siddaramaiah kolar

#image_title

ಕೋಲಾರ: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ (Congress ticket) ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಆದರೆ, ಅದೊಂದೇ ಅಲ್ಲ, ಇನ್ನೊಂದು ಕ್ಷೇತ್ರದಲ್ಲೂ ಅವರಿಗೆ ಟಿಕೆಟ್‌ ಸಿಗಬಹುದು ಎನ್ನುವ ನಿರೀಕ್ಷೆಯೂ ಇದೆ. ಇದಕ್ಕೆ ಪೂರಕವಾಗಿ ಅವರು ಸ್ಪರ್ಧೆ ಮಾಡಲು ಬಯಸಿದ್ದ ಕೋಲಾರ ಮತ್ತು ಈ ಹಿಂದೆ ಸ್ಪರ್ಧಿಸಿ ಗೆದ್ದಿದ್ದ ಬಾದಾಮಿ ಎರಡೂ ಕ್ಷೇತ್ರಗಳ ಟಿಕೆಟ್‌ ಫೈನಲ್‌ ಆಗಿಲ್ಲ.

ಈ ನಡುವೆ, ಕೋಲಾರದ ಟಿಕೆಟ್‌ ಫೈನಲ್‌ ಮಾಡದೆ ಇರುವುದು ಅವರ ಅಭಿಮಾನಿಗಳಲ್ಲಿ ಭಾರಿ ಸಂಭ್ರಮವನ್ನು ಹುಟ್ಟುಹಾಕಿದೆ. ಕೋಲಾರ ಕ್ಷೇತ್ರ ಖಾಲಿ ಬಿಟ್ಟಿರುವುದರಿಂದ ಸಿದ್ದರಾಮಯ್ಯ ಅವರಿಗೆ ಎರಡನೇ ಕ್ಷೇತ್ರದ ಅವಕಾಶ ನೀಡಬಹುದು ಎಂದು ಅವರು ಸಂತಸದಲ್ಲಿದ್ದಾರೆ.

ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತಾರೆ, ಕೋಲಾರದಲ್ಲಿ ಟಿಕೆಟ್‌ ಕೊಟ್ಟೇ ಕೊಡುತ್ತಾರೆ ಎಂದು ದೃಢವಾಗಿ ನಂಬಿಕೆ ವ್ಯಕ್ತಪಡಿಸುತ್ತಿದ್ದಾರೆ ಅವರ ಪರ ದಲಿತ ಮುಖಂಡರು.

ಅದರಲ್ಲೂ ಮುಖ್ಯವಾಗಿ ಕೋಲಾರದ ಕಾಂಗ್ರೆಸ್‌ ಟಿಕೆಟ್‌ನ ಆಕಾಂಕ್ಷಿಯಾಗಿರುವ ಹಿರಿಯ ಸಹಕಾರಿ ಬ್ಯಾಲಹಳ್ಳಿ ಗೋವಿಂದೇಗೌಡ ಅವರೇ ಸಿದ್ದರಾಮಯ್ಯ ಬಂದೇ ಬರುತ್ತಾರೆ ಎಂದಿದ್ದಾರೆ.

ʻʻಮೊದಲ ಪಟ್ಟಿಯಲ್ಲಿ ಕೋಲಾರಕ್ಕೆ ಅಭ್ಯರ್ಥಿ ಫೈನಲ್‌ ಆಗಿಲ್ಲ. ಆದರೆ, ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡುವುದು ಖಚಿತ. ನಾನು ಕೋಲಾರ ಟಿಕೆಟ್‌ ಆಕಾಂಕ್ಷಿ ಅನ್ನೋದು ನಿಜ. ಅಧಿಕೃತ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡದೆ ಇರುವುದರಿಂದ ಸಿದ್ದರಾಮಯ್ಯ ಅವರ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇವೆʼʼ ಎಂದು ಹೇಳಿದರು.

ʻʻಸಿದ್ದರಾಮಯ್ಯ ಈಗಾಗಲೇ ಮೂರು ನಾಲ್ಕು ಬಾರಿ‌ ಕೋಲಾರ ಕ್ಷೇತ್ರ ಪ್ರವಾಸ ಮಾಡಿ ಸ್ಪರ್ಧೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಿನ ಸ್ಥಿತಿಯಲ್ಲಿ ಅವಿಭಜಿತ ಜಿಲ್ಲೆಗಳಲ್ಲಿ ಕೋಲಾರ, ಮುಳಬಾಗಿಲು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿ ಫೈನಲ್ ಆಗಿಲ್ಲ. ಅವಿಭಜಿತ ಜಿಲ್ಲೆಯ ಕಾಂಗ್ರೆಸ್ ‌ನಾಯಕರ, ಮುಖಂಡರ ಒಮ್ಮತ ಅಭಿಪ್ರಾಯ ಪಡೆದು ಪ್ರಕಟವಾಗಲಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ‌ಮುಖಂಡರ ಸಭೆಯಲ್ಲಿ ಅಧಿಕೃತ ಅಭ್ಯರ್ಥಿ ಯಾರು ಎಂಬುದು ಫೈನಲ್ ‌ಮಾಡಬೇಕುʼʼ ಎಂದು ಹೇಳಿದ್ದಾರೆ ಬ್ಯಾಲಹಳ್ಳಿ ಗೋವಿಂದ ಗೌಡ.

ಕೋಲಾರದಲ್ಲಿ ಸ್ಪರ್ಧೆ: ಯತೀಂದ್ರ ಹೇಳಿದ್ದೇನು?

ಈ ನಡುವೆ, ಸಿದ್ದರಾಮಯ್ಯ ಅವರು ಕೋಲಾರದಲ್ಲೂ ಸ್ಪರ್ಧಿಸುತ್ತಾರೆ ಎಂದು ಪುತ್ರ ಯತೀಂದ್ರ ಅವರು ಶುಕ್ರವಾರ ಹೇಳಿದ್ದರು.

ʻʻತಂದೆಯವರ ನಿರ್ಧಾರಕ್ಕೆ ನಾನು ಬದ್ಧ. ವರುಣ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದರೆ ನಾವು ಅವರಿಗೆ ಸರ್ಪೋರ್ಟ್​ ಮಾಡುತ್ತೇವೆ. ವರುಣ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಕೆಲಸ ಮಾಡುತ್ತೇವೆʼʼ ಎಂದಿದ್ದಾರೆ ಯತೀಂದ್ರ ಸಿದ್ದರಾಮಯ್ಯ.

ʻʻಕೋಲಾರಕ್ಕೆ ಹೋಗುವ ಮುನ್ನ ವರುಣದಿಂದ ಸ್ಪರ್ಧೆ ಮಾಡಬೇಕೆಂದು ನಾನು ಸಲಹೆ ನೀಡಿದ್ದೆ. ಆದರೆ, ಕೋಲಾರದ ನಾಯಕರು ಸ್ಪರ್ಧೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದರು. ಅಲ್ಲಿಯೂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತಾನೇ ಹೇಳಿದ್ದರುʼʼ ಎಂದು ನೆನಪು ಮಾಡಿಕೊಂಡರು.

ʻʻಸದ್ಯ ಹೈಕಮಾಂಡ್ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ. ಬ್ಯಾಕ್​ಅಪ್​ಗೋಸ್ಕರ ಕೋಲಾರದಲ್ಲಿ ಸ್ಪರ್ಧೆ ಮಾಡಲು ತಂದೆಯವರು ನಿರ್ಧರಿಸಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆʼʼ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್‌

Exit mobile version