ಚಿಕ್ಕಬಳ್ಳಾಪುರ: ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಿಗೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಲು ಪ್ರಮುಖವಾದದ್ದು ಎನ್ನಲಾಗುವ ಎತ್ತಿನ ಹೊಳೆ (Ettina Hole) ಯೋಜನೆಯಿಂದ ನೀರು ಬಂದರೆ ಅದು ಈ ಭಾಗದ ಜನರ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (H.D. Devegowda) ವ್ಯಂಗ್ಯವಾಡಿದ್ದಾರೆ.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಜಾತ್ಯತೀತ ಜನತಾದಳ ಪಕ್ಷದ (JDS) ವತಿಯಿಂದ ಆಯೋಜಿಸಿರುವ ಜನತಾ ಜಲಧಾರೆ ಕಾರ್ಯಕ್ರಮದ ಭಾಗವಾಗಿ ಚಿಕ್ಕಬಳ್ಳಾಪುರದ ಪರೇಸಂದ್ರದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕೃಷ್ಣಾ, ಕಾವೇರಿ ಹಾಗೂ ಮಹದಾಯಿ ಪ್ರಮುಖ ನದಿಗಳು. ಇವುಗಳ ಜತೆಗೆ 19 ಉಪನದಿಗಳಿವೆ. ಚಿಕ್ಕಬಳ್ಳಾಪುರ, ಕೋಲಾರಕ್ಕೆ ಕುಡಿಯುವ ನೀರಿಲ್ಲ ಎಂಬ ಕಾರಣಕ್ಕೆ ಎತ್ತಿನ ಹೊಳೆ ಎಂಬ ಯೋಜನೆಯನ್ನು ಸರ್ಕಾರ ಅಂದಾಜು ಮಾಡಿದೆ. ಈ ಯೋಜನೆಗೆ ₹8 ಸಾವಿರ ಕೋಟಿ ಬೇಕಾಗುತ್ತದೆ ಎಂದು 15 ವರ್ಷದ ಹಿಂದೆ ತೀರ್ಮಾನಿಸಲಾಗಿತ್ತು. ನಂತರ ಈ ಮೊತ್ತ ₹12 ಸಾವಿರ ಕೋಟಿಗೆ ಹೆಚ್ಚಳವಾಗಿ, ಈಗ ₹24 ಸಾವಿರ ಕೋಟಿ ಬೇಕಾಗುತ್ತದೆ ಎನ್ನುತ್ತಿದ್ದಾರೆ. ಆ ನೀರು ಚಿಕ್ಕಬಳ್ಳಾಪುರಕ್ಕೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಅಷ್ಟರೊಳಗೆ ನಾನೂ ಬದುಕಿರುತ್ತೀನೊ ಇಲ್ಲವೋ ಗೊತ್ತಿಲ್ಲ. ಆ ನೀರು ಬಂದರೆ ನಿಮ್ಮ ಪುಣ್ಯ ಅಷ್ಟೆ ಎಂದರು.
ವಾಗ್ದಾನ ಈಡೇರದಿದ್ದರೆ ಪಕ್ಷವೇ ವಿಸರ್ಜನೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎನ್ನುವುದು ಯಾತ್ರೆಯ ಪ್ರಮುಖ ಉದ್ದೇಶ. ಇದಕ್ಕಾಗಿ ರಥಗಳನ್ನು ರೂಪಿಸಿಕೊಂಡು ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಾಗುತ್ತಿದೆ. ಏಪ್ರಿಲ್ 16ರಿಂದ ಚಾಲನೆ ನೀಡಲಾಗಿರುವ ಈ ರಥಗಳು ಎಲ್ಲ ಕಡೆಗಳಿಂದ ನದಿಯ ನೀರನ್ನು ಸಂಗ್ರಹಿಸಿಕೊಂಡು ಬರುತ್ತವೆ. ಅವುಗಳನ್ನು ಬೆಂಗಳೂರಿನ ಜೆಡಿಎಸ್ ಕಚೇರಿ ಬಳಿ ಇರಿಸಿ 2023ರ ಚುನಾವಣೆವರೆಗೆ ಪೂಜೆ ಮಾಡಲಾಗುತ್ತದೆ.
ತಮಗೆ ಐದು ವರ್ಷ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸಲಾಗುತ್ತದೆ ಎನ್ನುವುದು ಎಚ್.ಡಿ. ಕುಮಾರಸ್ವಾಮಿಯವರ ವಾಗ್ದಾನ. ಹಾಗೇನಾದರೂ ತಾವು ಐದು ವರ್ಷದಲ್ಲಿ ಮಾತನ್ನು ಈಡೇರಿಸದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ: JDS ಚುನಾವಣಾ ರಣಕಹಳೆ ಇಂದಿನಿಂದ: ಜನತಾ ಜಲಧಾರೆಗೆ ದೇವೇಗೌಡರಿಂದ ಚಾಲನೆ
ಯಾತ್ರೆಯ ಪ್ರಮುಖ ಉದ್ದೇಶ
- ಜಲಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗಾಗಿ ಸಮಂಜಸ ಯೋಜನೆಗಳ ಶಾಶ್ವತೀಕರಣ
- ಶತಮಾನಗಳು ಕಳೆದರೂ ಶಾಪಗ್ರಸ್ಥವಾಗಿರುವ ನಾಲೆ, ಕಾಲುವೆಗಳ ನವೀಕರಣ
- ನಾಡಿನ ನಾಳಿನ ಭವಿಷ್ಯಕ್ಕಾಗಿ ನೂತನ ಆಣೆಕಟ್ಟುಗಳ ನಿರ್ಮಾಣ
- ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಪುನಶ್ಚೇತನ
- ಮನೆಮನೆಗೆ ಶುದ್ಧ ಕುಡಿಯುವ ನೀರು ಕೊಡುವ ಜಲಯೋಜನೆಯ ಸಾಕ್ಷಾತ್ಕರಣ
- ಪರಿಸರ ಕಾಳಜಿಯೊಂದಿಗೆ ಜಲಮೂಲಗಳ ಸಮೃದ್ಧೀಕರಣ