Site icon Vistara News

Girls Hostel : ರಾತ್ರಿ ಹೊತ್ತು ಬಾಲಕಿಯರ ಹಾಸ್ಟೆಲ್‌ಗೆ ನುಗ್ಗಿದ ಅನಾಮಿಕ ಯುವಕ; ಪಕ್ಕದ ಮನೆಗಳಿಗೆ ಓಡಿಹೋದ ಮಕ್ಕಳು

Girls hostel issue

ಕೋಲಾರ: ರಾಜ್ಯದಲ್ಲಿ ಹೆಣ್ಮಕ್ಕಳ ಹಾಸ್ಟೆಲ್‌ಗಳ (Girls Hostel) ಭದ್ರತಾ ವ್ಯವಸ್ಥೆಯ ಮೇಲೆ (Security Lapse) ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುವ ಭಯಾನಕ ವಿದ್ಯಮಾನವೊಂದು ಕೋಲಾರ ಜಿಲ್ಲೆಯ ಹಾಸ್ಟೆಲ್‌ ಒಂದರಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಕೋಲಾರ ಜಿಲ್ಲೆಯ (Kolara News) ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ (Premetric girls Hostel Bethamangala) ಸುಮಾರು 25 ವರ್ಷ ಪ್ರಾಯದ ಅನಾಮಿಕ ಯುವಕನೊಬ್ಬ (25 year old Man) ಎಂಟ್ರಿ ಕೊಟ್ಟಿದ್ದು, ಬಾಲಕಿಯರು ಭಯದಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಮಾಜ ಕಲ್ಯಾಣ ಇಲಾಖೆ (Social welfare department) ವ್ಯಾಪ್ತಿಗೆ ಬರುವ ಈ ಹಾಸ್ಟೆಲ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಹೆಣ್ಣು ಮಕ್ಕಳು ದಾಖಲಾಗಿದ್ದಾರೆ. ಇಲ್ಲಿ 6ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ.

ಬಡಮಕ್ಕಳೇ ಇರುವ ಹಾಸ್ಟೆಲ್‌ನಲ್ಲಿ ವಾರ್ಡನ್‌, ಅಡುಗೆಯವರು ಸೇರಿದಂತೆ ಇತರ ಸಿಬ್ಬಂದಿಗಳು ಇದ್ದಾರೆ. ಇವರೆಲ್ಲರ ಕಣ್ಣುತಪ್ಪಿಸಿ ಒಬ್ಬ ಯುವಕ ಹಾಸ್ಟೆಲ್‌ ಪ್ರವೇಶ ಮಾಡಿದ್ದಾನೆ. ಹಾಸ್ಟೆಲ್‌ಗೆ ಬಂದಿದ್ದು ಮಾತ್ರವಲ್ಲದೆ, ಹೆಣ್ಮಕ್ಕಳು ವಿಶ್ರಾಂತಿ ಪಡೆಯುವ ಕೋಣೆಯೊಳಗೆ ನೇರ ಪ್ರವೇಶ ಮಾಡಿದ್ದಾನೆ.

ಒಂದು ಕೋಣೆಯೊಳಗೆ ಪ್ರವೇಶ ಮಾಡಿದ ಆತ ಅಲ್ಲಿ ಏನನ್ನೋ ಹುಡುಕುವಂತೆ ನಟಿಸಿದ್ದಾನೆ. ಯಾರು ನೀನು ಎಂದು ಕೇಳಿದ್ದಕ್ಕೆ ಏನನ್ನೂ ಹೇಳದೆ ಅವರನ್ನು ಹೆದರಿಸುವಂತೆ ನೋಡಿ ಹೊರ ಹೋಗಿದ್ದಾನೆ. ಈ ನಡುವೆ, ಒಬ್ಬ ಬಾಲಕಿ ಸ್ನಾನದ ಮನೆಯಲ್ಲಿದ್ದಾಗ ಹೊರಗಿನಿಂದ ಚಿಲಕವನ್ನು ಅತ್ತಿತ್ತ ಮಾಡಿದ್ದಾನೆ ಎಂದು ಹೆಣ್ಮಕ್ಕಳು ಹೇಳಿಕೊಂಡಿದ್ದಾರೆ.

ಭಯದಿಂದ ನಡುಗಿದ ಮಕ್ಕಳಿಗೆ ಪಕ್ಕದ ಮನೆಯಲ್ಲಿ ಆಶ್ರಯ

ಈ ನಡುವೆ, ಘಟನೆ ನಡೆಯುತ್ತಿದ್ದಂತೆಯೇ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದರಿಂದ ಪಕ್ಕದ ಮನೆಗಳವರು ಓಡಿ ಬಂದಿದ್ದಾರೆ. ಅವರಲ್ಲಿ ವಿಷಯವನ್ನು ತಿಳಿಸಿದ್ದು, ಅವರೆಲ್ಲ ಆತನಿಗಾಗಿ ಹುಡುಕಾಡಿದ್ದಾರೆ. ಇದಾದ ಬಳಿಕ ಕೆಲವು ಮಕ್ಕಳು ಹಾಸ್ಟೆಲ್‌ನಲ್ಲಿ ಉಳಿಯಲು ಭಯಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಪಕ್ಕದ ಕೆಲವು ಮನೆಗಳಲ್ಲಿ ಆಶ್ರಯ ನೀಡಲಾಗಿದೆ.

ಬೇತಮಂಗಲ ಹಾಸ್ಟೆಲ್‌ ಪರಿಸರ ಹೀಗಿದೆ.

ಬಾಗಿಲುಗಳೇ ಭದ್ರವಿಲ್ಲದ ಹಾಸ್ಟೆಲ್‌!

ನಿಜವೆಂದರೆ, ಇದೊಂದು ಹಳೆ ಕಟ್ಟಡದಲ್ಲಿರುವ ಹಾಸ್ಟೆಲ್‌ ಆಗಿದ್ದು, ಹೆಣ್ಮಕ್ಕಳ ವಸತಿ ನಿಲಯವಾದರೂ ಭದ್ರತೆಯೇ ಇಲ್ಲದಂತಾಗಿದೆ. ಇಲ್ಲಿನ ಬಾಗಿಲುಗಳು ಗಟ್ಟಿ ಇಲ್ಲ, ಸರಿಯಾದ ಭದ್ರತಾ ಸಿಬ್ಬಂದಿಯೂ ಇಲ್ಲ. ಈ ಕಟ್ಟಡಕ್ಕೆ ಅಕ್ಕದ ಪಕ್ಕದ ಕಟ್ಟಡ ಮತ್ತು ಇತರ ಭಾಗಗಳಿಂದ ನುಗ್ಗಬಹುದಾದಷ್ಟು ಮುಕ್ತವಾಗಿದೆ.

ಬೇತಮಂಗಲ ಹಾಸ್ಟೆಲ್‌ನ ಒಳಗಿನ ಭಾಗ

ಇನ್ನು ಹಾಸ್ಟೆಲ್‌ ಒಳಭಾಗವೂ ವ್ಯವಸ್ಥಿತವಾಗಿಲ್ಲ. ಯಾರಾದರೂ ಬಂದು ಒಳಗೆ ಸೇರಿಕೊಂಡರೂ ಗೊತ್ತಾಗದಷ್ಟು ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಕೆಲವು ರೂಮ್‌ಗಳಲ್ಲಿ ಮಂಚಗಳನ್ನು, ಟೈಲರಿಂಗ್‌ ಮೆಷಿನ್‌ಗಳನ್ನು ಗುಡ್ಡೆ ಹಾಕಲಾಗಿದೆ. ಇವುಗಳು ಬಳಕೆಯಾಗದೆ ಧೂಳು ಹಿಡಿಯುತ್ತಿವೆ. ಹೀಗಾಗಿ ಅಲ್ಲೊಂದು ಭಯದ ವಾತಾವರಣವಿದೆ.

ಇದನ್ನೂ ಓದಿ: Ragging Cruelty : ಹೈಸ್ಕೂಲ್‌ನಲ್ಲೇ ಭಯಾನಕ ರ‍್ಯಾಗಿಂಗ್‌; ಹೋಮೋ ಸೆಕ್ಸ್‌ಗೆ ಒತ್ತಾಯಿಸಿ ಹಾಸ್ಟೆಲ್‌ ಹುಡುಗರ ಚಿತ್ರಹಿಂಸೆ

ಬೇತಮಂಗಲ ನಿವಾಸಿ ಅರೆಸ್ಟ್‌

ಈ ನಡುವೆ ಹಾಸ್ಟೆಲ್‌ ವಾರ್ಡನ್‌ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬೇತಮಂಗಲ ನಿವಾಸಿ ಮುರಳಿ (25) ಎಂಬಾತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೋ ಪ್ರಕರಣದಡಿ ಕೇಸು ದಾಖಲಾಗಿದೆ. ಇದೀಗ ಆತನ ಉದ್ದೇಶದ ಬಗ್ಗೆ ತನಿಖೆಯಾಗಬೇಕಾಗಿದೆ. ಹಾಸ್ಟೆಲ್‌ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸದ ಅಧಿಕಾರಿಗಳು ಮತ್ತು ವಾರ್ಡನ್‌ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version