ಕೋಲಾರ: ಕ್ಯಾನ್ಸರ್ ಕಾರಕ (Carcinogenic) ಅಂಶಗಳನ್ನು ಹೊಂದಿರುವ ರಾಸಾಯನಿಕ ಬಣ್ಣಗಳನ್ನು (Chemical color) ಬಳಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಕೆಜಿಎಫ್ (KGF) ನಗರಸಭೆ ವ್ಯಾಪ್ತಿಯಲ್ಲಿ ಸ್ವೀಟ್ ಅಂಗಡಿಗಳ (Sweet stalls) ಮೇಲೆ ನಗರಸಭೆ ಪೌರಾಯುಕ್ತ ಪವನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ರಾಸಾಯನಿಕ ಹೊಂದಿದ (Chemicals in Food) ಕೃತಕ ಬಣ್ಣ ಬಳಸಿ ತಯಾರು ಮಾಡಿದ್ದ ಸ್ವೀಟ್ ಹಾಗೂ ತಿಂಡಿಗಳನ್ನು (Seize) ವಶಕ್ಕೆ ಪಡೆಯಲಾಯಿತು.
ಜೊತೆಗೆ ಆಹಾರ ಸುರಕ್ಷತೆ ನಿಯಮ ಪಾಲಿಸದೆ ಸ್ವೀಟ್ ತಯಾರು ಮಾಡುತ್ತಿದ್ದ ಅಂಗಡಿಗಳಿಗೆ ನೋಟೀಸ್ ನೀಡಿ ದಂಡ ವಿಧಿಸಲಾಗಿದೆ. ಕಲರ್ ಬಳಸಿ ತಯಾರು ಮಾಡಿದ ಸ್ವೀಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಸದ ಲಾರಿಗೆ ತುಂಬಿಸಿದರು.
ಇತ್ತೀಚೆಗಷ್ಟೇ ಕೋಲಾರದ ಕೆಜಿಎಫ್ ನಗರಸಭೆ ಅಧಿಕಾರಿಗಳು ಗೋಬಿ ಮಂಜೂರಿ, ಕಬಾಬ್ ಸೆಂಟರ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವುಗಳಲ್ಲಿ ಬಳಸಲಾಗುತ್ತಿದ್ದ ಬಣ್ಣದ ಐಟಂಗಳನ್ನು ಬ್ಯಾನ್ ಮಾಡಿದ್ದರು. ಜೊತೆಗೆ ಕಲರ್ ಬಳಸುವ ಎಲ್ಲಾ ಗೋಬಿ ಮಂಚೂರಿ, ಕಬಾಬ್ ಸೆಂಟರ್ಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶದಂತೆ ನಿಷೇಧಿತ ಕಲರ್ ಬಳಸದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ವೀಟ್ ಅಂಗಡಿಗಳ ಮೇಲೆ ದಾಳಿ ನಡೆದಿದೆ.
ಪಾನಿಪುರಿಯಲ್ಲೂ ಹಾನಿಕಾರಕ ರಾಸಾಯನಿಕ, ಬ್ಯಾನ್‌ಗೆ ಚಿಂತನೆ
ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.
ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.
ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.
ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?