Site icon Vistara News

Child Kidnapped : ಬುಲೆಟ್‌ನಲ್ಲಿ ಬಂದು 7 ವರ್ಷದ ಬಾಲಕನ ಅಪಹರಣ, Whatsappನಿಂದಾಗಿ ಸಿಕ್ಕಿಬಿದ್ದ ದುರುಳರು

Child kidnappers and child

ಕೋಲಾರ: ಬುಲೆಟ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮನೆಯಂಗಳದಲ್ಲಿದ್ದ ಏಳು ವರ್ಷದ ಬಾಲಕನನ್ನು ಅಪಹರಿಸಿದ (Child Kidnapped) ಘಟನೆಯೊಂದು ಕೋಲಾರ ಜಿಲ್ಲೆ (Kolara News) ಶ್ರೀನಿವಾಸಪುರ ಸಮೀಪದ ಹರಳ್ಳಿಯಲ್ಲಿ ನಡೆದಿದೆ. ಆದರೆ, ವಾಟ್ಸ್‌ ಆಪ್‌ ಮೂಲಕ ಮಗುವಿನ ಅಪಹರಣದ ಸುದ್ದಿ ತಕ್ಷಣವೇ ವೈರಲ್‌ ಆದ ಪರಿಣಾಮವಾಗಿ ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಹೆಡೆಮುರಿಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹರಳ್ಳಿ ಗ್ರಾಮದ ಉದ್ಯಮಿ ಲೋಕೇಶ್ ಗೌಡ ಅವರ ಏಳು ವರ್ಷದ ಮಗು (Business mans son) ಯಶ್ವಿತ್‌ ಗೌಡ ಅಪಹರಣಕ್ಕೆ ಒಳಗಾದವನು. ಖಾಸಗಿ ಶಾಲೆಗೆ ಹೋಗುತ್ತಿರುವ ಆತ ಸಂಜೆ 4.50ರ ಹೊತ್ತಿಗೆ ಮನೆಗೆ ಬಂದಿದ್ದ. ಅದೇ ಹೊತ್ತಿಗೆ ಬಂದ ದುಷ್ಕರ್ಮಿಗಳು ಆತನನ್ನು ಅಪಹರಿಸಿದರು.

ಬುಲೆಟ್‌ನಲ್ಲಿ ಬಂದಿದ್ದ ಅಪಹರಣಕಾರರು ಮಗುವನ್ನು ಸೆಳೆದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ರೀತಿ ಅಪಹರಣ ಆಗಿದೆ ಎಂಬ ಮಾಹಿತಿಯನ್ನು ವಾಟ್ಸ್‌ಆಪ್‌ ಮೂಲಕ ಹಂಚಲಾಗಿತ್ತು. ಅಪರಹಣಕಾರರು ಶ್ರೀನಿವಾಸಪುರ ಕಡೆ ಬೈಕ್ ಹೋಗಿದ್ದ ಖಚಿತ ಮಾಹಿತಿ ಆಧಾರ ಮೇಲೆ ಹುಡುಕಾಟ ನಡೆದಿತ್ತು.

ಬುಲೆಟ್‌ ಬೈಕ್‌ ಎನ್ನುವ ಆಧಾರದಲ್ಲಿ ಎಲ್ಲ ಕಡೆ ಜನರು ಕಣ್ಗಾವಲು ಇಟ್ಟಿದ್ದರು. ಕೊನೆಗೆ ದುಷ್ಕರ್ಮಿಗಳು ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಲಹಳ್ಳಿ ಬಳಿ ಗ್ರಾಮಸ್ಥರ ಕೈಗೆ ಸಿಕ್ಕಿ ಹಾಕಿಕೊಂಡರು. ಅಪಹರಣಕಾರರನ್ನು ಹೆಡೆಮುರಿ ಕೊಟ್ಟಿ ಮಗುವನ್ನು ವಶಕ್ಕೆ ಪಡೆದ ಗ್ರಾಮಸ್ಥರು ದುಷ್ಕರ್ಮಿಗಳನ್ನು ಪೊಲೀಸರಿಗೆ ಒಪ್ಪಿಸಿದರು.

ಲೋಕೇಶ್‌ಗೆ ಪರಿಚಿತರೇ ಆಗಿರುವ ದುಷ್ಕರ್ಮಿಗಳು

ದುಷ್ಕರ್ಮಿಗಳನ್ನು ಪೊಲೀಸ್‌ ಠಾಣೆಗೆ ಕರೆತಂದಾಗ ಮಗುವಿನ ತಂದೆ ಲೋಕೇಶ್‌ ಕೂಡಾ ಬಂದಿದ್ದರು. ಆಗ ಅವರು ಆರೋಪಿಗಳನ್ನು ನೋಡಿ ಬೆಚ್ಚಿ ಬಿದ್ದರು. ಯಾಕೆಂದರೆ ಅಪಹರಣಕಾರರು ಲೋಕೇಶ್‌ ಅವರ ಉದ್ದಿಮೆಯಲ್ಲಿ ಕೆಲಸ ಮಾಡುವ ಕೆಲಸಗಾರರೇ ಆಗಿದ್ದರು.

ಬಂಧಿತರನ್ನು ಅರಹಳ್ಳಿ ಗ್ರಾಮದ ಶ್ರೀಕಾಂತ್, ಬೇತಮಂಗಲ ಮೂಲದ ವೆಂಕಟರಾಜ್ ಎಂದು ಗುರುತಿಸಲಾಗಿದೆ. ಇವರು ಬುಲೆಟ್ ನಂಬರ್ ಬದಲಿಸಿ ಮಗುವನ್ನು ಅಪಹರಿಸಿದ್ದರು.

ಈ ವ್ಯಕ್ತಿಗಳು ಮಗುವಿಗೆ ಕೂಡಾ ಪರಿಚಿತರಾಗಿದ್ದು, ಅವರು ಕರೆದ ಕೂಡಲೇ ಹತ್ತಿರ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಹಣಕ್ಕಾಗಿ ಈ ಅಪಹರಣ ನಡೆದಿದೆ. ಮಗುವನ್ನು ಇಟ್ಟುಕೊಂಡು ಹಣ ಕೀಳುವ ಉದ್ದೇಶ ಅಪಹರಣಕಾರರಿಗೆ ಇತ್ತು ಎಂದು ಹೇಳಲಾಗುತ್ತಿದೆ. ಆದರೆ, ಇದರ ಹಿಂದೆ ಬೇರೇನೋ ಪಿತೂರಿ ಇರುವ ಸಾಧ್ಯತೆಯೂ ದಟ್ಟವಾಗಿದೆ.

ಲೋಕೇಶ್‌ ಅವರ ಜತೆ ಕೆಲಸ ಮಾಡಿಕೊಂಡಿರುವ ಅಪಹರಣಕಾರರು ಯಾವುದೋ ಕಾರಣಕ್ಕೆ ಸಿಟ್ಟುಗೊಂಡು ಪಾಠ ಕಲಿಸುವ ಉದ್ದೇಶದಿಂದ ಮಗುವನ್ನು ಅಪಹರಿಸಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಶ್ರೀನಿವಾಸಪುರ ಪೊಲೀಸರು ಹಾಗೂ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಹಿಂದಿನ ಹುನ್ನಾರಗಳನ್ನು ಪೊಲೀಸರು ಬಯಲಿಗೆ ಎಳೆಯಬೇಕಾಗಿದೆ.

Exit mobile version