ಕೋಲಾರ : ಕೋಲಾರ ತಾಲೂಕಿನ ನಾಗನಾಳ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ (Drowned In water) ಆಕಸ್ಮಿಕವಾಗಿ ಮುಳುಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೊನ್ನೆ ಬುಧವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ.
ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದ. ಕುಟುಂಬದವರೊಂದಿಗೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ. ಒಂದು ಬದಿ ಮಕ್ಕಳಿಬ್ಬರು ಈಜುತ್ತಿದ್ದರು. ಈ ಕಡೆ ತಂಗಿಗೆ ಮೊಬೈಲ್‌ನಲ್ಲಿ ಕೊಟ್ಟು ಈಜುವುದನ್ನು ವಿಡಿಯೊ ಮಾಡು ಎಂದು ತಿಳಿಸಿದ್ದ.
ಬಳಿಕ ಗೌತಮ್ ಕೃಷಿ ಹೊಂಡಕ್ಕೆ ಜಿಗಿದು ಈಜುತ್ತಿದ್ದ. ಇತ್ತ ತಂಗಿಯು ವಾಪಸ್ ಬಾ ಎಂದು ಕೂಗಿದ್ದಾಳೆ. ಆಕೆಯ ಮಾತನ್ನು ಕೇಳಿಸಿಕೊಳ್ಳದ ಗೌತಮ್ ಈಜುತ್ತಾ ಕೊಂಚ ದೂರ ಹೋಗಿದ್ದಾನೆ. ಅಷ್ಟೇ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ.
ಸರಿಯಾಗಿ ಈಜು ಬಾರದಿದ್ದರು ಈಜಲು ಹೋಗಿ ನೀರುಪಾಲಾಗಿದ್ದಾನೆ. ಗೌತಮ್ ನೀರಿನಲ್ಲಿ ಮುಳುಗುತ್ತಿರುವ ಎಲ್ಲವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ
ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿ ಪರಾರಿಯಾದ ಭೂಪ
ಲಕ್ನೋ: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಕಾನೂನು ಕಣ್ಣು ತಪ್ಪಿಸಿ ಹಲವರು ಇನ್ನೂ ಈ ಅನಾಚಾರವನ್ನು ಮುಂದುವರಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿದ್ದಾನೆ.
ಏಪ್ರಿಲ್ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ಮೊಹಮ್ಮದ್ ಅರ್ಷದ್ ಹೀಗೆ ತ್ರಿವಳಿ ತಲಾಕ್ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್ ಸಮೀಪ ಈ ಘಟನೆ ನಡೆದಿದೆ.
ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್ ನೀಡಿ ರೈಲಿನಿಂದ ಇಳಿದಿದ್ದಾನೆ. ಹೋಗುವ ಮುನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ. ಅನಿರೀಕ್ಷಿತ ಆಘಾತದಿಂದ ತಬ್ಬಿಬ್ಬಾದ ಅಫ್ಸಾನಾ ಕೂಡಲೇ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದರು. ಪೊಲೀಸರು ಅವರನ್ನು ಕಾನ್ಪುರ್ ದೆಹತ್‌ನ ಪುಖ್ರಾಯನ್‌ಗೆ ಕಳುಹಿಸಿದರು. ಅಲ್ಲಿಂದ ಅವರು ಭೋಪಾಲ್‌ಗೆ ರೈಲು ಹತ್ತಿದ್ದರು. ಕೊನೆಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಮೊಹಮ್ಮದ್ ಅರ್ಷದ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಭೋಪಾಲ್‌ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿರುವ ಅರ್ಷದ್ ಈ ವರ್ಷದ ಜನವರಿ 12ರಂದು ರಾಜಸ್ಥಾನದ ಕೋಟದ ಅಫ್ಸಾನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮ್ಯಾಟ್ರಿಮೋನಿ ಜಾಹೀರಾತು ಮೂಲಕ ಪದವೀಧರೆಯಾದ ಅಫ್ಸಾನಾ ಮತ್ತು ಅರ್ಷದ್ ಪರಸ್ಪರ ಪರಿಚಿತರಾಗಿದ್ದರು. ದಂಪತಿ ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್‌ನ ಪೂರ್ವಜರ ಮನೆಗೆ ಭೇಟಿ ನೀಡಿದಾಗ ಅಫ್ಸಾನಾ ಅವರಿಗೆ ಆಘಾತಕಾರಿ ಸತ್ಯವೊಂದು ತಿಳಿಯಿತು. ಅರ್ಷದ್‌ಗೆ ಅದಾಗಲೇ ಮದುವೆಯಾಗಿತ್ತು ಎನ್ನುವುದು ಅಫ್ಸಾನಾ ಅವರಿಗೆ ಆಗಷ್ಟೇ ತಿಳಿದು ಬಂದಿತ್ತು.
ಈ ಬಗ್ಗೆ ಅಫ್ಸಾನಾ ಪ್ರಶ್ನಿಸಿದಾಗ ಕಿರುಕುಳ ಆರಂಭವಾಗಿತ್ತು. ಅರ್ಷದ್ ಮತ್ತು ಆತನ ತಾಯಿ ವರದಕ್ಷಿಣೆ ನೀಡುವಂತೆ ಪೀಡಿಸತೊಡಗಿದರು ಎಂದು ಅಫ್ಸಾನಾ ದೂರಿನಲ್ಲಿ ತಿಳಿಸಿದ್ದಾರೆ. ಕೊನೆಗೆ ರೈಲಿನಲ್ಲಿ ಆತ ತ್ರಿವಳಿ ತಲಾಕ್ ಕೊಟ್ಟು ನಾಪತ್ತೆಯಾಗಿದ್ದಾನೆ ಎಂದು ಅಫ್ಸಾನಾ ವಿವರಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರಿಗೆ ಮನವಿ
ಸದ್ಯ ಈ ವಿಚಾರ ಸದ್ದು ಮಾಡುತ್ತಿದೆ. ಅಫ್ಸಾನಾ ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಿ ತನಗೆ ನೆರವಾಗಬೇಕು ಎಂದು ಕೋರಿದ್ದಾರೆ. ಹೀಗೆ ತ್ರಿವಳಿ ತಲಾಕ್ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಸರ್ಕಲ್ ಆಫೀಸರ್ ಪ್ರಿಯಾ ಸಿಂಗ್ ಈ ಬಗ್ಗೆ ಮಾತನಾಡಿ, ʼʼಅಫ್ಸಾನಾ ಅವರ ದೂರಿನ ಮೇರೆಗೆ ಅರ್ಷಾದ್, ಆತನ ಮಾವ ಅಖೀಲ್, ತಂದೆ ನಫೀಸುಲ್ ಹಸನ್ ಮತ್ತು ತಾಯಿ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ