ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಶಾಸಕ ಶ್ರೀನಿವಾಸಗೌಡ ಅಡ್ಡಮತದಾನ ಮಾಡಿರುವುದು ಖಚಿತವಾಗುತ್ತಿರುವಂತೆಯೇ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಕೋಲಾರ ಶಾಸಕ ಶ್ರೀನಿವಾಸಗೌಡಗೆ ಮಾನ ಮರ್ಯಾದೆ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಮತದಾನ ಮುಗಿಸಿ ಹೊರಬಂದ ಶ್ರೀನಿವಾಸಗೌಡ, ತಾವು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವನಾಗಿದ್ದೆ ಹಾಗಾಗಿ ಕಾಂಗ್ರೆಸ್‌ಗೆ ಮತ ನೀಡಿದ್ದೇನೆ ಎಂದರು. ಈದೇ ವೇಳೆ ತುಮಕೂರು ಗುಬ್ಬಿ ಶ್ರೀನಿವಾಸ್ ಯಾವುದೇ ಪಕ್ಷಕ್ಕೆ ಮತ ನೀಡಿಲ್ಲ ಎನ್ನಲಾಗಿದೆ. ಯಾವುದೇ ಅಭ್ಯರ್ಥಿಗೆ ಮತ ನೀಡದಿದ್ದರೂ ಆ ಮತ ಕುಲಗೆಟ್ಟ ಮತ ಎಂದು ಪರಿಗಣಿಸಲಾಗುತ್ತದೆ. ತಾವು ಜೆಡಿಎಸ್‌ಗೆ ಮತ ನೀಡಿರುವುದಾಗಿ ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ, ಆದರೂ ಜೆಡಿಎಸ್ ನಾಯಕರಿಗೆ ಈ ಕುರಿತು ಅನುಮಾನವಿದೆ. ಸಂಜೆ ವೇಳೆಗೆ ಅಸಲಿ ವಿಚಾರ ತಿಳಿದುಬರಲಿದೆ.
ಇದನ್ನೂ ಓದಿ | ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದದ ರಾಜಕಾರಣ: ಎಚ್.ಡಿ. ಕುಮಾರಸ್ವಾಮಿ
ಇದೆಲ್ಲದರ ನಂತರ ಮಾತನಾಡಿದ ಕುಮಾರಸ್ವಾಮಿ ನೇರವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನೊಂದು ಪಕ್ಷದವರನ್ನು ಹೈಜಾಕ್ ಮಾಡುವ ನೀವು ಪ್ರಜಾಪ್ರಭುತ್ವ ಉಳಿಸುತ್ತೀರ? 2016ರಲ್ಲಿ ನಾವೂ ಅಲ್ಪಸಂಖ್ಯಾತ ಅಭ್ಯರ್ಥಿ ಬಿ.ಎಂ. ಫಾರೂಖ್ ಅವರನ್ನು ಕಣಕ್ಕಿಳಿಸಿದ್ದೆವು. ಆಗ ನೀವೇ ಅವರ ವಿರುದ್ಧ ಅಡ್ಡಮತದಾನ ಮಾಡಿ ಸೋಲಿಸಿದಿರಿ.
ಹೋಗಲಿ ಶ್ರೀನಿವಾಸಗೌಡ ಮತದಿಂದ ನಿಮ್ಮ ಅಭ್ಯರ್ಥಿ ಗೆಲ್ಲುತ್ತಾರ? ಖಂಡಿತ ಇಲ್ಲ. ಹಾಗಾದರೆ ಈ ರೀತಿ ಮಾಡಿದ್ದು ಏಕೆ ಎಂದರೆ ಬಿಜೆಪಿಗೆ ಅನುಕೂಲ ಮಾಡಿಕೊಡಲು. ಇನ್ನು ಮುಂದೆ ಯಾವ ನೈತಿಕತೆ ಇಟ್ಟುಕೊಂಡು ಬಿಜೆಪಿ ವಿರುದ್ಧ ಮಾತನಾಡುತ್ತೀರ? ಎಂದು ಕುಮಾರಸ್ವಾಮಿ ಹೇಳಿದರು.
ಶ್ರೀನಿವಾಸಗೌಡ ವಿರುದ್ಧ ವಾಗ್ದಾಳಿ ಮಾಡಿದ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಬೆಂಬಲದಿಂದ ಗೆದ್ದಿರುವ ವ್ಯಕ್ತಿ ಇವರು. ಇದು ಜೆಡಿಎಸ್ ಕಾರ್ಯಕರ್ತರಿಗೆ ಮಾಡಿರುವ ಅವಮಾನ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದು ಕೆಲಸ ಮಾಡಬೇಕಿತ್ತು. ಒಂದು ಕಡೆ ಜೆಡಿಎಸ್ ಶಾಸಕ ಸ್ಥಾನವೂ ಬೇಕು, ಮತ್ತೊಂದೆಡೆ ಹೋಗೆ ಮಾಡುತ್ತೀರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಶಿಕ್ಷೆ ಕೊಡಲು ಯಾವ ಕಾನೂನೂ ಇಲ್ಲ. ದೂರಿನಿಂದ ಏನೂ ಆಗುವುದಿಲ್ಲ. ನಿಮ್ಮ ಬೆಂಬಲ ಇಲ್ಲದಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಎದುರಿಸಲು ಶಕ್ತಿ ಇದೆ ಎಂದು ಅಡ್ಡಮತದಾನ ಮಾಡಿದ ಹಾಗೂ ಮಾಡಲಿರುವ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ | ವಿಸ್ತಾರ Explainer: ರಾಜ್ಯಸಭೆ ಮೇಲುಗೈಗೆ ಬಿಗ್ ಫೈಟ್, ಮೇಲ್ಮನೆಗೆ ಇರುವ ಪವರ್ ಏನು? ಸದಸ್ಯರ ಆಯ್ಕೆ ಮಾಡೋದು ಹೇಗೆ?