ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ತಾವು ಆಡಿದ್ದ ʼಅವಾಚ್ಯʼ ಪದಬಳಕೆಯನ್ನು ಹಿಂಪಡೆಯುತ್ತಿರುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಮೇಶ್ ಕುಮಾರ್ ಶಾಸಕರಾಗಿರುವ ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆ ವೀಕ್ಷಣೆ ಮಾಡಿದ್ದರು. ಶಾಲಾ ಕ್ಟಡವನ್ನು ಸರಿಪಡಿಸುವಂತೆ ಮಕ್ಕಳು ಈ ವೇಳೆ ಪ್ರತಿಭಟನೆ ಮಾಡಿದ್ದರು. ಬಳಿಕ ಕಾರ್ ಹತ್ತುವ ವೇಳೆ ಕುಮಾರಸ್ವಾಮಿ ಮಾತನಾಡಿದ್ದರು. ಭಾಷಣ ಮಾಡುವ ರಮೇಶ್ ಕುಮಾರ್ ಶಾಲೆಯನ್ನು ಈ ಸ್ಥಿತಿಯಲ್ಲಿ ಇಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕುತ್ತ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು”
“ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ | JDS Pancharatna | ಕುತಂತ್ರ ರಾಜಕಾರಣದಿಂದ ಎಲೆಕ್ಷನ್ ಗೆಲ್ಲಲು ಬಿಜೆಪಿ ಯತ್ನ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ