ರಮೇಶ ದೊಡ್ಡಪುರ
ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ (Karnataka Election) ಸಿದ್ದರಾಮಯ್ಯ ಅವರ ಸೋಲು-ಗೆಲುವು, ಸ್ವಪಕ್ಷೀಯರ ಜತೆಗೆ ವಿರೋಧ ಪಕ್ಷದವರ ಪಾತ್ರವನ್ನೂ ಪ್ರಮುಖವಾಗಿಸಿದೆ.
ಈ ಹಿಂದೆ ಮೈಸೂರು ಜಿಲ್ಲೆಯ ವರುಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಿದ್ದರಾಮಯ್ಯ, ಆ ಕ್ಷೇತ್ರವನ್ನು ಪುತ್ರ ರಾಕೇಶ್ ಸಿದ್ದರಾಮಯ್ಯಗೆ ಬಿಟ್ಟುಕೊಡುವ ಉಮೇದು ಹೊಂದಿದ್ದರು. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದ ರಾಕೇಶ್, ಅದಾಗಲೆ ಜನರ ನಡುವೆ ಗುರುತಿಸಿಕೊಂಡಿದ್ದರು. ಆದರೆ 2016ರಲ್ಲಿ ದೂರದ ಬೆಲ್ಜಿಯಂನಲ್ಲಿ ರಾಕೇಶ್ ಅಕಾಲಿಕ ನಿಧನವಾಗಿದ್ದರಿಂದ ಸಿದ್ದರಾಮಯ್ಯ ಅವರ ಜಂಘಾ ಬಲವೇ ಉಡುಗಿ ಹೋಗಿತ್ತು. ನೇರ ರಾಜಕಾರಣಕ್ಕೆ ಇಳಿಯದೆ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಚುನಾವಣಾ ಕಣಕ್ಕಿಳಿಸಿದ ಸಿದ್ದರಾಮಯ್ಯ, ಅದೇ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟರು. ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರು.
ಸಿದ್ದರಾಮಯ್ಯ ವಿರುದ್ಧ ಶತಾಯ ಗತಾಯ ಗೆಲ್ಲಬೇಕು ಎಂದು ನಿರ್ಧರಿಸಿದ ಜಿ.ಟಿ. ದೇವೇಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ಬಿಜೆಪಿಯೂ ತನ್ನಲ್ಲಿರುವ ಅಲ್ಪಸ್ವಲ್ಪ ಶಕ್ತಿಯನ್ನೇ ಅವರಿಗೆ ಧಾರೆ ಎರೆಯಿತು. ಹೆಚ್ಚು ಸ್ಪರ್ಧೆ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಗೊತ್ತಾಗುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬಿಜೆಪಿ ಸಂಘಟನೆಯ ಅಷ್ಟಿಷ್ಟು ಮತಗಳೂ ಜೆಡಿಎಸ್‌ಗೆ ಹೋಗುವಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಜಿ.ಟಿ. ದೇವೇಗೌಡ 121325 (ಶೇ. 53.62) ಮತ ಗಳಿಸಿದರೆ, ಸಿದ್ದರಾಮಯ್ಯ ಕೇವಲ 85283 (ಶೇ. 37.69) ಮತಗಳಿಸಿ ಬರೊಬ್ಬರಿ 36,042 ಮತಗಳ ಅಂತರದಿಂದ ಹೀನಾಯ ಸೋಲುಂಡರು.
ಜನರ ನಾಡಿ ಮಿಡಿತವನ್ನು ಅರಿಯುವವರಲ್ಲಿ ಸಿದ್ಧಹಸ್ತರಾದ ಸಿದ್ದರಾಮಯ್ಯ, ಈ ಸೋಲನ್ನು ಮೊದಲೇ ಗ್ರಹಿಸಿದ್ದರು. ಇದಕ್ಕಾಗಿಯೇ ಕೊಪ್ಪಳ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜತೆಗೆ ಪ್ರಮುಖವಾಗಿ ಕುರುಬ ಸಮುದಾಯದ ಮತಗಳು ಹೆಚ್ಚಾಗಿರುವುದು ಈ ಆಯ್ಕೆಯ ಪ್ರಮುಖ ಕಾರಣವಾಗಿತ್ತು. ಈ ಕ್ಷೇತ್ರದಲ್ಲಿ ಕುರುಬ ಸಮುದಾಯದ ಜತೆಗೇ ವಾಲ್ಮೀಕಿ ಸಮುದಾಯದ ಮತಗಳೂ ಗಣನೀಯವಾಗಿರುವುದರಿಂದ, ಲಿಂಗಾಯತ ಮತಗಳನ್ನೂ ಸೇರಿಸಿಕೊಂಡು ಪ್ರಬಲ ಸ್ಪರ್ಧೆ ನೀಡಲು ಬಿಜೆಪಿ ನಿರ್ಧಾರ ಮಾಡಿತು. ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ಮೊಣಕಾಲ್ಮೂರಿನ ಜತೆಗೆ ಬಾದಾಮಿಯಲ್ಲೂ ಕಣಕ್ಕಿಳಿಸಲಾಯಿತು. ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ 67,599 ಮತಗಳಿಸಿದರೆ ಶ್ರೀರಾಮುಲು 65,903 ಮತ ಗಳಿಸಿದರು. ಕೇವಲ 1,696 ಮತಗಳ ಅಂತರದಲ್ಲಿ ಗೆದ್ದ ಸಿಎಂ, ಹೇಗೋ ಮತ್ತೊಮ್ಮೆ ವಿಧಾನಸಭೆ ಪ್ರವೇಶಕ್ಕೆ ರಹದಾರಿ ಪಡೆದರು. ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಕಾಂಗ್ರೆಸ್ ಸೋತದ್ದು ಒಂದು, ಗೆದ್ದದ್ದು ಒಂದು ಕ್ಷೇತ್ರವಾದರೂ ಇದರ ಪರಿಣಾಮ ಅಗಾಧ.
ಬಾದಾಮಿಯಲ್ಲಿಯೂ ಅತ್ಯಂತ ಪ್ರಬಲ ಸ್ಪರ್ಧೆಯನ್ನು ಶ್ರೀರಾಮುಲು ಒಡ್ಡಿದ್ದರಿಂದಾಗಿ ಚುನಾವಣೆಗೂ ಮುನ್ನ ಸುಮಾರು 15 ದಿನಗಳು ಸಿದ್ದರಾಮಯ್ಯ ನೇರವಾಗಿ ಹಾಗೂ ಪರೋಕ್ಷವಾಗಿ ತಮ್ಮ ಗೆಲುವಿಗಾಗಿಯೇ ಶ್ರಮಿಸುವಂತಾಯಿತು. ಈ ಕ್ಷೇತ್ರದಲ್ಲಿ ಸ್ಪರ್ಧೆ ಸುಲಭವಾಗಿಬಿಟ್ಟರೆ ಸಿದ್ದರಾಮಯ್ಯ ತಮ್ಮ ಶಿಷ್ಯರ ಇತರೆ ಕ್ಷೇತ್ರಗಳಲ್ಲಿ ಸಂಚರಿಸಿ ಇನ್ನು 8-10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ಸಾಧ್ಯತೆಯಿತ್ತು. ಇದನ್ನು ಅರಿತಿದ್ದ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಒಂದೇ ಕ್ಷೇತ್ರಕ್ಕೆ ಕಟ್ಟಿಹಾಕುವ ತಂತ್ರ ಹೂಡಿ ಯಶಸ್ವಿಯಾಯಿತು.
ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜಯಗಳಿಸುವಲ್ಲಿ ಎದುರಾಳಿ ಸ್ಪರ್ಧಿ ಶ್ರೀರಾಮುಲು ಅವರ ಪಾತ್ರವೂ ಇತ್ತು. ಚುನಾವಣೆಗೆ ಎರಡು ಮೂರು ದಿನ ಇರುವಂತೆ ಶ್ರೀರಾಮುಲು ಬಾದಾಮಿಯತ್ತ ಗಮನ ನೀಡಲಿಲ್ಲ. ಬಹುತೇಕ ಇತ್ತ ಸುಳಿಯಲೇ ಇಲ್ಲ ಎಂದರೂ ತಪ್ಪಲ್ಲ. ಬಿಜೆಪಿಗೆ ಅಂತಿಮ ಕ್ಷಣದಲ್ಲಿ ದೊರಕಬಹುದಾಗಿದ್ದ 8-10 ಸಾವಿರ ಮತಗಳು ಈ ಕಾರಣದಿಂದ ಸಿದ್ದರಾಮಯ್ಯ ಅವರಲ್ಲೇ ಉಳಿದು ಕೂದಲೆಳೆ ಅಂತರದಲ್ಲಿ ಜಯಗಳಿಸಿದರು ಎಂಬ ಚರ್ಚೆ ಪಕ್ಷದ ವಲಯದಲ್ಲೇ ನಡೆಯುತ್ತಿರುತ್ತದೆ. ಇದನ್ನು ಸ್ವತಃ ಶ್ರೀರಾಮುಲು ಅವರೇ ಇತ್ತೀಚೆಗೆ ಹೇಳಿದ್ದಾರೆ. ಎಷ್ಟೇ ಆದರೂ ತಾವಿಬ್ಬರೂ ಹಿಂದುಗಳಿದ ವರ್ಗಗಳಿಗೆ ಸೇರಿದವರು. ನಾನು ಬೇರೆ ಪಕ್ಷದಲ್ಲಿರಬಹುದು, ಅವರು ಬೇರೆ ಪಕ್ಷದಲ್ಲಿರಬಹುದು. ಆದರೆ ಇಬ್ಬರೂ ವಿಧಾನಸಭೆ ಪ್ರವೇಶ ಮಾಡಬೇಕು ಎಂಬ ಕಾರಣಕ್ಕೆ ʼಹೀಗೆʼ ಮಾಡಿದೆ ಎಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದರು.
ಬಂಧನ, ಸುಧಾಕರ್ ಮತ್ತು ಮುನಿಯಪ್ಪ
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಿದಂತೆಯೇ ಈ ಬಾರಿಯೂ ಮಾಡುವ ಎಲ್ಲ ಸಾಧ್ಯತೆಗಳೂ ಕೋಲಾರದಲ್ಲಿವೆ. ಮೊದಲನೆಯದಾಗಿ ಕೋಲಾರ ಕಾಂಗ್ರೆಸ್‌ನಲ್ಲಿರುವ ಭಾರೀ ಭಿನ್ನಮತ. ಈಗಾಗಲೆ ಮೂರ್ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ರಾಜ್ಯದ ಇತರೆಡೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಸಹ ಇದರಿಂದ ಹೊರತಾಗಿಲ್ಲ. ಕೆ.ಸಿ. ವ್ಯಾಲಿಯಿಂದ ನೀರು ತಂದು ಕೆರೆಗಳನ್ನು ತುಂಬಿಸಿದೆ ಎನ್ನುವ ರಮೇಶ್ ಕುಮಾರ್ ವಾದಕ್ಕೆ ಪೂರ್ಣ ಬೆಂಬಲ ಇಲ್ಲ. ಕೊಳಚೆ ನೀರು ನೀಡಿದ್ದಾರೆ, ತರಕಾರಿ ಬೆಳೆಯಲು ಆಗುವುದಿಲ್ಲ, ರೋಗರುಜಿನ ಬರುತ್ತದೆ ಎಂಬ ಸಾಮಾನ್ಯ ಅಭಿಪ್ರಾಯ ಜನರಲ್ಲಿದೆ. ಕೆಲವರು ಇದಕ್ಕೆ ಅಪವಾದವೂ ಇದ್ದಾರೆ. ಈ ರೀತಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕೋಲಾರ ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧರಿಸಿದರೆ ಅದರ ಪ್ರಭಾವಳಿಯಿಂದ ತಾವೂ ಪಾಸ್ ಆಗಬಹುದು ಎಂದು ಲೆಕ್ಕ ಮಾಡಿದ್ದಾರೆ.
ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗೆ ಕೈಕೊಟ್ಟಿದ್ದರಿಂದಲೇ 2019ರ ಲೋಕಸಭೆ ಚುನಾವಣೆಯಲ್ಲಿ ತಾವು ಸೋಲಲು ಕಾರಣ ಎನ್ನುವುದು ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಬಲವಾದ ನಂಬಿಕೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧವೂ ಮುನಿಸಿಕೊಂಡಿರುವ ಮುನಿಯಪ್ಪ, ಇತ್ತೀಚೆಗೆ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದಾಗ ಗೈರಾಗಿದ್ದರು. ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಸಹ ಗೈರಾಗಿದ್ದರು. ಕೋಲಾರದಲ್ಲಿ ನಡೆದ ಅನೇಕ ಸಭೆಗಳಲ್ಲಿ ಸಿದ್ದರಾಮಯ್ಯ ಪರಕ್ಕಿಂತಲೂ ವಿರೋಧವೇ ಹೆಚ್ಚಾಗಿ ಕಂಡುಬಂದಿದೆ.
ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದೆ. ಕಳೆದ ಬಾರಿ ಜೆಡಿಎಸ್‌ನಿಂದಲೇ ಗೆದ್ದಿದ್ದ ಕೆ. ಶ್ರೀನಿವಾಸ ಗೌಡ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿ, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ಗೆ 21% ಮತಗಳು ಲಭಿಸಿದ್ದವು. ಈಗಾಗಲೆ ಸಿ.ಎಂ. ಆರ್. ಶ್ರೀನಾಥ್ ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಪಂಚರತ್ನ ರಥಯಾತ್ರೆಯನ್ನು ಕೋಲಾರದಿಂದಲೇ ಆರಂಭಿಸಿದ್ದಾರೆ. ಕೋಲಾರದಲ್ಲಿ ತಮಗೆ ʼಕೈಕೊಟ್ಟʼ ಸೇಡನ್ನು ತೀರಿಸಿಕೊಳ್ಳಲು ಜೆಡಿಎಸ್ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿದೆ. ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕ್ಷೇತ್ರದಲ್ಲಿ ಸಂಚರಿಸಿ ಒಂದಷ್ಟು ಮುಸ್ಲಿಂ ಮತಗಳನ್ನು ಪಡೆದರೂ ಅಷ್ಟರ ಮಟ್ಟಿಗೆ ಸಿದ್ದರಾಮಯ್ಯಗೇ ನಷ್ಟ. ಹಾಗಾಗಿ ಜೆಡಿಎಸ್‌ನಿಂದ ಮೊದಲ ಸ್ಪರ್ಧೆ ಏರ್ಪಡುತ್ತದೆ.
ಸಿದ್ದರಾಮಯ್ಯ ಅವರಿಗೆ ಎರಡನೇ ಪ್ರತಿಸ್ಪರ್ಧಿ ವರ್ತೂರು ಪ್ರಕಾಶ್. ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಈ ಬಾರಿ ಬಿಜೆಪಿಯಿಂದ ಟಿಕೆಟ್ ಲಭಿಸುವ ನಿರೀಕ್ಷೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರಂತೆಯೇ ಕುರುಬ ಸಮುದಾಯಕ್ಕೆ ಸೇರಿದ ವರ್ತೂರು ಪ್ರಕಾಶ್ ಕಳೆದ 2018ರ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಎಂಬ ಪಕ್ಷದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಕಾಂಗ್ರೆಸ್ 21% ಮತ ಪಡೆದರೆ ವರ್ತೂರು ಪಡೆದದ್ದು 19.85% ಮತಗಳು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ತಾವು ಸಿದ್ಧ ಎಂದು ಈಗಾಗಲೆ ವರ್ತೂರು ಹೇಳಿದ್ದಾರೆ. ಆದರೆ, ಕುರುಬ ಸಮುದಾಯಕ್ಕೆ ಸದ್ಯಕ್ಕಂತೂ ಪ್ರಶ್ನಾತೀತ ನಾಯಕ ಎಂದರೆ ಸಿದ್ದರಾಮಯ್ಯ. ಈ ಹಿಂದೆ ಶ್ರೀನಿವಾಸ ಗೌಡ ಸ್ಪರ್ಧೆ ಮಾಡಿದಾಗ ವರ್ತೂರು ಜತೆ ನಿಂತಿದ್ದ ಕುರುಬ ಸಮುದಾಯ, ಸ್ವತಃ ಸಿದ್ದರಾಮಯ್ಯ ಸ್ಪರ್ಧೆ ಮಾಡಿದಾಗಲೂ ವರ್ತೂರು ಪ್ರಕಾಶ್‌ಗೆ ಮತ ನೀಡುತ್ತದೆಯೇ ಎಂಬುದು ಪ್ರಶ್ನೆ. ಈ ಕಾರಣದಿಂದಾಗೊ ಬಿಜೆಪಿಯು ವರ್ತೂರು ಪ್ರಕಾಶ್‌ಗೆ ಟಿಕೆಟ್ ನೀಡುತ್ತದೆಯೇ ಎನ್ನುವುದೂ ಪ್ರಶ್ನೆಯೆ. ಹಾಗೊಂದು ವೇಳೆ ಟಿಕೆಟ್ ಕೊಟ್ಟರೂ, ಒಂದಷ್ಟು ಕುರುಬ ಮತಗಳನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. ಕ್ಷೇತ್ರದಲ್ಲಿ ವರ್ತೂರು ಫ್ಯಾಕ್ಟರ್ ಅನ್ನು ಸಿದ್ದರಾಮಯ್ಯ ಹೇಗಾದರೂ ಹ್ಯಾಂಡಲ್ ಮಾಡಲೇಬೇಕು.
ಬಿಜೆಪಿಯು ಕೋಲಾರದಲ್ಲಿ ಭಾರೀ ಸದೃಢವಾಗಿದೆ ಎನ್ನಲು ಆಗುವುದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಕಳಿಸಿದ್ದು ಕೇವಲ 6.96% ಮತಗಳು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಸಂಸದ ಆಯ್ಕೆಯಾಗಿದ್ದಾರೆ. ಮುನಿಸ್ವಾಮಿ ಸಾಕಷ್ಟು ಸಕ್ರಿಯವಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಕೊರೊನಾ ಸಮಯದಲ್ಲೂ ಅನೇಕ ಕಾರ್ಯಗಳ ಮೂಲಕ ಹೆಸರು ಮಾಡಿದ್ದಾರೆ. ಕೋಲಾರದ ಕ್ಲಾಕ್ ಟವರ್ ವಿಚಾರದಲ್ಲೂ ಕಠಿಣವಾಗಿ ನಿರ್ಧಾರ ಕೈಗೊಂಡು ಹಿಂದು ಮತಗಳನ್ನು ತಮ್ಮತ್ತ ಸೆಳೆಯುವ ಯತ್ನ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಈ ಅಂಶವು ಪ್ರಮುಖವಾಗುತ್ತದೆ. ಜತೆಗೆ, ಎಲ್ಲಕ್ಕಿಂತ ಮುಖ್ಯವಾಗಿ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕ್ಷೇತ್ರದಲ್ಲಿ ಸಾಕಷ್ಟು ನಿಯಂತ್ರಣ ಹೊಂದಿದ್ದಾರೆ. ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ಹೇಳಿದಂತೆ, ಸಿದ್ದರಾಮಯ್ಯ ಗೆಲುವು ಈಗ ಸುಧಾಕರ್ ಕೈಯಲ್ಲಿದೆ. ಸುಧಾಕರ್ ಮನಸ್ಸು ಮಾಡಿದರೆ ಸಿದ್ದರಾಮಯ್ಯ ಸೋಲುತ್ತಾರೆ ಎಂದಿದ್ದಾರೆ. “ಕೋಲಾರದಲ್ಲಿ ಬಿಜೆಪಿ ಪಕ್ಷವಿಲ್ಲ” ಎಂದಿರುವ ಸಿದ್ದರಾಮಯ್ಯ, ಜತೆಜತೆಗೇ, “ಆದರೂ ಬಿಜೆಪಿ ಬಗ್ಗೆ ಜನ ಎಚ್ಚರವಾಗಿರಬೇಕು” ಎಂದು ಟ್ವೀಟ್ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ.
ಕೆಪಿಸಿಸಿಯಿಂದ ಕೋಲಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಜಿಲ್ಲಾ ಅಧ್ಯಕ್ಷರೂ ಆಗಿದ್ದ ಎಂ. ನಾರಾಯಣ ಸ್ವಾಮಿ ಅವರ ಜಾಗಕ್ಕೆ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಎಂ. ಆರ್. ಸೀತಾರಾಂ ಅವರನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೂಲಕ ನೇಮಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೂ ಸಾಕಷ್ಟಿದೆ. ಅಂದಾಜು 30 ಸಾವಿರ ಒಕ್ಕಲಿಗರಿದ್ದು, ಎಸ್‌ಸಿಎಸ್‌ಟಿ(60 ಸಾವಿರ), ಮುಸ್ಲಿಂ (40 ಸಾವಿರ) ನಂತರ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವುದು ಕುರುಬ(20 ಸಾವಿರ) ಸಮುದಾಯದ ಮತಗಳು. ಸಹಜವಾಗಿಯೇ ಜೆಡಿಎಸ್ ಜತೆಗೆ ಗುರುತಿಸಿಕೊಳ್ಳುವ ಒಕ್ಕಲಿಗ ಸಮುದಾಯ, ಸಿದ್ದರಾಮಯ್ಯ ಸೋಲುಂಡರೆ ಡಿ.ಕೆ. ಶಿವಕುಮಾರ್‌ಗೆ ಸಿಎಂ ಸ್ಥಾನದ ಅವಕಾಶ ಹೆಚ್ಚಾಗುತ್ತದೆ ಎಂದು ಭಾವಿಸಿ ಮತ್ತೂ ಧೃವೀಕರಣಗೊಂಡರೆ ಅದರ ಪರಿಣಾಮವೂ ಸಿದ್ದರಾಮಯ್ಯ ಮೇಲೆಯೇ ಆಗುತ್ತದೆ. ಇಷ್ಟೆಲ್ಲ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾವ ಪಾತ್ರ ವಹಿಸುತ್ತಾರೆ, ಎಷ್ಟು ಸಹಕಾರ ನೀಡುತ್ತಾರೆ, ಎಷ್ಟು ಪ್ರಮಾಣದಲ್ಲಿ ಅಂತರ ಕಾಯ್ದುಕೊಳ್ಳುತ್ತಾರೆ ಎನ್ನುವುದು ಮತ್ತೊಂದು ಪ್ರಮುಖ ಪ್ರಶ್ನೆ.
ಅಂದರೆ ಕೋಲಾರದಲ್ಲಿ ಇಷ್ಟೆಲ್ಲ ಸವಾಲುಗಳನ್ನು ಹೊಂದಿರುವ ಸಿದ್ದರಾಮಯ್ಯ, ನಿರಾಯಾಸವಾಗಿ ರಾಜ್ಯವನ್ನು ಸುತ್ತುವುದು ಕಷ್ಟವಾಗುತ್ತದೆ. ಚುನಾವಣೆಗೂ ಮುನ್ನ ಮುನಿಯಪ್ಪ ಅವರ ಮನವೊಲಿಸಿರುವುದಾಗಿ ತೋರಿಸಿಕೊಂಡಿದ್ದಾರೆ. ಮುನಿಯಪ್ಪ ಜತೆಯಲ್ಲೇ ಕಾರಿನಲ್ಲಿ ವೇದಿಕೆಗೆ ಆಗಮಿಸಿ, ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಮುನಿಯಪ್ಪ ಸಹ ಸಿದ್ದರಾಮಯ್ಯ ಪರ ಮಾತಾಡಿದ್ದಾರಾದರೂ, ಹೈಕಮಾಂಡ್ ಹೇಳಿದರೆ ಕೆಲ ಮಾಡುತ್ತೇನೆ ಎಂಬ ನಿಬಂಧನೆಯನ್ನೂ ಇಟ್ಟಿದ್ದಾರೆ. ರಾಜಕೀಯ ಎನ್ನುವುದು ನಿಂತ ನೀರಲ್ಲ, ಹಾಗೆಯೇ ರಾಜಕೀಯ ಸಂಬಂಧಗಳೂ. ಈಗ ಸಹಕಾರ ನೀಡುತ್ತೇನೆ ಎಂದಿರುವ ಮುನಿಯಪ್ಪ ಯಾವಾಗ ಬದಲಾಗುತ್ತಾರೆ ಹೇಳಲು ಸಾಧ್ಯವಿಲ್ಲ.
ಇದೆಲ್ಲವನ್ನೂ ತೂಗಿಸಿಕೊಂಡು ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವುದರಲ್ಲಿ ಹೆಚ್ಚಿನ ಸಂಶಯ ಉಳಿಯದು. ಆದರೆ ನಿಜವಾಗಲೂ ನಷ್ಟವಾಗುವುದು ಸಿದ್ದರಾಮಯ್ಯ ಸಿಎಂ ಆಗುವ ಕನಸಿಗೆ. ತಾವು ಪ್ರಚಾರವನ್ನೇ ನಡೆಸದೆ ಸುಲಭವಾಗಿ ಗೆದ್ದುಬರುವ ಕ್ಷೇತ್ರದ ಹುಡುಕಾಟದಲ್ಲಿ ಸಿದ್ದರಾಮಯ್ಯ ಇದ್ದರು. ಇದರ ಕಾರಣವೇನೆಂದರೆ, ತಮ್ಮ ಬೆಂಬಲಿಗ 50-60 ಶಾಸಕರನ್ನು ಗೆಲ್ಲಿಸಿಕೊಂಡು ಬರುವುದು. ಆಗ ಮಾತ್ರ ತಮ್ಮ ಸಿಎಂ ಆಗುವ ಕನಸು ನನಸಾಗುತ್ತದೆ ಎಂದು ಅರಿತಿದ್ದಾರೆ. ಆದರೆ ಈ ಹಿಂದೆ ಬಾದಾಮಿಯಂತೆ ಕೋಲಾರದಲ್ಲೂ ಲಾಕ್ ಆಗಿಬಿಟ್ಟರೆ ಸಿದ್ದರಾಮಯ್ಯ ಸಿಎಂ ಕನಸು ದೂರಾಗುತ್ತದೆ. ಕಳೆದ ಬಾರಿ ಶ್ರೀರಾಮುಲು ವಹಿಸಿದ ʼಮುಖ್ಯʼ ಪಾತ್ರವನ್ನು ಈ ಬಾರಿ ಸುಧಾಕರ್ ವಹಿಸುತ್ತಾರೆಯೇ ಎನ್ನುವುದು ಪ್ರಶ್ನೆ. ಒಂದು ಕಾಲದ ರಾಜಕೀಯ ಗುರು ಸಿದ್ದರಾಮಯ್ಯ ಒಂದೆಡೆಯಾದರೆ, ತಾನು ಬಿಜೆಪಿಯ ಕಟ್ಟಾಳು ಎಂದು ನಿರೂಪಿಸುವ ಸವಾಲು ಮತ್ತೊಂದೆಡೆ. ಇದೆಲ್ಲವನ್ನೂ ಚುನಾವಣೆಗೆ ಮುನ್ನವೇ ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸವಾಲು.
ದೇವೇಗೌಡರ ರೀತಿ ಸಿಕ್ಕಿಕೊಂಡರ?
2019ರ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಅಚಾನಕ್ಕಾಗಿ ತುಮಕೂರಿನಿಂದ ಸ್ಪರ್ಧೆ ಮಾಡಿದರು. ಒಕ್ಕಲಿಗ ಮತಗಳು ತಮಗೆ ಲಭಿಸಿ ಗೆಲ್ಲಬಹುದು ಎಂದು ಭಾವಿಸಿದ್ದರು. ಆದರೆ ಅಲ್ಲಿ ಹೇಮಾವತಿ ಅಲೆಯು ದೇವೇಗೌಡರ ವಿರುದ್ಧ ತಿರುಗಿತು. ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತುಮಕೂರಿಗೆ ಪ್ರತಿವರ್ಷ 0.24 ಟಿಎಂಸಿ ನೀರು ಲಭಿಸಬೇಕು ಎನ್ನುವುದು ನೀರಾವರಿ ಸಲಹಾ ಸಮಿತಿ ನಿರ್ದೇಶನ. ಆದರೆ ಈ ಸಮಿತಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಧ್ಯಕ್ಷ. ಇಲ್ಲಿವರೆಗೆ ನಿಗದಿತ ಪ್ರಮಾಣದ ನೀರು ತುಮಕೂರಿಗೆ ಹರಿಯದೇ ಇರಲು ದೇವೇಗೌಡರು ಹಾಗೂ ರೇವಣ್ಣ ಕಾರಣ ಎನ್ನುವ ಮಾತು ಕ್ಷೇತ್ರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು. ಈ ವಾದವನ್ನು ಭರ್ಜರಿಯಾಗಿ ಬಿಜೆಪಿ ಬಳಸಿಕೊಂಡಿದ್ದರಿಂದ ದೇವೇಗೌಡರು ಸೋಲಲು ಪ್ರಮುಖ ಕಾರಣವಾಯಿತು.
ತುಮಕೂರಿನಲ್ಲಿ ಹೇಮಾವತಿ ವಿಚಾರದಂತೆಯೇ ಕೋಲಾರದಲ್ಲಿ ಕೆ.ಸಿ. ವ್ಯಾಲಿ ವಿಚಾರವಿದೆ. ಬರಪೀಡಿತ ಕೋಲಾರಕ್ಕೆ ಎತ್ತಿನಹೊಳೆಯಿಂದ ನೀರು ತರುತ್ತೇವೆ ಎನ್ನುವುದು ಹಳೆಯ ಯೋಜನೆ. ಇದರ ಬದಲಿಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆಯನ್ನು ತಂದಿದ್ದಾಗಿ ರಮೇಶ್ ಕುಮಾರ್ ಹೇಳಿಕೊಳ್ಳುತ್ತಾರೆ.
ಈ ಯೋಜನೆ ನಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಅನೇಕ ವರದಿಗಳು ತಿಳಿಸುತ್ತವೆ. ಮೂರು ಹಂದಲ್ಲಿ ಸಂಸ್ಕರಣೆಯಾಗುವ ನೀರು, ಕೃಷಿ ಬಳಕೆಗೆ ಯೋಗ್ಯ ಎನ್ನುತ್ತವೆ ವೈಜ್ಞಾನಿಕ ವರದಿಗಳು. ಆದರೆ ಈ ನೀರು ಬಳಸಲು ಯೋಗ್ಯವಾಗಿಲ್ಲ ಎನ್ನುವುದು ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿರುವ ಅಭಿಪ್ರಾಯ. ಎತ್ತಿನ ಹೊಳೆ ಕೊಡಿ ಎಂದರೆ ಕೆ.ಸಿ. ವ್ಯಾಲಿ ಕೊಟ್ಟು ರೋಗ ರುಜಿನ ತಂದರು ಎಂಬ ಆರೋಪ ಕಾಂಗ್ರೆಸ್ ಮೇಲಿದೆ. ಐದು ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೂ ಈ ಆರೋಪ ಅಂಟಿಕೊಳ್ಳುವ ಎಲ್ಲ ಸಾಧ್ಯತೆ ಇದೆ.
ಇದನ್ನು ಅರಿತಿರುವ ಸಿದ್ದರಾಮಯ್ಯ, ಸೋಮವಾರವಷ್ಟೇ ಎತ್ತಿನ ಹೊಳೆ ಕುರಿತು ಮಾತನಾಡಿದ್ದಾರೆ. “ನಾವು ಕೆ.ಸಿ ವ್ಯಾಲಿ ಯೋಜನೆಗೆ 1,400 ಕೋಟಿ ಅನುದಾನ ನೀಡಿ, ಜಾರಿ ಮಾಡಿದ್ದೆವು, ಎನ್,ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು. ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದು ನಮ್ಮ ಕಾಲದಲ್ಲಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು. ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ರೂ.24,000 ಕೋಟಿ ಬೇಕಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಿದ್ದೇವೆ. 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ.” ಎಂದಿದ್ದಾರೆ. ಹೇಗಾದರೂ ಮಾಡಿ ಕೆ.ಸಿ. ವ್ಯಾಲಿ ಕುರಿತು ಇರುವ ನಕಾರಾತ್ಮಕ ಅಂಶ ಹೆಚ್ಚಾಗಬಾರದು ಎನ್ನುವುದು ಸಿದ್ದರಾಮಯ್ಯ ವಹಿಸಿರುವ ಎಚ್ಚರಿಕೆ. ಆದರೆ ಈ ತಂತ್ರ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎನ್ನುವುದನ್ನೂ ಕಾದುನೋಡಬೇಕಿದೆ. ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಚ್ಛೆಯಿದೆ, ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿರುವುದೂ ಕುತೂಹಲ ಮೂಡಿಸಿದೆ.
ಕೇಕ್ ವಾಕ್‌ನಂತಾಗಿದ್ದ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಪುತ್ರನ ರಾಜಕೀಯ ಭವಿಷ್ಯಕ್ಕೆ ಸಂಚಕಾರ ಎದುರಾಗುತ್ತದೆ ಎಂದು ಭಾವಿಸಿ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪುತ್ರ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಸಿಎಂ ಆಕಾಂಕ್ಷೆಗೇ ತಣ್ಣೀರೆರೆಚಿಕೊಳ್ಳುವ ಕೆಲಸಕ್ಕೆ ಮುಂದಾದರೇ ಎನ್ನುವ ಅನುಮಾನಗಳಿವೆ.