Site icon Vistara News

Kolar Election : ಕೆ.ಸಿ. ವ್ಯಾಲಿ ಯೋಜನೆಯನ್ನು ಹಾಡಿ ಹೊಗಳಿದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ: ನನಗೆ ಇದೇ ಸನ್ಮಾನ ಎಂದ ಸಿದ್ದರಾಮಯ್ಯ

UBPGA appreciates KC Valley

#image_title

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಳೆಯಾಗಿದ್ದ ನೀರನ್ನು ಶುದ್ಧೀಕರಿಸಿ ಕೋಲಾರ ಸೇರಿ ವಿವಿಧ ಜಿಲ್ಲೆಗಳ ಕೆರೆ ತುಂಬಿಸಲು ರೂಪಿಸಿದ ಕೆ.ಸಿ. ವ್ಯಾಲಿ ಯೋಜನೆಗೆ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರು ಮನತುಂಬಿ ಶ್ಲಾಘಿಸಿದ್ದಾರೆ. ಇದೀಗ ರಾಜ್ಯದ ಪ್ರವಾಸದಲ್ಲಿರುವ ಚಾಬ ಕೊರೊಸಿ ಅವರು ಕೋಲಾರದಲ್ಲೆ (Kolar Election) ನಿಂತು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಿಡಿಯೊ ಮಾಡಿರುವ ಚಾಬ ಕೊರೊಸಿ ಅವರು, ಈ ಪ್ರದೇಶ ಕೆಲ ವರ್ಷದ ಹಿಂದೆ ಬರಡಾಗಿತ್ತು. ಈಗ ಕೆರೆಯು ತುಂಬಿದೆ. ಇಲ್ಲಿನ ರೈತರ ಆದಾಯವು ಹಲವು ಪಟ್ಟು ಹೆಚ್ಚಳವಾಗಿದೆ. ಇಲ್ಲಿನ ಜನರು ಕುಡಿಯುವ ನೀರಿಗೂ ಸಂಕಟಪಡುತ್ತಿದ್ದರು. ಆದರೆ ಇದೇ ನೀರಿನಿಂದ ಬೆಳೆದ ತೆಂಗಿನ ಮರದ ಎಳನೀರನ್ನು ಕುಡಿಯುತ್ತಿದ್ದೇನೆ ಎಂದಿದ್ದಾರೆ. ಇದರ ಹಿಂದಿರುವ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.

ಕೆ.ಸಿ. ವ್ಯಾಲಿ ನೀರನ್ನು ಬಳಸುವುದರಿಂದ ಅನೇಕ ರೋಗ ರುಜಿನಗಳು ಬರುತ್ತಿವೆ, ಎತ್ತಿನ ಹೊಳೆ ನೀರೇ ಬೇಕಾಗಿತ್ತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕೋಲಾರ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಈ ಮಾತನ್ನು ಸಂತಸದಿಂದ ಸ್ವೀಕರಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕೆಸಿ ವ್ಯಾಲಿ ಯೋಜನೆ ತ್ಯಾಜ್ಯ ನೀರಿನ ಮರುಬಳಕೆಯಲ್ಲಷ್ಟೇ ಇತಿಹಾಸ ಸೃಷ್ಟಿಸಿರುವುದಲ್ಲ, ರೈತರ ಬದುಕಲ್ಲಿ ಬದಲಾವಣೆ ಮೂಡಿಸಿ ಜಾಗತಿಕ ನಾಯಕರ ಗಮನ ಸೆಳೆದಿದೆ ಎಂಬುದಕ್ಕೆ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರ ಮಾತುಗಳು ಸಾಕ್ಷಿ. ಮುಖ್ಯಮಂತ್ರಿಯಾಗಿ ಯೋಜನೆ ಜಾರಿಮಾಡಿದ ನನಗಿದು ಪ್ರಶಸ್ತಿ, ಸನ್ಮಾನಗಳಿಗಿಂತಲೂ ದೊಡ್ಡದು ಎಂದಿದ್ದಾರೆ.

Exit mobile version