ಕೋಲಾರ: ಬಂಡೆಕಲ್ಲು ಬ್ಲಾಸ್ಟ್ ಮಾಡುವಾಗ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಮೂವರು ಕಾರ್ಮಿಕರು ಕಣ್ಮರೆಯಾಗಿರುವ (Kolar news ) ಶಂಕೆ ವ್ಯಕ್ತವಾಗಿದೆ. ಕೋಲಾರದ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಬಳಿ ಘಟನೆ ನಡೆದಿದೆ.
ಬ್ಲಾಸ್ಟ್ ವೇಳೆ ಬೃಹತ್ ಗಾತ್ರದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಟ್ರಾಕ್ಟರ್, ಹಿಟಾಚಿ ಜಖಂಗೊಂಡಿದೆ. ಅವಘಡ ವೇಳೆ ಮೂವರು ಕಾರ್ಮಿಕರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬಂಡೆ ಕಲ್ಲಿನಡಿ ಏನಾದರೂ ಸಿಲುಕಿದ್ದರಾ ಎಂಬ ಆತಂಕ ಹೆಚ್ಚಾಗಿದೆ. ಸುಮಾರು 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಂಜುನಾಥ್ ಎಂಬುವರಿಗೆ ಸೇರಿದ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಸ್ಥಳಕ್ಕೆ ಟೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದೀಚೆಗೆ ಇದು ಎರಡನೇ ಅವಘಡ ಆಗಿದೆ. ಘಟನೆ ನಡೆದು ಗಂಟೆಗಳೇ ಕಳೆದರೂ ಗಣಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಗಣಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಕಣ್ಮರೆಯಾಗಿರುವ ಕಾರ್ಮಿಕರಿಗಾಗಿ ಹುಡುಕಾಟ ನಡೆದಿದೆ.
ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ; ಶಿರಸಿಯಲ್ಲಿ ನಿಷೇಧಿತ ಪಿಎಫ್‌ಐ ಸದಸ್ಯನ ಬಂಧನ
ಕಾರವಾರ: ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಯುವಕನೊಬ್ಬನನ್ನು ಎನ್‌ಐಎ ತಂಡ ಬಂಧಿಸಿದೆ. ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಎನ್‌ಐಎ ತಂಡ ದಾಳಿ (NIA Raid) ನಡೆಸಿ ಯುವಕನನ್ನು ಬಂಧಿಸಿದೆ.
ಅಬ್ದುಲ್ ಶಕೂರ್(32) ಬಂಧಿತ ಯುವಕ. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಕೆಲ ದಿನಗಳ ಹಿಂದಷ್ಟೇ ಬಕ್ರೀದ್ ಆಚರಣೆಗಾಗಿ ದಾಸನಕೊಪ್ಪಕ್ಕೆ ಬಂದಿದ್ದ. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಬನವಾಸಿ ಪೊಲೀಸರ ಸಹಕಾರದಿಂದ ಯುವಕನನ್ನು ಎನ್‌ಎಐ ಬಂಧಿಸಿದೆ.
ಬಂಧಿತ ಯುವಕ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯ ಆಗಿದ್ದು, ಈತ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ, ಶಿವಮೊಗ್ಗದಲ್ಲಿ ಮಸೀದಿ ಹಾಗೂ ಇತರೆ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪ ಈತನ ಮೇಲಿದೆ.
ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹಾಗೂ ಪಾಸ್‌ಪೋರ್ಟ್ ನಕಲಿ ದಾಖಲೆ ನೀಡಿದ ಆರೋಪದಡಿ ಆರೋಪಿಯನ್ನು ಬಂಧಿಸಿದ್ದು, ಸದ್ಯ ಆರೋಪಿಗೆ ನೋಟೀಸ್ ನೀಡಿ ಗುಪ್ತ ಸ್ಥಳದಲ್ಲಿ NIA ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ