Site icon Vistara News

Makar Sankranti: ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ರೆ ಈ ಊರಿಗೆ ಕೇಡು-ಜಾನುವಾರುಗಳ ಸಾವು!

NO Makar Sankranti Celebration in Kolar

ಕೋಲಾರ: ರಾಜ್ಯದ ಹಲವೆಡೆ ವಿವಿಧ ಹೆಸರಲ್ಲಿ ಸಂಕ್ರಾಂತಿ ಹಬ್ಬವನ್ನು (Makar Sankranti) ಆಚರಿಸಲಾಗುತ್ತಿದೆ. ಜನರು ತಮ್ಮ ಅಕ್ಕ-ಪಕ್ಕದ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲವನ್ನು ಬೀರುವ ಸಂಪ್ರಾದಯವಿದೆ. ಇಂತಹ ಸಂಭ್ರಮವನ್ನು ನಾಡಿನಾದ್ಯಂತ ಆಚರಿಸುತ್ತಿದ್ದರೆ ಅದೊಂದು ಊರಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸಂಕ್ರಾಂತಿ ಹಬ್ಬವನ್ನು ಆಚರಿಸಿದರೆ ಊರಿಗೆ ಕೇಡಾಗುತ್ತೆ ಎಂದು ಪೂರ್ವಿಕರ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ದಿನ ಮಾತ್ರ ಸ್ಮಶಾನ ಮೌನ ಆವರಿಸುತ್ತದೆ. ಪೂರ್ವಿಕರ ಆಚರಣೆ, ಸಂಪ್ರದಾಯ, ನಂಬಿಕೆಯು ಈಗಲೂ ಜೀವಂತವಾಗಿದೆ. ಈ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದರೆ ಇಡೀ ಊರಿಗೆ ಕೇಡಾಗುತ್ತದೆ ಎಂಬ ಭೀತಿ ಇದೆ.

ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ಮಗನಿಗೆ ಶ್ರೀರಾಮ ಕನಸಲ್ಲಿ ಬಂದು ಹೀಗೆ ಹೇಳಿದನಂತೆ!

ಹೀಗಾಗಿ ಲೋಕವೆಲ್ಲಾ ವರ್ಷದ ಮೊದಲ ಹಬ್ಬವನ್ನು ಸಂಭ್ರಮ ಸಡಗರದಲ್ಲಿ ಇದ್ದರೆ ಈ ಗ್ರಾಮದಲ್ಲಿ ಜನರಿಲ್ಲದೇ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದೆ. ಸಂಕ್ರಾಂತಿಯ ಈ ಸುಗ್ಗಿ ಹಬ್ಬದಲ್ಲಿ ಸಾಮಾನ್ಯವಾಗಿ ಮನೆಯ ದನಕರುಗಳಿಗೆ ಸಿಂಗಾರ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ. ಆದರೆ ಇಲ್ಲಿ ಸಿಂಗಾರಗೊಳ್ಳದ ದನಕರುಗಳು, ಬಾಗಿಲು ಮುಚ್ಚಿರುವ ಮನೆಗಳು, ಮೌನವಾಗಿ ಕುಳಿತಿರುವ ಗ್ರಾಮದ ಜನರನ್ನು ಕಾಣಬಹುದು.

ಹಿಂದೊಮ್ಮೆ ಅರಾಭಿಕೊತ್ತನೂರು ಗ್ರಾಮದಲ್ಲೂ ಸಂಭ್ರಮದಿಂದಲೇ ಸಂಕ್ರಾಂತಿಯನ್ನು ಆಚರಿಸಲಾಗುತ್ತಿತ್ತು. ಸುಗ್ಗಿ ಹಬ್ಬದ ಸಮಯದಲ್ಲಿ ಎತ್ತುಗಳಿಗೆ, ದನಕರುಗಳಿಗೆ ಶೃಂಗಾರ ಮಾಡಿ ಕಿಚ್ಚು ಹಾಯಿಸಲಾಗಿತ್ತು. ಈ ವೇಳೆ ಏಕಾಏಕಿ ದನಕರುಗಳು ಸ್ಥಳದಿಂದ ನಾಪತ್ತೆಯಾಗಿದ್ದವು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.‌

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನ ಪಡೆದ ದಕ್ಷಿಣ ಭಾರತ ಸಿನಿರಂಗದ ತಾರೆಯರು; ಫೋಟೊ ಗ್ಯಾಲರಿ ಇಲ್ಲಿದೆ

ಇದಾದ ನಂತರ ಮತ್ತೊಂದು ವರ್ಷದಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುವ ವೇಳೆ ಸಂಕ್ರಾಂತಿ ಹಬ್ಬದ ಸಮಯದಂದು ಮತ್ತೆ ದನಕರುಗಳು ಮೃತಪಟ್ಟಿದ್ದವು. ಹೀಗಾಗಿ ಆ ದಿನದಿಂದಲೇ ಸಂಕ್ರಾಂತಿ ಹಬ್ಬವನ್ನು ಆಚರಿಸುವುದನ್ನು ಈ ಊರಿನವರು ಬಿಟ್ಟಿದ್ದಾರೆ. ಒಂದು ವೇಳೆ ಹಬ್ಬ ಮಾಡಿದರೆ ಮತ್ತೆ ಜಾನುವಾರು ಉಳಿಯುವುದಿಲ್ಲ ಎಂಬ ಕಾರಣಕ್ಕೆ ಹಬ್ಬವನ್ನು ಮಾಡುವುದನ್ನೇ ಕೈ ಬಿಟ್ಟಿದ್ದಾರೆ.

ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ಈ ಗ್ರಾಮದಲ್ಲಿ ದನಕರುಗಳಿಗೆ ಸ್ನಾನ ಮಾಡಿಸುವುದಿಲ್ಲ. ಊರ ಮುಂದೆ ಕಸ ಗುಡಿಸುವುದಿಲ್ಲ. ಮನೆ ಮುಂದೆ ರಂಗೋಲಿ ಹಾಕಲ್ಲ. ಒಂದು ವೇಳೆ ಕಸ ಗುಡಿಸಿ ರಂಗೋಲಿ ಹಾಕಿ ಹಬ್ಬವನ್ನು ಆಚರಣೆ ಮಾಡಿದರೆ ಮತ್ತೆ ದನಕರುಗಳು ಸಾಯುತ್ತವೆ ಅಲ್ಲದೆ ಗ್ರಾಮಕ್ಕೆ ಕೇಡು ಬರುತ್ತದೆ ಎಂದು ಗ್ರಾಮದ ಜನರು ಭಯಗೊಂಡಿದ್ದಾರೆ.

ಹೆಣ್ಣು ಮಕ್ಕಳು ಕೂಡ ಯಾವುದೆ ಸಿಹಿ ಅಡುಗೆ ಮಾಡುವುದಾಗಲಿ, ಎಳ್ಳು ಬೆಲ್ಲ ಬೀರುವುದಾಗಲಿ ಮಾಡುವುದಿಲ್ಲ. ಹಿರಿಯರು ಅನುಸರಿಸಿಕೊಂಡು ಬಂದ ಪದ್ಧತಿಯನ್ನು ನಂಬಿಕೆಯೊಂದಿಗೆ ಆಚರಿಸಿಕೊಂಡು ಬಂದಿದ್ದಾರೆ. ಇನ್ನೂ ಸಂಕ್ರಾಂತಿ ಹಬ್ಬದ ಬದಲು ರಥಸಪ್ತಮಿಯಂದು ಈ ಗ್ರಾಮಸ್ಥರು ಅದ್ಧೂರಿಯಾಗಿ ಊರಬ್ಬ ಆಚರಣೆ ಮಾಡಿ ಸಂಭ್ರಮಿಸುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version