ಕೋಲಾರ: ಹಳೆ ದ್ವೇಷ ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಬರ್ಬರ (Murder Case) ಕೊಲೆಯಾಗಿದೆ. ವಾಸದ ಮನೆಯಲ್ಲಿಯೇ ಸೀನಪ್ಪ (41) ಎಂಬುವವರ ಕೊಲೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ದೇವರಾಜ್, ಮಂಜುನಾಥ್, ನರಸಿಂಹಯ್ಯ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಮುರಳಿ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಕ್ತ ಸಂಬಂಧಿಗಳ ನಡುವೆಯೇ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ನರಸಿಂಹಯ್ಯ ಹಾಗೂ ಅವರ ತಮ್ಮ ಅಬ್ಬಯ್ಯ ನಡುವೆ ಪಿತ್ರಾರ್ಜಿತ ಜಮೀನು ವಿವಾದ ಇತ್ತು. ಇದೇ ಜಮೀನು ವಿವಾದಕ್ಕೆ 2015ರಲ್ಲಿ ನರಸಿಂಹಯ್ಯನ ಮೊದಲ ಮಗ ಕೊಲೆಯಾಗಿದ್ದ. ಈ ಕಾರಣಕ್ಕೆ ನರಸಿಂಹಯ್ಯ ಕುಟುಂಬ ಸಿಟ್ಟಾಗಿತ್ತು.
ಹೀಗಾಗಿ ಹಳೇ ವೈಷಮ್ಯ ಹಾಗೂ ಜಮೀನು ಗಲಾಟೆ ಕೋಪಕ್ಕೆ ಅಬ್ಬಯ್ಯನ ಅಳಿಯ ಸೀನಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ:Murder Case : ಮರಕ್ಕೆ ಕಟ್ಟಿ ಹಾಕಿ ಕಾಂಗ್ರೆಸ್ ಕಾರ್ಯಕರ್ತನ ಭೀಕರ ಹತ್ಯೆ
ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ; ಕಾರಲ್ಲಿ ಶವ ಪತ್ತೆ
ಬೆಂಗಳೂರು: ಇಲ್ಲಿನ ಬಳ್ಳಾರಿ ರಸ್ತೆಯ ಬಾಗಲೂರು ಕ್ರಾಸ್ ಸಮೀಪ ಕೊಲೆಯಾದ ಸ್ಥಿತಿಯಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ (Dead body Found) ಪತ್ತೆಯಾಗಿದೆ. ಹಂತಕರು ವ್ಯಕ್ತಿಯನ್ನು ಕೊಲೆಗೈದು (Murder Case) ಕಾರಿನಲ್ಲಿ ಶವ ಬಿಟ್ಟು ಪರಾರಿ ಆಗಿರುವ ಸಾಧ್ಯತೆ ಇದೆ.
ರಸ್ತೆ ಬದಿ ನಿಂತಿದ್ದ ಬಿಳಿ ಬಣ್ಣದ ಸ್ವಿಟ್ಪ್ ಕಾರಿನಲ್ಲಿ ಶವ ಕಂಡು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಯಲಹಂಕ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಕೃಷ್ಣ ಯಾದವ್ ಕೊಲೆಯಾದವರು ಎಂದು ತಿಳಿದು ಬಂದಿದೆ.
ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದ ಕೃಷ್ಣ ಯಾದವ್, ಮನೆಯಿಂದ ಕೆಲಸಕ್ಕೆಂದು ಹೊರ ಹೋಗಿದ್ದರು. ಆದರೆ ವಾಪಸ್ ಆಗಿರಲಿಲ್ಲ ಎನ್ನಲಾಗಿದೆ. ನಿನ್ನೆ ಸೋಮವಾರ ರಾತ್ರಿಯಿಂದ ಕಾಣೆಯಾಗಿದ್ದ ಕೃಷ್ಣ ಈಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃಷ್ಣ ಯಾದವ್ ಕೋಗಿಲುವಿನ ವೆಂಕಟಾಲ ಬಳಿ ಕಛೇರಿವೊಂದನ್ನು ತೆರೆದಿದ್ದರು. ಹಲವು ವರ್ಷಗಳಿಂದ ಯಲಹಂಕದಲ್ಲೇ ಕೃಷ್ಣ ಯಾದವ್ ಕುಟುಂಬಸ್ಥರು ನೆಲೆಸಿದ್ದರು. ಆಫೀಸ್ ಮಿಟಿಂಗ್ ಎಂದು ಮನೆ ಬಿಟ್ಟಿದ್ದ ಕೃಷ್ಣ ಯಾದವ್ ಕೊಲೆಯಾಗಿದ್ದಾರೆ.
ಇದನ್ನೂ ಓದಿ: Mandya Accident : ವಿಸಿ ನಾಲೆಗೆ ಉರುಳಿದ ಕಾರು, ಇಬ್ಬರು ಸ್ಥಳದಲ್ಲೇ ದುರ್ಮರಣ
ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಕಾರಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಹಂತಕರಿಗಾಗಿ ಹುಡಕಾಟ ನಡೆಸುತ್ತಿದ್ದಾರೆ.
ಇನ್ನೂ ಕೊಲೆಯಾದ ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳದಲ್ಲೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ