Site icon Vistara News

Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!

Murder case in Kolara

ಕೋಲಾರ: ಕುಡಿತದ ಮತ್ತು ಹಾಗೂ ದುರಂಹಕಾರ ಸೇರಿಕೊಂಡರೆ ಒಬ್ಬ ಮನುಷ್ಯ ಅದೆಷ್ಟು ಕ್ರೂರಿಯಾಗಬಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕುಡಿತದ ಮತ್ತಿನಲ್ಲಿದ್ದ (Alcoholic) ಆತ ಮೂತ್ರ (Urination) ಮಾಡುವಾಗ ಇನ್ನೊಬ್ಬನ ಮೇಲೆ ಸಿಡಿಸಿದ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಮನೆಗೇ ನುಗ್ಗಿ ಕೊಲೆ (Murder Case) ಮಾಡಿದ್ದಾನೆ.

ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ. ಮಂಗಳವಾರ ಸಂಜೆ ಇಬ್ಬರು ವ್ಯಕ್ತಿಗಳ ನಡುವಿನ ಒಂದು ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.

ಗೌನಿಪಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಎಲ್ಲರ ಜತೆ ಒಳ್ಳೆಯತನದಿಂದ ಬೆರೆಯುತ್ತಾ ಜನಮನ್ನಣೆ ಪಡೆದಿದ್ದ ಸಂಸಾವಂದಿಗ ವೆಂಕಟರಾಯಪ್ಪ ಅವರೇ ಪ್ರಾಣ ಕಳೆದುಕೊಂಡ ದುರ್ದೈವಿ. ಅವರಿಗೆ ವಯಸ್ಸು 55. ಅವರ ಮೇಲೆ ಮೂತ್ರ ಸಿಡಿಸಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಹಾಕಿದವನ ಹೆಸರು ಶಂಕರಪ್ಪ. ಸುಮಾರು 45 ವರ್ಷದ ಇವನು ಸದಾ ಕುಡಿದ ಮತ್ತಿನಲ್ಲೇ ಇರುತ್ತಾನೆ, ಸದಾ ಜಗಳ, ಹೊಡೆದಾಟಗಳೇ ಇವನ ಐಡೆಂಟಿಟಿ ಎನ್ನುತ್ತಾರೆ ಗೌನಿಪಲ್ಲಿ ಜನ.

ಮಂಗಳವಾರ ಸಂಜೆ ಏನಾಯಿತು?

ಮಂಗಳವಾರ ಸಂಜೆಯ ಹೊತ್ತಿಗೆ ವೆಂಕಟರಾಯಪ್ಪ ಅವರು ತಮ್ಮ ವ್ಯಾಪಾರ ನಡುವೆ ಮೂತ್ರ ಬರುತ್ತದೆ ಎಂದು ಸಂತೆ ಮೈದಾನದ ಕೊನೆಗೆ ಹೋದರು. ಆಗ ಅವರ ಹಿಂದೆಯೇ ಶಂಕರಪ್ಪ ಕೂಡಾ ಬಂದಿದ್ದ. ಅವರಿಬ್ಬರೂ ಹತ್ತಿರ ಹತ್ತಿರ ನಿಂತೇ ಮೂತ್ರ ಮಾಡಿದ್ದರು. ಈ ವೇಳೆ ಕುಡಿತದ ಮತ್ತಿನಲ್ಲಿದ್ದ ಮನೋಹರ ಬೇಕು ಎಂತಲೇ ವೆಂಕಟರಾಯಪ್ಪ ಅವರ ಮೇಲೆಯೇ ಮೂತ್ರ ಸಿಡಿಸಿದ್ದ.

ವೆಂಕಟರಾಯಪ್ಪ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ನೀನು ಮಾಡಿದ್ದು ಸರಿಯಾ ಎಂದು ಕೇಳಿದ್ದಾರೆ. ಆದರೆ, ಶಂಕರಪ್ಪ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅವರ ಮೇಲೆಯೇ ಎಗರಾಡಿದ್ದಾನೆ. ನಾನು, ನನ್ನ ಮೂತ್ರ ಎಲ್ಲಿ ಬೇಕಾದರೂ ಮಾಡುತ್ತೇನೆ, ನೀನು ಯಾರು ಕೇಳುವುದಕ್ಕೆ ಎಂದೆಲ್ಲ ಗಲಾಟೆ ಮಾಡಿದ್ದಾನೆ.

ಇವನ ಬಳಿ ಮಾತನಾಡುವುದು ಬೇಡ ಎಂದು ವೆಂಕಟರಾಯಪ್ಪ ತನ್ನ ಅಂಗಡಿ ಕಡೆಗೆ ಬಂದಿದ್ದಾರೆ. ಆದರೆ, ಮನೋಹರ ಅವರನ್ನು ಬೆನ್ನಟ್ಟಿಕೊಂಡೇ ಬಂದು ನನ್ನನ್ನು ಪ್ರಶ್ನೆ ಮಾಡುತ್ತೀಯಾ ಎಂದು ಕೇಳಿ ಹಲ್ಲೆ ಮಾಡಿದ್ದಾನೆ. ಆಗ ಗೌನಿಪಲ್ಲಿ ಸಂತೆ ಮೈದಾನದಲ್ಲಿದ್ದವರು ಮತ್ತು ವ್ಯಾಪಾರಿಗಳು ಸೇರಿ ಜಗಳ ಬಿಡಿಸಿದ್ದಾರೆ.

ವೆಂಕಟರಾಯಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟುಕೊಂಡ ವ್ಯಾಪಾರಿಗಳೆಲ್ಲ ಸೇರಿ ಈ ಗುಂಡ್ರುಗೋವಿ ಶಂಕರಪ್ಪನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬುದ್ಧಿ ಮಾತೂ ಹೇಳಿದ್ದಾರೆ. ಅಲ್ಲಿಗೆ ಅದು ಮುಕ್ತಾಯಗೊಂಡಿದೆ.

ಮನೆಗೇ ಬಂದು ಬಾಗಿಲು ಬಡಿದ ಕಿರಾತಕ

ರಾತ್ರಿಯಾಗುತ್ತಿದ್ದಂತೆಯೇ ವೆಂಕಟರಾಯಪ್ಪ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದಾರೆ. ಸ್ವಲ್ಪ ಹೊತ್ತಿಗೆ ಮನೆಯ ಬಾಗಿಲು ಬಡಿಯಿತು. ಯಾರೆಂದು ಬಾಗಿಲು ತೆರೆದು ನೋಡಿದರೆ ಶಂಕರಪ್ಪ ನಿಂತಿದ್ದ. ಏನು ಎಂದು ಕೇಳಲೂ ಅವಕಾಶವಿಲ್ಲದಂತೆ ಶಂಕರಪ್ಪ ಮನೆಯೊಳಗೆ ನುಗ್ಗಿದ್ದ.

ಮನೆಯಲ್ಲಿ ವೆಂಕಟರಾಯಪ್ಪ ಅವರ ಪುತ್ರ ಮನೋಹರ, ಪತ್ನಿ ಮತ್ತು ಇತರರು ಇದ್ದರು. ಅವರೆಲ್ಲ ಏನಾಗುತ್ತಿದೆ ಎಂದು ನೋಡನೋಡುತ್ತಿದ್ದಂತೆಯೇ ಶಂಕರಪ್ಪ ವೆಂಕಟರಾಯಪ್ಪರನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಗುದ್ದತೊಡಗಿದ್ದಾನೆ. ಜತೆಗೆ ಮೂತ್ರ ಮಾಡುವ ವಿಷಯದಲ್ಲಿ ಜಗಳ ಮಾಡುತ್ತೀಯಾ ಎಂದು ಮೂತ್ರ ಮಾಡುವ ಜಾಗಕ್ಕೂ ಹೊಡೆದಿದ್ದಾನೆ. 55 ವರ್ಷದ ಸಜ್ಜನ ಹಿರಿಯ ಜೀವ ವೆಂಕಟರಾಯಪ್ಪ ಅವರು ಶಂಕರಪ್ಪನ ಹೊಡೆತಗಳಿಗೆ ತತ್ತರಿಸಿ ಹೋಗಿದ್ದಾರೆ. ಸ್ವಲ್ಪ ಹೊತ್ತು ಹಾಗೆಯೇ ಹೊಡೆದ ಶಂಕರಪ್ಪ ಮನೆಯವರನ್ನು ಹೆದರಿಸಿ ಹೊರಗೆ ಹೋಗಿದ್ದಾನೆ.

ಎದೆಗೆ, ಮರ್ಮಾಂಗಕ್ಕೆ ಗುದ್ದಿದ್ದ ಧೂರ್ತ

ಅದಾದ ಕೂಡಲೇ ಮನೆಯವರು ವೆಂಕಟರಾಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಎದೆಗೆ, ಮರ್ಮಾಂಗಕ್ಕೆ ಬಿದ್ದ ಹೊಡೆತಗಳಿಂದ ತತ್ತರಿಸಿ ಜರ್ಜರಿತರಾಗಿದ್ದ ವೆಂಕಟರಾಯಪ್ಪ ಅವರು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.

ಇದನ್ನೂ ಓದಿ: Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಗೌನಿಪಲ್ಲಿಯ ವ್ಯಾಪಾರಸ್ಥರು, ನಾಗರಿಕರು ವೆಂಕಟರಾಯಪ್ಪ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಅಂದ ಹಾಗೆ, ವೆಂಕಟರಾಯಪ್ಪ ಅವರಿಗೂ ಶಂಕರಪ್ಪ ಅವರಿಗೂ ಮುಖ ಪರಿಚಯ ಇಲ್ಲವೇ ಇಲ್ಲ. ಅವರಿಬ್ಬರು ಹಿಂದೆಂದು ಮುಖಾಮುಖಿ ಆಗಿರಲೇ ಇಲ್ಲ. ಯಾರೆಂದು ಗೊತ್ತೇ ಇಲ್ಲ. ಕೇವಲ ಒಂದು ಮೂತ್ರದ ಸಿಡಿತದಿಂದ ಒಂದು ಮನೆಯ ಬೆಳಕು ಆರಿತು. ಹೀಗೆ ಕೊಲೆ ಮಾಡಿದ ಧೂರ್ತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

Exit mobile version