ಕೋಲಾರ: ಕಿರಾತಕನೊಬ್ಬ ತನ್ನ ಪತ್ನಿ ಮತ್ತು ಮಾವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ (Man kills wife and her father) ಮಾಡಿದ್ದಾನೆ. ಮಾತ್ರವಲ್ಲ, ತಾನೊಂದು ಸಿಲಿಂಡರ್ ಪಕ್ಕ ನಿಂತು ಬೆಂಕಿ ಪೊಟ್ಟಣ ಹಿಡಿದುಕೊಂಡು ಹತ್ತಿರ ಬಂದರೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಇತ್ತ ಇಡೀ ಊರಿನ ಜನ ಇಂಥಹುದೊಂದು ಘೋರ ಪಾತಕ (Murder Case) ನಡೆಸಿದ ಧೂರ್ತನನ್ನು ನಾವೇ ಹೊಡೆದು ಕೊಲ್ಲುತ್ತೇವೆ ಎಂದು ಆಯುಧಗಳನ್ನು ಹಿಡಿದು ನಿಂತಿದ್ದಾರೆ.
ಇಂಥಹುದೊಂದು ಭೀಕರ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ. ಶ್ರೀನಿವಾಸಪುರ ಪಟ್ಟಣದಲ್ಲಿ ಮಟನ್ ವ್ಯಾಪಾರ ಮಾಡುತ್ತಿದ್ದ ನಾಗೇಶ ಎಂಬಾತನೇ ಕ್ರೂರಿ. ಆತ ತನ್ನ ಪತ್ನಿ ರಾಧಾ (45) ಹಾಗೂ ಆಕೆಯ ತಂದೆ ಮುನಿಯಪ್ಪ ಅವರನ್ನು ಮಚ್ಚಿನಿಂದ ತಲೆಗೇ ಹೊಡೆದು ಕೊಂದು ಹಾಕಿದ್ದಾನೆ. ಸಾಲದ್ದಕ್ಕೆ ತಡೆಯಲು ಬಂದ ಪತ್ನಿಯ ಅಕ್ಕ ಮತ್ತು ಆಕೆಯ ಮಾವನಿಗೂ ಹಲ್ಲೆ ಮಾಡಿದ್ದು, ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗೇಶನ ಪತ್ನಿ ರಾಧಾ ಸ್ಥಳದಲ್ಲೇ ಮೃತಪಟ್ಟರೆ, ಮುನಿಯಪ್ಪ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಾಧಾ ಅವರು ಅಂಗಡಿ ವ್ಯಾಪಾರದಲ್ಲಿ ತೊಡಗಿದ್ದು ಜನಾನುರಾಗಿಯಾಗಿದ್ದು, ಅಲ್ಲೇ ನಡೆದಿರುವ ಅವರ ಕೊಲೆ ಎಲ್ಲರ ಮನಸ್ಸನ್ನು ಕಲಕಿದೆ.
ರಾಧಾ ಹಂತಕನ ಮೊದಲ ಪತ್ನಿ
ಕೊಲೆಯಾಗಿರುವ ರಾಧಾ ಹಂತಕ ನಾಗೇಶನ ಮೊದಲನೇ ಪತ್ನಿಯಾಗಿದ್ದಾನೆ. ರಾಧಾಳನ್ನು ಬಿಟ್ಟು ಬೇರೆ ಮದುವೆಯಾಗಿರುವ ನಾಗೇಶ ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರ ಪಟ್ಟಣದಲ್ಲಿ ವಾಸವಿದ್ದಾನೆ. ಕೋರ್ಟ್ ಆದೇಶದಂತೆ ಮೊದಲನೇ ಪತ್ನಿಗೆ ಪ್ರತಿ ತಿಂಗಳು 8 ಸಾವಿರ ರೂ. ಜೀವನಾಂಶ ನೀಡುತ್ತಿದ್ದಾನೆ ನಾಗೇಶ್. ಆತ ತನ್ನ ಪತ್ನಿಯ ಮನೆಗೆ ಆಯುಧದೊಂದಿಗೆ ಬಂದು ಈ ಘೋರ ಕೃತ್ಯವನ್ನು ನಡೆಸಿದ್ದಾನೆ. ರಾಧಾ ಅವರು ತನ್ನ ತೌವರು ಮನೆಯಲ್ಲಿ ಚಿಲ್ಲರೆ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಈ ವೇಳೆ ಅಂಗಡಿಗೆ ನುಗ್ಗಿ ಕೊಲೆ ಮಾಡಿದ್ದಾನೆ ಧೂರ್ತ.
ಹೈಡ್ರಾಮಾ ಸೃಷ್ಟಿಸಿದ ರಾಕ್ಷಸ ನಾಗೇಶ್
ತನ್ನ ಪತ್ನಿ ಮತ್ತು ಮಾವನನ್ನು ಕೊಂದಿರುವ ಮತ್ತು ಇಬ್ಬರನ್ನು ಮಾರಣಾಂತಿಕವಾಗಿ ಗಾಯಗೊಳಿಸಿರುವ ನಾಗೇಶ ಬಳಿಕ ಮನೆಯೊಂದರಲ್ಲಿ ಸೇರಿಕೊಂಡು ಗ್ಯಾಸ್ ಸಿಲಿಂಡರ್ ಮತ್ತು ಬೆಂಕಿ ಪೆಟ್ಟಿಗೆ ಹಿಡಿದು ಯಾರಾದರೂ ಮುಂದೆ ಬಂದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ಹೈಡ್ರಾಮ ಸೃಷ್ಟಿಸಿದ್ದಾನೆ.
ಇದನ್ನೂ ಓದಿ : Murder Case : ಮದುವೆ ಎಂಗೇಜ್‌ಮೆಂಟ್ ಆಗಿದ್ದ ಅನಾಥ ಯುವತಿಯನ್ನು ಅತ್ಯಾಚಾರ ಮಾಡಿ ಇರಿದು ಕೊಂದ ಧೂರ್ತ
ಆರೋಪಿಯ ಹತ್ಯೆಗೆ ಸಜ್ಜಾದ ಗ್ರಾಮಸ್ಥರು
ಈ ನಡುವೆ, ಈ ಅವಳಿ ಕೊಲೆ ಊರಿನ ಗ್ರಾಮಸ್ಥರನ್ನು ಕೆರಳಿಸಿದೆ. ಅವರು ಈ ಹಂತಕನನ್ನು ಜೀವಂತವಾಗಿ ಊರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಮಾರಕಾಯುಧಗಳನ್ನು ಹಿಡಿದು ನಿಂತಿದ್ದಾರೆ. ಒಂದು ಕಡೆ ಹಂತಕನ ಬೆದರಿಕೆ ಮತ್ತು ಇನ್ನೊಂದು ಕಡೆ ಗ್ರಾಮಸ್ಥರ ರೋಷವನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಡಿವೈಎಸ್‌ಪಿ ಮತ್ತು ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಭದ್ರತೆ ಮಾಡಿದ್ದಾರೆ.