Site icon Vistara News

Murder Case: ಕೋಲಾರ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಕೊಲೆ ಆರೋಪಿಗಳಿಗೆ ಗುಂಡೇಟು

kolar srinivas murder suspects

ಕೋಲಾರ: ಕೋಲಾರದ ಕಾಂಗ್ರೆಸ್ ಮುಖಂಡ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಆಪ್ತರಾದ ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ಕೊಲೆ (Murder Case) ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ (police firing) ನಡೆಸಿದ್ದಾರೆ.

ಪ್ರಮುಖ ಆರೋಪಿ ವೇಣುಗೋಪಾಲ್ ಹಾಗೂ ಮನೀಂದ್ರ ಕಾಲಿಗೆ ಗುಂಡೇಟು ಬಿದ್ದಿದೆ. ಮತ್ತೊಬ್ಬ ಆರೋಪಿ ಸಂತೋಷ್‌ಗೂ ಗಾಯಗಳಾಗಿವೆ. ಕೋಲಾರ ಜಿಲ್ಲೆ‌ ವೇಮಗಲ್ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರು ಫೈರಿಂಗ್ ಮಾಡಿದ್ದಾರೆ.

ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಯಿತು. ಹಲ್ಲೆ ವೇಳೆ ಇನ್‌ಸ್ಪೆಕ್ಟರ್ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಅವರಿಗೂ ಗಾಯಗಳಾಗಿವೆ. ಗಾಯಾಳುಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಶ್ರೀನಿವಾಸ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಆರು ಜನರ ಪೈಕಿ ಇದುವರೆಗೆ ಮೂರು ಜನ ಪ್ರಮುಖ ಆರೋಪಿಗಳ ಬಂಧನವಾಗಿದೆ. ಸುಪಾರಿ ಪಡೆದು ಕೊಲೆಗೆ ಯತ್ನಿಸಿರುವ ಆರೋಪವಿದೆ.

ಗೃಹ ಸಚಿವ ಜಿ. ಪರಮೇಶ್ವರ್‌ ಮತ್ತು ಮಾಜಿ ಸ್ಟೀಕರ್‌ ರಮೇಶ್‌ ಕುಮಾರ್‌ ಅವರ ಆಪ್ತರಾದ ಶ್ರೀನಿವಾಸ್‌ ಅವರನ್ನು ದುಷ್ಕರ್ಮಿಗಳು ಭಾನುವಾರ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಇವರು ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ, ಕೌನ್ಸಿಲರ್ ಆಗಿದ್ದರು. ಶ್ರೀನಿವಾಸ್‌ ಮುಂದಿನ ಲೋಕಸಭಾ ಚುನಾವಣೆ ಆಕಾಂಕ್ಷಿಯಾಗಿದ್ದರು.

ಮುಳಬಾಗಿಲು ರಸ್ತೆಯ ನಿರ್ಮಾಣ ಹಂತದ ರೆಸ್ಟೋರೆಂಟ್ ಬಳಿ ಆರು ಮಂದಿ ದಾಳಿ ಮಾಡಿ ಹಲ್ಲೆ ನಡೆಸಿ ಪರಾರಿ ಆಗಿದ್ದರು. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್‌ ಅವರನ್ನು ಕೂಡಲೇ ಆರ್‌ಜೆ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶ್ರೀನಿವಾಸ್‌ ಮೃತಪಟ್ಟಿದ್ದಾರೆ.

ಪ್ರತಿಭಟನೆಗೆ ಚಿಂತನೆ

ಕಾಂಗ್ರೆಸ್ ಮುಖಂಡ ಹಾಗೂ ದಲಿತ ನಾಯಕ ಬರ್ಬರವಾಗಿ ಕೊಲೆಯಾದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಬೂದಿ ಮುಚ್ಚಿದ ಕೆಂಡದಂತಿದ್ದು, ದಲಿತ ಸಂಘಟನೆಗಳಿಂದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಹಾಗೂ ಬಂದ್ ಮಾಡಲು ಚಿಂತನೆ ನಡೆದಿದೆ.

ಶ್ರೀನಿವಾಸ್‌ ಅವರ ಪಾರ್ಥೀವ ಶರೀವನ್ನು ಇಂದು ಅವರ ನಿವಾಸಕ್ಕೆ ತರಲಾಯಿತು. ನಿವಾಸದಲ್ಲಿ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಆಗಮಿಸಿ ಮೃತರ ಕುಟುಂಬವನ್ನು ಸಂತೈಸಿದ್ದಾರೆ. ಇಂದು ಅವರ ತೋಟದ ಮನೆಯ ಬಳಿಯೇ ಅಂತ್ಯಸಂಸ್ಕಾರ ನಡೆಯಲಿದೆ.

ಇದನ್ನೂ ಓದಿ: Murder Case : ಗೃಹ ಸಚಿವ ಪರಮೇಶ್ವರ್‌, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಆಪ್ತನ ಬರ್ಬರ ಹತ್ಯೆ

Exit mobile version