ಕೋಲಾರ: ಹೆತ್ತು ನಾಲ್ಕೇ ದಿನಗಳ ಒಳಗೆ ಕಳವಿಗೀಡಾಗಿದ್ದ ಶಿಶುವನ್ನು (Child theft) ಕೋಲಾರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಕಳ್ಳರನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿದ್ದ ನವಜಾತ ಶಿಶು ಮರಳಿ ತಾಯಿಯ ಮಡಿಲು ಸೇರಿದ್ದು, ಮಗುವನ್ನು ಬಿಗಿದಪ್ಪಿ ಕಣ್ಣೀರಾದ ಬಾಣಂತಿಯ ಫೋಟೋಗಳು ವೈರಲ್ ಆಗಿವೆ.
ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳವಾಗಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಿಂದ ಮೂವರು ಮಹಿಳೆಯರು ಮಗು ಕಳ್ಳತನ ಮಾಡಿದ್ದರು. ಕೂಡಲೇ ಸುದ್ದಿ ತಿಳಿದು ಕಳ್ಳರ ಜಾಡು ಹಿಡಿದಿದ್ದ ಪೊಲೀಸರು, ಮಗುವನ್ನು ದುಷ್ಕರ್ಮಿಗಳಿಂದ ರಕ್ಷಣೆ ಮಾಡಿದ್ದಾರೆ.
ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಕೋಲಾರ ಹಾಗೂ ತಮಿಳುನಾಡಿನ ಗಡಿಭಾಗದ ಬೇರಿಕೆ ಬಳಿ ಪೊಲೀಸರು ಮಗುವಿನ ರಕ್ಷಣೆ ಮಾಡಿದ್ದಾರೆ. ಮಗುವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಅನಾಹುತ ತಪ್ಪಿದೆ.
ಮಗು ಕಳವು ಮಾಡಿದವರ ಪೈಕಿ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ. ನಾಲ್ಕು ದಿನದ ಕಂದಮ್ಮ ಮರಳಿ ತಾಯಿಯ ಮಡಿಲು ಸೇರಿದ್ದು, ಮಗುವನ್ನು ಬಿಗಿದಪ್ಪಿ ತಾಯಿ ಕಣ್ಣೀರಿಟ್ಟ ದೃಶ್ಯ ವೈರಲ್ ಆಗಿದೆ. ಕೋಲಾರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಾಂತ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳನ್ನು ಕದ್ದೊಯ್ದು ತಮಿಳುನಾಡಿಗೆ ಸಾಗಿಸುವ, ಅಲ್ಲಿ ಭಿಕ್ಷೆ ಬೇಡಲು ಹಚ್ಚುವ ಜಾಲ ಸಕ್ರಿಯವಾಗಿದೆ. ಇದನ್ನು ಭೇದಿಸುವಲ್ಲಿ ಪೊಲೀಸರು ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: Kidnapping | ತೂಕ ಮಾಡುವ ನೆಪದಲ್ಲಿ ಶಿಶು ಕಳ್ಳತನ; ಚಿಕ್ಕೋಡಿಯಲ್ಲೀಗ ಭಯದ ವಾತಾವರಣ