ಕೋಲಾರ: ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP-JDS Alliance) ನಡೆದಿರುವ ನಡುವೆಯೇ ಕೆಲವೊಂದು ಜೆಡಿಎಸ್ ಶಾಸಕರು ಕಾಂಗ್ರೆಸ್ ಪಾಳಯಕ್ಕೆ ಜಿಗಿಯಲು (Operation Hasta) ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಡುತ್ತಲೇ ಇದೆ. ಇದೀಗ ಕೋಲಾರ ಜಿಲ್ಲೆಗೆ ಸಂಬಂಧಿಸಿ ಇಬ್ಬರು ಜಾತ್ಯತೀತ ಜನತಾದಳ ಶಾಸಕರ (Two JDS MLAs) ಪಕ್ಷಾಂತರದ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಸ್ವತಃ ಕಾಂಗ್ರೆಸ್ ನಾಯಕರೇ ಇದನ್ನು ಬಾಯಿ ಬಿಟ್ಟು ಹೇಳುತ್ತಿದ್ದಾರೆ.
ಶ್ರೀನಿವಾಸಪುರ ಕ್ಷೇತ್ರದ ಜಿ ಕೆ ವೆಂಕಟಶಿವಾರೆಡ್ಡಿ (Venkata Shivareddy), ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ (Samruddhi Manjunath) ಅವರೇ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿದ್ದಾರೆ ಎಂಬ ಗುಲ್ಲು ಹಬ್ಬಿರುವ ನಾಯಕರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇವರಿಬ್ಬರ ಆಪರೇಷನ್‌ಗೆ ವೇದಿಕೆ ರೆಡಿಯಾಗಿದೆ ಎಂದು ಸ್ವತಃ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದೊಳಗೆ ಈಗಾಗಲೇ ಒಂದು ಹಂತದ ಚರ್ಚೆ ನಡೆದು ಒಪ್ಪಿಗೆ ನೀಡಲಾಗಿದೆ. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಹೊಡೆದು ಕಾಂಗ್ರೆಸ್ ಸೇರ್ಪಡಲು ಅಭ್ಯಂತರವಿಲ್ಲ ಎನ್ನುವುದು ಎಲ್ಲರ ಅಭಿಮತ ಎಂದು ಹೇಳಲಾಗಿದೆ. ಈ ಪ್ರಯತ್ನ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿದ್ದು, ಈಗ ಹರಳುಗಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ : KS Eshwarappa: ಡಿ.ಕೆ. ಸುರೇಶ್‌ಗೆ ಗುಂಡಿಕ್ಕಿ ಎಂದ ಈಶ್ವರಪ್ಪ ಮೇಲೆ ಲೀಗಲ್ ಆ್ಯಕ್ಷನ್: ಸಿಎಂ ಸಿದ್ದರಾಮಯ್ಯ
ಸಮೃದ್ಧಿ ಮಂಜುನಾಥ್ ಅವರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್?
ಆಪರೇಷನ್ ಹಸ್ತಕ್ಕೆ ಒಳಗಾಗುವ ಶಾಸಕರಲ್ಲಿ ಒಬ್ಬರಾದ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೇ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ನಾಯಕರು ಇತ್ತೀಚೆಗೆ ಹಲವು ಬಾರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಪರೇಷನ್‌ನ ಸುದ್ದಿ ಜೋರಾಗಿ ಹರಡಲು ಶುರುವಾಗಿತ್ತು.
ಕಾಂಗ್ರೆಸ್‌ನಿಂದ ಆಹ್ವಾನ ಇರುವುದು ನಿಜ, ಹೋಗುತ್ತಿಲ್ಲ ಎಂದ ಸಮೃದ್ಧಿ ಮಂಜುನಾಥ್
ಈ ನಡುವೆ ಜೆಡಿಎಸ್ ಶಾಸಕರಾದ ವೆಂಕಟಶಿವಾರೆಡ್ಡಿ ಹಾಗೂ ಸಮೃದ್ದಿ ಮಂಜುನಾಥ್ ಕಾಂಗ್ರೆಸ್ ಸೇರುತ್ತಾರೆ ಎಂಬ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಸ್ವತಃ ಸಮೃದ್ಧಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ʻʻಪಕ್ಷ ಬಿಡುವ ಕುರಿತು ಬಹಿರಂಗವಾಗಿ ನಾನು ಹೇಳಿಕೆ ನೀಡಿಲ್ಲ. ಸಿಎಂ ಅವರನ್ನು ನಾನು ಅನುದಾನ ಕೇಳೋಕೆ ಭೇಟಿ ಮಾಡೋದು ತಪ್ಪಾ ? ಭೇಟಿ ಮಾಡೋದು ತಪ್ಪು ಅನ್ನೋದಾದ್ರೆ ಸಿಎಂ ಅವರು ಹೇಳಲಿ.ʼʼ ಎಂದು ಹೇಳಿದ್ದಾರೆ.
ʻʻಜೆಡಿಎಸ್ ಪಕ್ಷ ಬಿ ಫಾರಂ ನೀಡಿ ನನ್ನ ಗೆಲ್ಲಿಸಿದೆ. ಸಿದ್ದರಾಮಯ್ಯ ಹಾಗೂ ಡಿಸಿಎಂ ಅವರನ್ನು ಅನುದಾನ ಕುರಿತು ಭೇಟಿ ಮಾಡಿದ್ದೇನೆ ಅಷ್ಟೇ. ಮಾತನಾಡುವಾಗ ಸಿಎಂ ಹಾಗೂ ಡಿಕೆಶಿ ಅವರೂ ಸೇರ್ಪಡೆ ಬಗ್ಗೆ ನನಗೆ ಆಹ್ವಾನ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆ ದೆಹಲಿಗೆ ಬರಲು ಆಹ್ವಾನ ನೀಡಿದರು. ಆದರೆ, ನಾನು ಅದರ ಬಗ್ಗೆ ಯೋಜನೆ ಮಾಡಿಲ್ಲ. ಹೀಗಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ತೊರೆಯೋದು ಸತ್ಯಕ್ಕೆ ದೂರವಾದ ವಿಚಾರʼʼ ಎಂದಿದ್ದಾರೆ ಸಮೃದ್ಧಿ ಮಂಜುನಾಥ್.
ʻʻನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ನಂಜೇಗೌಡ, ಉಸ್ತುವಾರಿ ಸಚಿವ ಬೈರತಿ ಸುರೇಶ್ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಹಾಗಂತ ಸೇರುತ್ತೇನೆ ಎಂದು ಅರ್ಥವಲ್ಲ. ನಾವೆಲ್ಲ ಮದುವೆ ಆಗಿರುವ ಸಂಸಾರಸ್ಥರು, ತೇಜೋವಧೆ ಮಾಡೋದು ತಪ್ಪು. ರಮೇಶ್ ಕುಮಾರ್ ಸೋತು ತೋಟದಲ್ಲಿ ಇದ್ದಾರೆ. ತೋಟದಲ್ಲಿ ಕುಳಿತು ಇವರು ಈ ಸ್ಕೆಚ್ ಹಾಕಿದ್ದಾರೆ. ಜನರಿಗೆ ತಪ್ಪು ಸಂದೇಶ ಹೊರಡಿಸೋದು ತಪ್ಪುʼʼ ಎಂದಿದ್ದಾರೆ ಸಮೃದ್ಧಿ ಮಂಜುನಾಥ್.
ʻʻನಾನು ಪ್ರತಿ ಬಾರಿ ಸಿಎಂ ಅವರನ್ನು ಭೇಟಿ ಮಾಡಿದಾಗಲೂ ನಮ್ಮ ನಾಯಕ ಕುಮಾರಸ್ವಾಮಿ ಗೆ ಹೇಳಿದ್ದೇನೆ. ಕೊತ್ತೂರು ಮಂಜುನಾಥ್ ಅವರು ಮತದಾರರಿಗೆ ಗೊಂದಲ ಸೃಷ್ಟಿ ಮಾಡೋದಕ್ಕೆ ಈ ಹೇಳಿಕೆ ನೀಡಿದ್ದಾರೆʼʼ ಎಂದಿರುವ ಸಮೃದ್ಧಿ ಮಂಜುನಾಥ್, ಜೆಡಿಎಸ್ ನಿಂದಲೇ ಎಂಪಿ ಸ್ಪರ್ಧೆಗೆ ಆಫರ್ ಇದೆ, ನಾನಿನ್ನೂ ಫೈನಲ್ ಮಾಡಿಲ್ಲ ಎಂದರು.
ಕೊತ್ತೂರು ಮಂಜುನಾಥ್ ಹೇಳಿಕೆ ಹಿಂದೆ ಯಾರಿದ್ದಾರೆ ರೈಟರ್?
ʻʻ95 ಸಾವಿರ ಜನ ಮತ ಹಾಕಿ ನನಗೆ ಜನ ಆಯ್ಕೆ ಮಾಡಿದ್ದಾರೆ. ಜನ 30 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ, ಹೇಗೆ ಬೇರೆ ಪಕ್ಷಕ್ಕೆ ಹೋಗಲು ಸಾಧ್ಯʼʼ ಎಂದು ಹೇಳಿದ ಸಮೃದ್ಧಿ ಮಂಜುನಾಥ್, ಜೆಡಿಎಸ್ ನ 19 ಶಾಸಕರು ನೆಮ್ಮದಿಯಾಗಿ ಇದ್ದೇವೆ. ನಾನು ಕೂಡಾ ನೆಮ್ಮದಿಯಾಗಿ ಜೆಡಿಎಸ್ ನಲ್ಲಿ ಇದ್ದೇನೆ. ನಾನು ಪಕ್ಷ ಬಿಡುವ ತೀರ್ಮಾನ ಮಾಡಿಲ್ಲ. ಕಷ್ಟ ಸುಖ ಏನೇ ಇದ್ರು ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಕೊತ್ತೂರು ಮಂಜುನಾಥ್ ಹೇಳಿಕೆ ಹಿಂದೆ ಯಾರು ರೈಟರ್ ಇದ್ದಾರೆ ಅಂತ ಗೊತ್ತಾಗಬೇಕಿದೆʼʼ ಎಂದರು.
ಜೆಡಿಎಸ್ ಎಂಎಲ್‌ಸಿ ಇಂಚರ ಗೋವಿಂದರಾಜು ಹೇಳೋದೇನು?
ಸಮೃದ್ಧಿ ಮಂಜುನಾಥ್ ಮತ್ತು ವೆಂಕಟಶಿವಾ ರೆಡ್ಡಿ ಅವರ ಆಪರೇಷನ್ ಸುದ್ದಿಯಿಂದ ಹಲವು ಚರ್ಚೆಗಳು ನಡೆದಿವೆ. ಜೆಡಿಎಸ್ ಎಂಎಲ್‌ಸಿ ಆಗಿರುವ ಇಂಚರ ಗೋವಿಂದ ರಾಜು ಅವರು ಇದರ ಬಗ್ಗೆ ಪ್ರತಿಕ್ರಿಯಿಸಿ ಅಂತ ಸಾಧ್ಯತೆಗಳು ಇಲ್ಲ ಎಂದಿದ್ದಾರೆ.
ಸಮೃದ್ಧಿ ಮಂಜುನಾಥ್ ಮತ್ತು ವೆಂಕಟಶಿವಾ ರೆಡ್ಡಿ ಅವರು ಯಾವ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರೋ ಗೊತ್ತಿಲ್ಲ. ಈಗಲೇ ಕಾಂಗ್ರೆಸ್ ನಲ್ಲಿ ನಾಲ್ಕು ಗುಂಪುಗಳಿವೆ. ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಹೋದರೆ ಮತ್ತೆರಡು ಗುಂಪುಗಳಾಗುತ್ತವೆ. ಯಾರೇ ಒಂದಾದರೂ ವೆಂಕಟ ಶಿವಾರೆಡ್ಡಿ ಮತ್ತು ರಮೇಶ್ ಕುಮಾರ್ ಒಂದಾಗೋಕೆ ಆಗುವುದಿಲ್ಲʼʼ ಎಂದು ಇಂಚರ ಗೋವಿಂದ ರಾಜು ವಿಶ್ಲೇಷಿಸಿದರು.
ʻʻಏನಾದ್ರು ಆಪರೇಷನ್ ಹಸ್ತ ಆಗುವ ಹಾಗಿದ್ದರೆ ಮೊದಲು ಕುಮಾರಸ್ವಾಮಿಗೆ ಮಾಹಿತಿ ಹೋಗ್ತಿತ್ತು. ಕುಮಾರಸ್ವಾಮಿ ನಮಗೇ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ ಎಂದರೆ ಅದು ಗಾಳಿ ಸುದ್ದಿʼʼ ಎಂದು ಹೇಳಿದ ಇಂಚರ ಗೋವಿಂದ ರಾಜು, ಸಮೃದ್ಧಿ ಮಂಜುನಾಥ್, ಮಲ್ಲೇಶ್ ಬಾಬು ಜೆಡಿಎಸ್ ನಿಂದ ಕೋಲಾರ ಕ್ಷೇತ್ರದ ಆಕಾಂಕ್ಷಿ ಅಂತ ಚರ್ಚೆ ಆಗಿದೆ. ನಿಸರ್ಗ ನಾರಾಯಣ ಸ್ವಾಮಿ ಪರಿಶಿಷ್ಟ ಜಾತಿಯ ಬಲ ಸಮುದಾಯದವರು. ನಿಸರ್ಗ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಟ್ಟರೂ ಪರವಾಗಿಲ್ಲ. ಕ್ಷೇತ್ರದಲ್ಲಿ ಸರ್ವೇ ಮಾಡಿಸಿ ಯಾರಿಗೆ ಹೆಚ್ಚು ಅಭಿಪ್ರಾಯ ಬರುತ್ತೋ ಅವರಿಗೆ ಟಿಕೆಟ್ ಕೊಡಲಾಗುತ್ತದೆʼʼ ಎಂದರು.
ʻʻನನ್ನ ಪ್ರಕಾರ ವೆಂಕಟಶಿವಾರೆಡ್ಡಿ ಇನ್ನೊಂದು ಚುನಾವಣೆ ಮಾಡಲು ಆಗುವುದಿಲ್ಲ. ಶ್ರೀನಿವಾಸಪುರ ಕ್ಷೇತ್ರದಲ್ಲಿ ವೈರಿಗಳು ಒಂದಾದರೂ ಕಾರ್ಯಕರ್ತರು ಹೊಂದಿಕೊಂಡು ಹೋಗುವುದಿಲ್ಲ. ವೆಂಕಟಶಿವಾರೆಡ್ಡಿ ಮತ್ತು ರಮೇಶ್ ಕುಮಾರ್ ಗೆ ಕಳೆದ ಚುನಾವಣೆಯೇ ಕೊನೆ ಚುನಾವಣೆ ಎನ್ನಲಾಗಿತ್ತು. ಒಂದು ವೇಳೆ ವೆಂಕಟಶಿವಾರೆಡ್ಡಿ ಪಕ್ಷ ಬಿಟ್ಟು ಹೋದರೂ ಜೆಡಿಎಸ್ ನಿಂದ ಮತ್ತೊಬ್ಬರು ಬರ್ತಾರೆ. 15 ದಿನದಲ್ಲಿ ಕೊತ್ತೂರು ಮಂಜುನಾಥ್ ಅಭ್ಯರ್ಥಿಯಾಗಿ ಕೋಲಾರದಲ್ಲಿ ಗೆದ್ದಿಲ್ವಾ..?ʼʼ ಎಂದು ಹಳೆ ಘಟನೆಗಳನ್ನು ನೆನಪಿಸಿಕೊಂಡರು ಇಂಚರ ಗೋವಿಂದ ರಾಜು.
ಸಮೃದ್ಧಿ ಮಂಜುನಾಥ್ ಹೇಳಿಕೆಯಲ್ಲಿ ಹಲವು ದ್ವಂದ್ವ
ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹೋದವರು ತುಂಬಾ ಜನ ಇದ್ದಾರೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬುದೂ ಸತ್ಯ. ಸಮೃದ್ಧಿ ಮಂಜುನಾಥ್ ಹೇಳಿಕೆಯಲ್ಲಿ ಹಲವು ಭಿನ್ನಾಭಿಪ್ರಾಯಗಳು ಬಂದಿವೆ. ಕಾಂಗ್ರೆಸ್ ಪಕ್ಷದಿಂದ ಹಲವು ಬಾರಿ ಕರೆದಿದ್ದಾರೆಂದು ಈಗಾಗಲೇ ಅವರು ಹೇಳಿದ್ದಾರೆ. ಮುಳಬಾಗಿಲು ಮತ್ತು ಶ್ರಿನಿವಾಸಪುರ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ. ಅದನ್ನು ವೀಕ್ ಮಾಡಲು ಪ್ರಯತ್ನ ನಡೆದಿರಬಹುದು. ಕೆಹೆಚ್ ಮುನಿಯಪ್ಪ ಹಾಗೂ ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ನಡುವೆ ಒಳ್ಳೆಯ ಬಾಂಧವ್ಯ ಇದೆ ಎಂಬ ವಿಚಾರಕ್ಕೂ ನಿಸರ್ಗ ಗೋವಿಂದರಾಜು ಬೆಳಕು ಚೆಲ್ಲಿದರು.
ಯಾರಿಗೇ ಟಿಕೆಟ್ ಕೊಟ್ಟರೂ ಮೈತ್ರಿ ಗೆಲುವಿಗೆ ಕೆಲಸ
ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷಕ್ಕೇ ಕೊಡುತ್ತಾರೆಂದು ಅಂದುಕೊಂಡಿದ್ದೇವೆ. ಒಂದು ವೇಳೆ ಬಿಜೆಪಿಗೆ ಕೊಟ್ಟರೂ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ನನ್ನ ಹಾಗೂ ಹಾಲಿ ಸಂಸದ ಮುನಿಸ್ವಾಮಿ ನಡುವೆ ಉತ್ತಮ ಬಾಂಧವ್ಯ ಇದೆ. ಕ್ಷೇತ್ರದ ಎಲ್ಲಾ ಕೆಲಸಗಳಿಗೂ ಅವರು ಸ್ಪಂದಿಸಿದ್ದಾರೆ. ಮುನಿಸ್ವಾಮಿ ಅವರೇ ಅಭ್ಯರ್ಥಿಯಾದ್ರೂ ಕೆಲಸ ಮಾಡುತ್ತೇವೆ ಎಂದಿರುವ ನಿಸರ್ಗ ಗೋವಿಂದರಾಜು ಅವರು, ಒಂದು ವೇಳೆ ಸಮೃದ್ಧಿ ಮಂಜುನಾಥ್ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಹೋದ್ರೆ ಶ್ರೀನಿವಾಸಗೌಡರಿಗೆ ಆದ ಸ್ಥಿತಿಯೇ ಆಗುತ್ತೆ ಎಂಬ ಎಚ್ಚರಿಕೆಯನ್ನು ನೀಡಿದರು.