ಕೋಲಾರ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ ಮಹಿಳೆಗೆ ಬಂಗಾರಪೇಟೆ (Bangarapet) ಪೊಲೀಸ್ ಠಾಣೆಯ ಸಿಪಿಐ ನಂಜಪ್ಪ ಎಂಬಾತ ಕಿರುಕುಳ (Police Atrocity) ನೀಡುತ್ತಿದ್ದಾರೆ. ಲೈಂಗಿಕವಾಗಿ ಸಹಕರಿಸದಿದ್ದರೆ ಸುಳ್ಳು ಕೇಸ್ ಹಾಕಿಸಿ ಒಳಗೆ ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಮಂಜುಳ ಎಂಬ ಮಹಿಳೆ, ಸಿಪಿಐ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ. ಪಕ್ಕದ ಮನೆಯವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ಇದರ ಬಗ್ಗೆ ದೂರಲು ಪೊಲೀಸ್ ಠಾಣೆಗೆ ಬಂದ ನಮ್ಮನ್ನೇ ಶೋಷಿಸಲಾಗುತ್ತಿದೆ. ಠಾಣೆಗೆ ಕರೆಸಿ ನನ್ನನ್ನು ʼಮಲಗೋಕೆ ಬಾʼ ಎಂದು ಸಿಪಿಐ ಕರೆಯುತ್ತಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೊಂದ ಮಹಿಳೆ, ಅಲ್ಲಿಂದಲೇ ಈ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮಹಿಳಾ ಪೊಲೀಸರಿಲ್ಲದೆ ನನ್ನನ್ನು ಬಂಧಿಸಿ ಅವಮಾನ ಮಾಡಿದ್ದಾರೆ. ಪುರುಷ ಪೊಲೀಸರನ್ನು ಆಗಾಗ ಮನೆ ಬಳಿ ಕಳುಹಿಸಿ ಕಿರುಕುಳ, ಅವಮಾನ ನೀಡುತ್ತಿದ್ದಾರೆ. ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ವೇಶ್ಯಾವಾಟಿಕೆ ಕೇಸ್, ನನ್ನ ಗಂಡನ ವಿರುದ್ಧ ರೌಡಿಶೀಟ್ ತೆರೆಯುವುದಾಗಿ ಬೆದರಿಸುತ್ತಿದ್ದಾರೆ. ನಮ್ಮಂತ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಮಹಿಳೆ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣವೊಂದರಲ್ಲಿ ಮಹಿಳೆ ಮಂಜುಳ ಹಾಗೂ ಪತಿ ಕಟ್ಟಾ ಸೀನು ಆರೋಪಿಗಳಾಗಿದ್ದಾರೆ. ವಿಚಾರಣೆಗೆಂದು ಕರೆದ ವೇಳೆ ಹೀಗೆ ಅವಮಾನವಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ವಿಚಾರಣೆ ಮಾಡಿ ವರದಿ ನೀಡುವಂತೆ ಕೆಜಿಎಫ್ ಎಸ್ಪಿ ಶಾಂತರಾಜು ಅವರು ಕೆಜಿಎಫ್ ಡಿವೈಎಸ್‌ಪಿ ಪಾಂಡುರಂಗ ಅವರಿಗೆ ಆದೇಶ ನೀಡಿದ್ದಾರೆ.
ಮೂರು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಮನೆಯಲ್ಲೇ ಇತ್ತು!
ಧಾರವಾಡ: ವ್ಯಕ್ತಿಯೊಬ್ಬರು ಕಣ್ಮರೆಯಾಗಿ ಮೂರು ವರ್ಷಗಳ ನಂತರ ಅವರ ಅಸ್ಥಿಪಂಜರ (Body Found) ಪತ್ತೆಯಾಗಿದೆ. ಅದೂ ಧಾರವಾಡ (Dharwad news) ನಗರದಲ್ಲಿ ಅವರ ಸ್ವಂತ ಮನೆಯಲ್ಲೇ! ಶವ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಕಂಡುಬಂದಿದೆ. ಆದರೆ ಮೂರು ವರ್ಷಗಳಿಂದ ಯಾರೂ ಇದನ್ನು (Viral News) ಗಮನಿಸಿಲ್ಲ!
ಧಾರವಾಡದ ಮಾಳಮಡ್ಡಿ ಬಡಾವಣೆಯ ಕೆನರಾ ಬ್ಯಾಂಕ್ ಬಳಿ ಘಟನೆ ನಡೆದಿದೆ. ಚಂದ್ರಶೇಖರ್ ಎಂಬ ಈ ವ್ಯಕ್ತಿ ಮೂರು ವರ್ಷಗಳಿಂದ ಎಲ್ಲೂ ಕಾಣಿಸಿರಲಿಲ್ಲ. ಕಳೆದ ತಿಂಗಳು ಈತ ಕಾಣುತ್ತಿಲ್ಲ ಎಂದು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಒಬ್ಬರು ದೂರು ಕೊಟ್ಟಿದ್ದರು. ಚಂದ್ರಶೇಖರ್ ಅವರನ್ನು ಎಲ್ಲ ಕಡೆ ಹುಡುಕಾಡಿದ್ದ ಪೊಲೀಸರು, ನಿನ್ನೆ ಅವರ ಮನೆಗೆ ಹೋಗಿದ್ದರು. ಅಲ್ಲಿ ಹೋದಾಗ ಪೊಲೀಸರಿಗೆ ಅಚ್ಚರಿಯಾಗುವಂತೆ ಚಂದ್ರಶೇಖರ್ ಅಸ್ಥಿಪಂಜರ ಮನೆಯಲ್ಲೇ ಪತ್ತೆಯಾಗಿದೆ.
ಚಂದ್ರಶೇಖರ್ ತಮ್ಮ ಪತ್ನಿಯ ಸಾವಿನ ನಂತರ ಮನೆಯಲ್ಲಿ ಒಬ್ಬನೇ ಇರುತ್ತಿದ್ದರು. ಅದಾದ ಬಳಿಕ ಕೋವಿಡ್ ಬಂದಿತ್ತು. ಕೋವಿಡ್ ವೇಳೆಯೇ ಇವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಯಾರೂ ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ.
ಇವರು ಹಾಲು, ಪೇಪರ್ ಕೂಡ ಹಾಕಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ವ್ಯಕ್ತಿ ಸತ್ತದ್ದು ಯಾರ ಗಮನಕ್ಕೂ ಬಂದಿಲ್ಲ. ಸುತ್ತಮುತ್ತ ಮನೆಗಳಿದ್ದರೂ ಯಾರಿಗೂ ಗೊತ್ತಾಗಿಲ್ಲ ಎಂಬುದು ವಿಚಿತ್ರ. ಸದ್ಯ ಅಸ್ಥಿಪಂಜರವನ್ನು ವಶಕ್ಕೆ ಪಡೆದ ಪೊಲೀಸರು, ಇದು ಅವರದೇನಾ ಎಂದು ತಿಳಿಯಲು ವಿಧಿವಿಜ್ಞಾನ ತಪಾಸಣೆಗೆ ಕಳಿಸಿದ್ದಾರೆ.