ಕೋಲಾರ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಅಲ್ಲಿನ ಕಾರ್ಯಕರ್ತರಿಗೆ ಹಾಗೂ ದೇಶದ ಭವಿಷ್ಯಕ್ಕೆ ಕಾಂಗ್ರೆಸ್ ನೆರವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಯ ನೀಡಿದ್ದಾರೆ. ಸಿದ್ದರಾಮಯ್ಯ ಜತೆಗೆ 20ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ನಂತರ, ಪ್ರತ್ಯೇಕವಾಗಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರವೇ ಪಂಚರತ್ನ ಯಾತ್ರೆಗೆ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದರು. ಅದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮುಳಬಾಗಿಲಿನಲ್ಲಿ ಆಯೋಜಿಸಿದ್ದ ಮೊದಲ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದರು.
ನನ್ನ ಪಾಲಿಗೆ ಇಂದು ಬಹಳ ಪವಿತ್ರವಾದ ದಿನ. ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ’. ಇದರಂತೆ ಮುಳಬಾಗಿಲಿಗೆ ಬಂದು ವಿಘ್ನಗಳ ನಿವಾರಣೆ ಮಾಡುವ ವಿನಾಯಕ, ವಿಜಯಕ್ಕೆ ನಾಯಕ ವಿನಾಯಕನಿಗೆ ಪೂಜೆ ಮಾಡಿ, ದರ್ಗಾ, ಆಂಜನೇಯ, ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ನಂತರ ಮುಳಬಾಗಿಲಿನ ಮಹಾ ಜನರ ಮುಂದೆ ನಮ್ಮ ಯಾತ್ರೆ ಆರಂಭಿಸುತ್ತಿದ್ದೇವೆ. ಇದು ನನ್ನ ಭಾಗ್ಯ.
ಕೊತ್ತೂರು ಮಂಜುನಾಥ್ ಅವರ ನಾಯಕತ್ವದಲ್ಲಿ ಪ್ರಜಾಧ್ವನಿಯಾತ್ರೆ ಇತಿಹಾಸದ ಪುಟಕ್ಕೆ ಸೇರುತ್ತಿದೆ. ನಿಮ್ಮ ಜೈಕಾರ, ಹೂಹಾರಕ್ಕೆ ನಾನು ಬಂದಿಲ್ಲ. ಮುಳಬಾಗಿಲು ಜನರ ಜತೆ ಕಾಂಗ್ರೆಸ್ ಸದಾ ಇದೆ. ನಿಮ್ಮ ಸಮಸ್ಯೆ ಆಲಿಸಿ, ಶಕ್ತಿ ತುಂಬಲು ನಾವಿಲ್ಲಿಗೆ ಬಂದಿದ್ದೇವೆ.
ನೀವು ಬಿಜೆಪಿ ಆಡಳಿತ ನೋಡಿದ್ದೀರಿ. ಕುಮಾರಸ್ವಾಮಿ ಅವರ ಆಡಳಿತ ನೋಡಿದ್ದೀರಿ. ಇವೆರಡೂ ಪಕ್ಷಗಳಿಂದ ರಾಜ್ಯಕ್ಕೆ ಭವಿಷ್ಯವಿಲ್ಲ. ನಾನು ದಳದ ಕಾರ್ಯಕರ್ತರಿಗೆ ಒಂದು ಮಾತು ಹೇಳುತ್ತೇನೆ. ನೀವು ಹತಾಶರಾಗಬೇಡಿ. ನಿಮ್ಮ ಹಾಗೂ ದೇಶದ ಭವಿಷ್ಯಕ್ಕೆ ಕಾಂಗ್ರೆಸ್ ನೆರವಾಗಲಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಂತೆ.
ಈ ಜಿಲ್ಲೆಯಲ್ಲಿ 3.12 ಲಕ್ಷ ಮನೆಗಳು ಪ್ರತಿ ತಿಂಗಳು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತವೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳು ಕೇವಲ 83 ಸಾವಿರ ಮಾತ್ರ. ಈ ಎಲ್ಲ ಮನೆಗಳಿಗೂ 200 ಯುನಿಟ್ ವಿದ್ಯುತ್ ನೀಡಲು ನಿರ್ಧರಿಸಿದ್ದೇವೆ.
ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆ ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರೂ. ಖಚಿತ. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕ್ರತರು ಪ್ರತಿ ಮನೆ ಮನೆಗೆ ತಲುಪಿಸಬೇಕು.
ಇದನ್ನೂ ಓದಿ : Prajadhwani : ಪರಮೇಶ್ವರ್ ಅಸಮಾಧಾನ ತಣಿಸಲು ಡಿ.ಕೆ. ಶಿವಕುಮಾರ್ ಸರ್ಕಸ್: ಹೋದೆಡೆಯೆಲ್ಲಾ ಜತೆಗೆ ನಾಯಕರು
ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳ ನಾಯಕರು ಬರುತ್ತಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ನಾಗೇಶ್ ಅವರು ಭವಿಷ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಅರಿತು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈಗ ನಮ್ಮ ಪಕ್ಷ ಮಂಜುನಾಥ್ ಅವರ ನೇತೃತ್ವದಲ್ಲಿ ಇಲ್ಲಿ ಯಾರು ಸ್ಪರ್ಧಿಸಬೇಕು ಎಂದು ತೀರ್ಮಾನಿಸುವ ಹೆಸರನ್ನು ನಾನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುತ್ತೇವೆ. ಯಾರೇ ಅಭ್ಯರ್ಥಿಯಾದರೂ ನೀವು ಹಸ್ತದ ಗುರುತಿಗೆ ಮತ ಹಾಕಿ ಪಕ್ಷವನ್ನು ಗೆಲ್ಲಿಸಬೇಕು. ನಿಮ್ಮ ಋಣವನ್ನು ತೀರಿಸಲು ನಮಗೆ ಅವಕಾಶ ಮಾಡಿಕೊಡಬೇಕು.