ಕೋಲಾರ: ವಿಧಾನಸಭೆ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ನಡೆಸುತ್ತಿರುವ ಪ್ರಜಾಧ್ವನಿ (Prajadhwani) ಯಾತ್ರೆಯ ಎರಡನೇ ಹಂತದ ಮೊದಲ ದಿನವೇ ನಾಯಕರ ಅಸಮಾಧಾನ ತಣಿಸುವ ಸರ್ಕಸ್ ಆರಂಭಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. ನಾಯಕರ ವರ್ತನೆಗೆ, ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನಡೆಯಿಂದ ಬೇಸರಗೊಂಡಿರುವ ಪರಮೇಶ್ವರ್ ಅವರನ್ನು ಬಿಡದೆ ಜತೆಯಲ್ಲೇ ಕರೆದುಕೊಂಡು ಶಿವಕುಮಾರ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕವಾಗಿದ್ದಾರೆ. ಆದರೆ ಈಗಾಗಲೆ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೋದಲ್ಲೆಲ್ಲ ಅನೇಕ ಆಶ್ವಾಸನೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ತಮ್ಮನ್ನು ನಾಮ್ ಕೆ ವಾಸ್ತೆ ಪ್ರಣಾಳಿಕೆ ಸಮಿತಿಗೆ ನೇಮಿಸಲಾಗಿದೆ, ಯಾರೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.
ಇನ್ನೇನು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ ಎನ್ನುವ ಹಂತಕ್ಕೆ ಹೋಗಿದ್ದ ಪರಿಸ್ಥಿತಿಯನ್ನು ಸ್ವತಃ ಕೆಪಿಸಿಸಿ ಪ್ರಭಾರಿ ರಣದೀಪ್ ಸಿಂಗ್ ಸುರ್ಜೆವಾಲ ಬಗೆಹರಿಸಲು ಗುರುವಾರ ಮುಂದಾಗಿದ್ದರು. ಶನಿವಾರ ಬೆಳಗ್ಗೆ ತಮ್ಮ ತಂಡದ ಪ್ರಜಾಧ್ವನಿ ಯಾತ್ರೆಯನ್ನು ಡಿ.ಕೆ. ಶಿವಕುಮಾರ್, ಕೋಲಾರದ ಕುರುಡುಮಲೆ ದೇವಸ್ಥಾನದಿಂದ ಆರಂಭಿಸಿದರು.
ಇದನ್ನೂ ಓದಿ : Prajadhwani : ಜಂಟಿ ಯಾತ್ರೆ ಮುಗಿಯಿತು, ಇನ್ನು ಒಂಟಿ ಯಾತ್ರೆ: ಶುಕ್ರವಾರದಿಂದ ಸಿದ್ದು-ಡಿಕೆಶಿ ಶಕ್ತಿ ಪ್ರದರ್ಶನ ಆರಂಭ
ದೇವಸ್ಥಾನದಲ್ಲಿ ಪೂಜೆ ನಡೆಸುವಾಗ, ಬಸ್‌ನಲ್ಲಿ ಕುಳಿತಿರುವಾಗಲೂ ಪರಮೇಶ್ವರ್ ಅವರನ್ನು ಡಿ.ಕೆ. ಶಿವಕುಮಾರ್ ಬಿಡಲೇ ಇಲ್ಲ. ಬಸ್ ಮೇಲೆ ಏರಿ ಕಾರ್ಯಕರ್ತರಿಗೆ ಇಬ್ಬರೂ ಒಟ್ಟಿಗೆ ಕೈಬೀಸಿದರು. ನಂತರ ಮುಳಬಾಗಿಲಿನಲ್ಲಿ ನಡೆದ ರ‍್ಯಾಲಿಯಲ್ಲೂ ಪರಮೇಶ್ವರ್ ಅವರನ್ನು ಜತೆಗೇ ಇರಿಸಿಕೊಂಡಿದ್ದರು. ಪರಮೇಶ್ವರ್ ಮುನಿಸನ್ನು ತಣಿಸುವ ಎಲ್ಲ ಕಾರ್ಯವನ್ನೂ ಡಿ.ಕೆ. ಶಿವಕುಮಾರ್ ನಡೆಸುತ್ತಿರುವುದು ಬಹಿರಂಗವಾಗಿಯೇ ಕಾಣುತ್ತಿತ್ತು.