ಕೋಲಾರ: ಅಂತರ್ಜಲ ಪಾತಾಳಕ್ಕೆ ಹೋಗಿದ್ದ ಕೋಲಾರ ಜಿಲ್ಲೆಗೆ, ಕೆ.ಸಿ. ವ್ಯಾಲಿ ಯೋಜನೆಯಿಂದ ಅನುಕೂಲವಾಗಿದೆ. ಬಚ್ಚಲು ನೀರಿಂದಲೊ, ಕೊಳಚೆ ನೀರಿಂದಲೊ ಒಟ್ಟಿನಲ್ಲಿ ಕೆರೆ ತುಂಬಿದ್ದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಕೋಲಾರದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ (Prajadhwani) ಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಬೆಂಗಳೂರಿನ ಹಾಗೂ ಕರ್ನಾಟಕದ ಜನರಿಗೆ ಹಾಲು, ತರಕಾರಿ ಕೊಡುತ್ತಿರುವ ಹಾಗೂ ಒಂದು ಕಾಲದಲ್ಲಿ ಚಿನ್ನ ಕೊಟ್ಟ ಜಾಗ. ಇಲ್ಲಿನ ಜನರ ತ್ಯಾಗ, ಹೋರಾಟವನ್ನು ಮರೆಯಲು ಸಾಧ್ಯವಿಲ್ಲ. ಇಲ್ಲಿನ ಜನರು ಶ್ರಮಜೀವಿಗಳು. ಕೋಲಾರದಲ್ಲಿ ಜನವರಿಯಾದರೂ ಹಸಿರು ಕಣ್ಣಿಗೆ ಕಾಣುತ್ತಿದೆ. ಇದಕ್ಕೆ ಕಾರಣ ಏನು ಎಂದು ನೀವೇ ಅರ್ಥ ಮಾಡಿಕೊಳ್ಳುವಷ್ಟು ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ. ನಾವು ಕೆ.ಸಿ. ವ್ಯಾಲಿ ಯೋಜನೆಯಲ್ಲಿ ನೀರು ತಂದೆವು. ಬಚ್ಚಲು ನೀರು ತಂದೆವೊ, ಕೊಳಚೆ ನೀರು ತಂದೆವೋ ಒಟ್ಟಿನಲ್ಲಿ ಕೆರೆ ತುಂಬಿಸಿದೆವು. ಈ ಹಿಂದೆ 1000-1200 ಅಡಿ ಆಳದಲ್ಲಿ ಸಿಗುತ್ತಿದ್ದ ಕೊಳವೆ ಬಾವಿಗಳ ನೀರಿನ ಮಟ್ಟ ಈಗ ಮೇಲೇರಿದೆ. ನಿಮ್ಮ ಆದಾಯ ಹೆಚ್ಚಾಗಿದೆ. ಜನರ ಬದುಕನ್ನು ಹಸನಾಗಿಸುವುದು ಕಾಂಗ್ರೆಸ್ ಕೆಲಸ ಎಂದರು.
ಜೆಡಿಎಸ್ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ನಾವು ಬೆಂಬಲ ನೀಡಿ 14 ತಿಂಗಳು ಸರ್ಕಾರ ನಡೆಸಿದರು. ಅವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದೆವು, ಪ್ರಧಾನಿಯನ್ನೂ ಮಾಡಿದೆವು ಎಂದರು.
ಕೇಂದ್ರದಲ್ಲಿ ಬಹಳ ಬಲಿಷ್ಟವಾದ ಸರ್ಕಾರವಿದೆ, ಇಲ್ಲಿ ಆಪರೇಷನ್ ಕಮಲದ ಮೇಲೆ ಒಂದು ಸರ್ಕಾರ ಬಂತು. ಇವರೇನಾದರೂ ಕೆಲಸ ಮಾಡಿದ್ದಾರೆಯೇ ಎನ್ನುವುದನ್ನು ನೋಡಲು ಪ್ರವಾಸ ಮಾಡುತ್ತಿದ್ದೇವೆ. ಜನರು ಅವರ ನೋವನ್ನು ತಿಳಿಸುತ್ತಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ನಿಮ್ಮ ಸರ್ಕಾರ ಬಂದು ಮೂರೂವರೆ ವರ್ಷ ಆಗಿದೆ, ಏನಾದರೂ ಅಚ್ಚೇ ದಿನ ಬಂದಿದೆಯೇ ಎಂಬ ಪ್ರಶ್ನೆ ಕೇಳಿಕೊಂಡು ಬರುತ್ತಿದ್ದೇವೆ.
ಹಾಸನದಲ್ಲಿ ಒಬ್ಬ ಶಾಸಕರೂ ಇಲ್ಲ. ಏಳಕ್ಕೆ ಏಳನ್ನೂ ಸೋತಿದ್ದೇವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿ ಅಲ್ಲಿ ಬದಲಾವಣೆ ಬಯಸಿದ್ದಾರೆ. ನಾವು ಅಧಿಕಾರಕ್ಕೆ ಬರುವುದು ಮುಖ್ಯ ಅಲ್ಲ. ನಮಗೆ ಅಧಿಕಾರ ಸಿಕ್ಕಿದಾಗ ಜನರಿಗೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ. ಇದು ನಮ್ಮ ಪರೀಕ್ಷೆಯ ಕಾಲ. ಎಲ್ಲಿ ಹೋದರೂ ಜನರು ಸಂತೋಷವಾಗಿಲ್ಲ. ಬಿಜೆಪಿಯವರು ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದರು.
ವೇದಿಕೆಯಲ್ಲಿದ್ದವರಿಗೆ ಗದರಿದ ಶಿವಕುಮಾರ್
ವೇದಿಕೆ ಮೇಲೆ ಇದ್ದ ಅನೇಕರು ಪರಸ್ಪರ ಮಾತನಾಡುತ್ತ, ಸಹಿ ತಿನ್ನುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಡಿ.ಕೆ. ಶಿವಕುಮಾರ್, ನಡೀರಿ ಆಕಡೆಗೆ. ಕೆಳಗಿರುವ ಜನರು ಎಷ್ಟು ಶಿಸ್ತಿನಿಂದ ಕುಳಿತಿದ್ದಾರೆ ನೋಡಿ. ನೀವು ಮಾತನಾಡುತ್ತಿದ್ದೀರ. ನಾವು ಮಾತನಾಡುವುದನ್ನು ಕೇಳಿಕೊಂಡು ಸುಮ್ಮನಿರಿ. ಇಲ್ಲದಿದ್ದಾರೆ ಕೆಳಗೆ ಇಳಿಸಬೇಕಾಗುತ್ತದೆ. ಶಿಸ್ತು ಇರಬೇಕು ಎಂದರು. ಮತ್ತೂ ವೇದಿಕೆ ಮೇಲಿದ್ದವರು ಗಲಾಟೆ ಮುಂದುವರಿಸಿದರು. ಏಯ್ ಎಂದು ಗದರಿದ ಶಿವಕುಮಾರ್, ಕೆಳಕ್ಕೆ ಇಳಿಯಿರಿ ಎಂದರು.
ಇದನ್ನೂ ಓದಿ | Prajadhwani : ನಾನು ಅಪ್ಪಟ ಹಿಂದು; ಆದರೆ ಹಿಂದುತ್ವವಾದಿ ಅಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ
ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ರೈತರು, ಬಡವರು, ಅಲ್ಪಸಂಖ್ಯಾತರು ಸೇರಿ ಎಲ್ಲರೂ ಕಷ್ಟಕ್ಕೆ ಸಿಲುಕಿದ್ದಾರೆ. ಅವರೆಲ್ಲರನ್ನೂ ಕಷ್ಟದಿಂದ ಹೊರತರಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ರಾಜ್ಯ ಹಾಗೂ ರಾಷ್ಟ್ರದಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಎಲ್ಲ ವರ್ಗದ, ಸಮುದಾಯದ ಜನರು ಒಗ್ಗಟ್ಟಿನಿಂದ ಬಳಲು ಸಾಧ್ಯವಾಗುತ್ತದೆ ಎಂದರು.
ಕೋಲಾರದ ಆರು ಕ್ಷೇತ್ರದಿಂದ ಬಂದಿರುವ ಸಿಪಾಯಿಗಳಿದ್ದಾರೆ. ಎಲ್ಲರೂ ಯುದ್ಧಕ್ಕೆ ತಯಾರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಶಕ್ತಿ ಈ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದೆ. ರಾಜ್ಯದಲ್ಲಿ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು, ಕೇಂದ್ರದಲ್ಲಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ.