ಕೋಲಾರ: ಮುಂದಿನ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಹಾಗೂ ಮಹಿಳೆಯರಿಗೆ ಮಾಸಿಕ 2,000ರೂ. ನೀಡುವುದಾಗಿ ಘೋಷಿಸಿರುವ ಸರ್ಕಾರ ಇದೀಗ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಕೋಲಾರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ಹಾಲು ಉತ್ಪಾದನೆಯಲ್ಲಿ ಕೋಲಾರ ಎರಡನೇ ಸ್ಥಾನದಲ್ಲಿದೆ. ಕ್ಷೀರಧಾರೆ ಯೋಜನೆಯಡಿ ಪ್ರತೀ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದೆ. ಕುಮಾರಸ್ವಾಮಿ ಅವರು 6 ರೂ. ಕೊಡುತ್ತೇವೆ ಎಂದಿದ್ದರು ಆದರೆ ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದಮೇಲೆ ಎಷ್ಟು ಹೆಚ್ಚು ಮಾಡಬೇಕು ಎಂದು ಚರ್ಚೆ ಮಾಡಿ ಹೈನುಗಾರರಿಗೆ ಖಂಡಿತಾ ಹೆಚ್ಚು ಸಹಾಯಧನ ಕೊಡುತ್ತೇವೆ. ನಾವು ನುಡಿದಂತೆ ನಡೆಯುವವರು. ಬಿಜೆಪಿ ಅವರು ರೈತರ ಸಾಲ ಮನ್ನಾ ಮಾಡಿಲ್ಲ, ಮೋದಿ ಅವರು ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಅವರು ಬಡವರ ಸಾಲ ಮನ್ನಾ ಮಾಡಲ್ಲ. ಮನಮೋಹನ್ ಸಿಂಗ್ ಅವರು 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ರು. ನಾನು 8,165 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆ.
ಕೋಲಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಡುವ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೆ, ನಾವು ಅಧಿಕಾರಕ್ಕೆ ಬಂದಮೇಲೆ ಖಂಡಿತಾ ಮಾಡಿಕೊಡುತ್ತೇವೆ. ರಾಜ್ಯದಲ್ಲಿ ಕೋಆಪರೇಟಿವ್ ಸಂಘಗಳ ಮೂಲಕ ಮಹಿಳೆಯರು ಮಾಡಿರುವ ಸಾಲವನ್ನು ಮನ್ನಾ ಮಾಡುವ ತೀರ್ಮಾನವನ್ನು ನಾವು ಅಧಿಕಾರಕ್ಕೆ ಬಂದ ಮೇಲೆ ಮಾಡುತ್ತೇವೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಶೋಷಿತ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಕೊಡುವ ಕೆಲಸ ಮಾಡಿದ್ದೇನೆ. ಎಸ್‌ಸಿಎಸ್‌ಪಿಟಿಎಸ್‌ಪಿ ಯೋಜನೆ ಜಾರಿ ಮಾಡಿದ್ದು, ಬಡ್ತಿ ಮೀಸಲಾತಿ ಜಾರಿಗೆ ತಂದದ್ದು, ಸರ್ಕಾರಿ ಟೆಂಡರ್ ಗಳಲ್ಲಿ ಮೀಸಲಾತಿ ನೀಡಿದ್ದು, ಕೈಗಾರಿಕೋದ್ಯಮಗಳಿಗೆ 4% ಬಡ್ಡಿದರದಲ್ಲಿ ಬ್ಯಾಂಕುಗಳ ಮೂಲಕ ಸಾಲ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ನಾವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 10,000 ಕೋಟಿ ರೂ. ಅನುದಾನ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Prajadhwani : 40 ವರ್ಷದ ರಾಜಕಾರಣದಲ್ಲಿ ಇಂಥ ಸ್ಪೀಕರ್‌ನ ನೋಡೇ ಇರಲಿಲ್ಲ: ಕಾಗೇರಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ
ಕೋಲಾರ ಜಿಲ್ಲೆಗೆ ಲಕ್ಷ್ಮೀನಾರಾಯಣ ಅವರು ಹೊಸದಾಗಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ, ಊರುಬಾಗಿಲು ಶ್ರೀನಿವಾಸ್ ಅವರು ಕಾರ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಇಬ್ಬರಿಗೂ ಪಕ್ಷದ ಪರವಾಗಿ ಅಭಿನಂದನೆಗಳು. ಇವರ ನಾಯಕತ್ವದಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರದಿಂದ 6ಕ್ಕೆ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ.