ಕೋಲಾರ: ರಾಜ್ಯ ಸರ್ಕಾರದ 40% ಭ್ರಷ್ಟಾಚಾರದ ಕುರಿತು ಚರ್ಚೆ ಮಾಡಲು ಅವಕಾಶ ಕೊಡಿ ಎಂದು ಮೂರು ಬಾರಿ ಕೇಳಿದರೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಲಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ, ನಲವತ್ತು ವರ್ಷದ ರಾಜಕಾರಣದಲ್ಲಿ ಇಂಥ ಸ್ಪೀಕರನ್ನು ನೋಡೇ ಇರಲಿಲ್ಲ ಎಂದರು. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಈ ಸರ್ಕಾರ ಎಲ್ಲ ರೀತಿಯಲ್ಲೂ ಭ್ರಷ್ಟಾಚಾರ ನಡೆಸುತ್ತಿದೆ. ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ನಾನು ಮೂರು ಬಾರಿ ಪ್ರಯತ್ನ ಮಾಡಿದ್ದೆ. ಆದರೆ ಸ್ಪೀಕರ್ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಲು ಅವಕಾಶವನ್ನೇ ನೀಡಲಿಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೊನೆ ದಿನದವರೆಗೂ ಅವಕಾಶ ಕೊಡಲೇ ಇಲ್ಲ. ಅವಕಾಶ ನೀಡುತ್ತೇನೆ ಎನ್ನುತ್ತಲೇ ಅಧಿವೇಶನ ಮುಂದೂಡಿಬಿಟ್ಟರು. ರಮೇಶ್ ಕುಮಾರ್ ಅವರೂ ಸ್ಪೀಕರ್ ಆಗಿದ್ದರು. ನನ್ನ 40 ವರ್ಷದ ರಾಜಕಾರಣದಲ್ಲಿ ಇಂಥ ಸ್ಪೀಕರನ್ನು ನೋಡೇ ಇರಲಿಲ್ಲ ಎಂದರು.
ಇಂದು ನೇಮಕಾತಿ, ವರ್ಗಾವಣೆ, ಬಡ್ತಿ, ಟೆಂಡರ್ ಹೀಗೆ ಎಲ್ಲಾ ಕಡೆ ಲಂಚ ತುಂಬಿ ಹೋಗಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ ಲಂಚ ಎಂದು ಪಿಸುಗುಟ್ಟುತ್ತವೆ. ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೆ, 13 ಬಜೆಟ್ ಗಳನ್ನು ಮಂಡಿಸಿದ್ದೇನೆ, 12 ವರ್ಷ ಹಣಕಾಸಿನ ಮಂತ್ರಿಯಾಗಿದ್ದೆ ಈ ಅವಧಿಯಲ್ಲಿ ಎನ್.ಒ.ಸಿ ರಿಲೀಸ್ ಮಾಡಲು ಒಂದು ರೂಪಾಯಿ ಲಂಚ ಕೇಳಿದ್ದೆ ಎಂದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಇದರಿಂದ ಹೆದರಿರುವ ಬಿಜೆಪಿಯವರು ವಾರಕ್ಕೊಮ್ಮೆ ಮೋದಿ ಅವರನ್ನು ಕರೆಸಲು ಶುರುಮಾಡಿದ್ದಾರೆ. ಬಿಜೆಪಿಯ ಬಂಡವಾಳ ಮೋದಿ ಅವರು. ಮೋದಿ ಅವರು ಮತ್ತೊಮ್ಮೆ ತಮಗೆ ಅಧಿಕಾರ ಕೊಡಿಸುತ್ತಾರೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನೂರು ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೂ ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.
ಇದನ್ನೂ ಓದಿ | Subhas Chandra Bose : ನೇತಾಜಿಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? : ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನೆ
ಸುಭಾಷ್‌ಚಂದ್ರ ಬೋಸ್ ಸ್ಮರಣೆ
ಭಾಷಣದ ಆರಂಭದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ಸಿದ್ದರಾಮಯ್ಯ ಸ್ಮರಿಸಿದರು. ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ನೇತಾಜಿ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರು. ಮಹಾತ್ಮ ಗಾಂಧಿ ಅವರು ಅಹಿಂಸೆಯ ಹಾದಿಯಲ್ಲಿ ಸ್ವಾತಂತ್ರ್ಯ ಪಡೆಯುವ ಪ್ರಯತ್ನ ಮಾಡಿದರೆ, ಬೋಸ್ ಅವರು ಬ್ರಿಟೀಷರ ವಿರುದ್ಧ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಬೇಕೆಂದು ನಂಬಿದ್ದರು. ಇದೊಂದೆ ಗಾಂಧಿ ಅವರಿಗೂ ಬೋಸ್ ರಿಗೂ ಇರುವ ಭಿನ್ನಾಭಿಪ್ರಾಯ. ಇಂದು ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಹೋರಾಟಗಳಿಂದ ನಾವೆಲ್ಲರು ಸ್ಪೂರ್ತಿಯನ್ನು ಪಡೆಯೋಣ, ಪ್ರತಿಯೊಬ್ಬ ಭಾರತೀಯನಿಗೂ ದೇಶ ಮೊದಲು, ನಂತರ ನಾವು. ದೇಶದ ಜನರ ಬಗ್ಗೆ ಪ್ರೀತಿ, ವಿಶ್ವಾಸವನ್ನು ಬೆಳೆಸಿಕೊಳ್ಳೋಣ ಎಂದು ಆಶಿಸುತ್ತೇನೆ ಎಂದರು.
ಕೋಲಾರದಲ್ಲಿ ಸ್ಪರ್ಧೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ನವರು ಒಪ್ಪಿದರೆ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದನ್ನು ಕಳೆದ ಬಾರಿ ಕೋಲಾರಕ್ಕೆ ಬಂದಾಗಲೂ ಹೇಳಿದ್ದೆ ಎಂದರು.