ಕೋಲಾರ: ವ್ಹೀಲಿಂಗ್ ಹಾವಳಿಗೆ (Road Accident) ದೇಗುಲದ ಅರ್ಚಕರೊಬ್ಬರು ಬಲಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ವಿವೇಕಾನಂದ ರಸ್ತೆ ಬಸ್ ನಿಲ್ದಾಣ ಬಳಿ ಘಟನೆ ನಡೆದಿದೆ. ಗಾಂಧಿನಗರದ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಗೋಪಾಲ (45) ಮೃತ ದುರ್ದೈವಿ.
ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರಿಂದ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಗೊಂಡಿದ್ದ ಗೋಪಾಲರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕ ಗೋಪಾಲ್ ಮೃತಪಟ್ಟಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಕಾರು ಡಿಕ್ಕಿ ಪಾದಚಾರಿ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸೋಲೂರು ಗ್ರಾಮದ ಕೃಷ್ಣಪ್ಪ (80) ಮೃತ ದುರ್ದೈವಿ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಬ್ಯಾಡರಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಮಾಡಿ ಕಾರು ಚಾಲಕ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ರಾಷ್ಟ್ರೀಯ ಹೆದ್ಧಾರಿ 207ರಲ್ಲಿ ದೊಡ್ಡಬಳ್ಳಾಪುರದಿಂದ ದೇವನಹಳ್ಳಿ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Gas Cylinder Blast: ಸಿಲಿಂಡರ್ ಸ್ಫೋಟಕ್ಕೆ ಸುಟ್ಟುಕರಕಲಾದ ವ್ಯಕ್ತಿ; ಮನೆ ಗೋಡೆ ಬಿದ್ದು ಮಕ್ಕಳು ಗಾಯ
ಹಾಸನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಲಾರಿ
ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಕಂದಕಕ್ಕೆ ಬಿದ್ದಿದೆ. ಲಾರಿ ಚಾಲಕ ಸೇರಿ ಮೂವರಿಗೆ ಗಾಯವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ರಸ್ತೆಯ ದೋಣಿಗಲ್ ಬಳಿ ಅಪಘಾತ ನಡೆದಿದೆ. ಲಾರಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸರಕು ತುಂಬಿಕೊಂಡು ತೆರಳುತ್ತಿತ್ತು.
ಕೆಲ ದಿನಗಳ ಹಿಂದೆ ಭಾರಿ ಮಳೆಯಿಂದ ನೀರು ಹರಿದು ಹೆದ್ದಾರಿ ಪಕ್ಕದಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿತ್ತು. ತಡರಾತ್ರಿ ತಿರುವಿನಲ್ಲಿ ಚಾಲಕನಿಗೆ ನಿಯಂತ್ರಣ ಸಿಗದೆ ಲಾರಿ ಕಂದಕಕ್ಕೆ ಪಲ್ಟಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ. ಲಾರಿಯಲ್ಲಿ ಸಿಲುಕಿದ್ದ ಕುಣಿಗಲ್ ಮೂಲದ ಲಾರಿ ಚಾಲಕ ಜಾಫರ್, ಸಿಮ್ರಾನ್ ಮತ್ತು ಹತಾಹುಲ್ಲರನ್ನು ರಕ್ಷಿಸಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದಿನಾಯಿ ದಾಳಿಗೆ 15 ಕುರಿ ಮರಿ ದಾರುಣ ಸಾವು
ಬೀದಿ ನಾಯಿ ದಾಳಿಗೆ 15 ಕುರಿಮರಿ ದಾರುಣವಾಗಿ ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಜಿ.ಪಿ ರಂಗಪ್ಪ ಬಡಾವಣೆಯಲ್ಲಿ ಮಾರಣ್ಣ ಎಂಬುವವರಿಗೆ ಸೇರಿದ ಕುರಿಮರಿಗಳನ್ನು ಮೇಯಿಸಲು ಹೋದಾಗ ನಾಯಿ ದಾಳಿ ನಡೆದಿದೆ. ಸುಮಾರು 50 ಸಾವಿರ ಬೆಲೆ ಬಾಳುತ್ತಿದ್ದ ಕುರಿಮರಿ ಮೃತಪಟ್ಟಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ