Site icon Vistara News

School Teacher: ಹೆಣ್ಣು ಮಕ್ಕಳು ಬಟ್ಟೆ ಬದಲಿಸುವಾಗ ವಿಡಿಯೊ; ಯಲವಳ್ಳಿ ವಸತಿ ಶಾಲೇಲಿ ಮತ್ತೊಂದು ಹೀನ ಕೃತ್ಯ

Toilet Pit cleaning in Morarji Desai Residential School

ಕೋಲಾರ: ಮಾಲೂರು ತಾಲೂಕಿನ ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (Morarji Desai Residential School) ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ (Toilet Pit cleaning) ಪ್ರಕರಣ ಹೊರಬರುತ್ತಿದ್ದಂತೆ ಶಾಲೆಯ ಒಂದೊಂದೇ ಹುಳುಕುಗಳು ಗೊತ್ತಾಗತೊಡಗಿವೆ. ಈಗ ಶಾಲೆಯ ಶಿಕ್ಷಕರ (School Teacher) ವಿರುದ್ಧ ಮಕ್ಕಳು ಸಿಡಿದೆದ್ದಿದ್ದಾರೆ. ವೈಯರ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ರಾತ್ರಿ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿಕ್ಷೆ ನೀಡಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ತಾವು ಬಟ್ಟೆ ಬದಲಾಯಿಸುವಾಗ ಫೋಟೊ ಹಾಗೂ ವಿಡಿಯೊವನ್ನು (Photo and video of changing clothes) ಸೆರೆ ಹಿಡಿಯಲಾಗಿದೆ ಎಂದು ಹೆಣ್ಣು ಮಕ್ಕಳು ಸಮಸ್ಯೆಯ ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.

ಮೊರಾರ್ಜಿ ದೇಸಾಯಿ ಶಾಲೆಗೆ ಜಿಲ್ಲಾ ನ್ಯಾಯಾಧೀಶರಾದ ಸುನೀಲ್‌ ಹೊಸಮಣಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಮಕ್ಕಳ ಬಳಿಯೂ ಸಮಸ್ಯೆಯನ್ನು ವಿಚಾರಿಸಿದ್ದಾರೆ. ಪ್ರತಿ ಕೊಠಡಿಗೂ ಭೇಟಿ ಕೊಟ್ಟು ಪರಿಶೀಲನೆ ‌ನಡೆಸಿದ ನ್ಯಾಯಾಧೀಶರು ಮಕ್ಕಳಿಂದ ದೂರು ಪಡೆದುಕೊಂಡರು. ಈ ವೇಳೆ ಮಕ್ಕಳು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ವಾರ್ಡನ್ ಮಂಜುನಾಥ್ ಹಾಗೂ ಶಿಕ್ಷಕ ಅಭಿಷೇಕ್ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಈ ವೇಳೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಪ್ರಾಂಶುಪಾಲೆ ಭಾರತಮ್ಮ, ಚಿತ್ರಕಲಾ ಶಿಕ್ಷಕರಿಗೆ ವಾರ್ಡನ್ ಹುದ್ದೆ ನೀಡದ ಕಾರಣ ಇಷ್ಟು ಅವಾಂತರ ಮಾಡಿದ್ದಾರೆ‌. ಅವರು ಮಾಡಿದ ಪಿತೂರಿಗೆ ಮಕ್ಕಳು ಇಂತಹ ಹೇಳಿಕೆ ನೀಡಿದ್ದಾರೆ. ಮಲದಗುಂಡಿ ಸ್ವಚ್ಛತೆ ಮಾಡಿಸುತ್ತಿದ್ದಾಗ ನಾನೇ ಹೋಗಿ ಬಿಡಿಸಿದ್ದೇನೆ. ಮಕ್ಕಳಿಗೆ ಶಿಕ್ಷೆ ನೀಡಿದಾಗ ನಾನು ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದೆ‌ ಎಂದು ಹೇಳಿದ್ದಾರೆ.

ಪ್ರಿನ್ಸಿಪಾಲ್‌ಗೆ ರಾಜಕೀಯ ಬಲ?

ಪ್ರಿನ್ಸಿಪಲ್‌ ಭಾರತಮ್ಮ ಅವರಿಗೆ ರಾಜಕೀಯವಾಗಿ ಪ್ರಭಾವ ಇದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಅವರು ಯಾರಿಗೂ ಕ್ಯಾರೆ ಅನ್ನುತ್ತಿರಲಿಲ್ಲ. ಕಳೆದ ಆರು ವರ್ಷದಿಂದ ತಮ್ಮ ಮಾತೇ ಅಂತಿಮ ಎಂಬಂತೆ ನಡೆದುಕೊಂಡು ಬಂದಿದ್ದಾರೆ. ನಿತ್ಯ ಕೊಠಡಿ ಸ್ವಚ್ಛತೆ ಮಾಡಲು ಸೂಚನೆ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.

ಬಟ್ಟೆ ಬದಲಾಯಿಸುವ ಫೋಟೋ ತೆಗೆದಿದ್ದು ಯಾರು?

ಮಕ್ಕಳು ಬಟ್ಟೆ ಬದಲಾಯಿಸುವ ಫೋಟೊವನ್ನು ದುಷ್ಕರ್ಮಿಗಳು ಸೆರೆ ಹಿಡಿದಿದ್ದಾರೆ. ಆದರೆ, ಯಾರು ಈ ಕೃತ್ಯ ಎಸೆಗಿದ್ದಾರೆ ಎಂಬುದು ಮಾತ್ರ ಹೆಣ್ಣು ಮಕ್ಕಳಿಗೆ ಗೊತ್ತಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಲವು ಹೆಣ್ಣು ಮಕ್ಕಳು, ನಾವು ಬಟ್ಟೆ ಚೇಂಜ್ ಮಾಡೋದು, ಬೆಡ್ ಮೇಲೆ ಮಲಗಿರುವ ಫೋಟೋಗಳನ್ನು ಯಾರೋ ತೆಗೆದಿದ್ದಾರೆ. ಈಚೆಗೆ ಅಧಿಕಾರಿಗಳು ಬಂದಾಗ ಫೋಟೊ ತೋರಿಸಿದ್ದಾರೆ. ಮಕ್ಕಳು ಯಾರೂ ಫೋನ್ ಬಳಕೆ ಮಾಡುವುದಿಲ್ಲ. ಆದರೂ ಯಾರೋ ಕಿಟಕಿ ಒಳಗಡೆಯಿಂದ ಫೋಟೊ ತೆಗೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಮಕ್ಕಳಿಗೆ ಯಾಕೆ ಫೋನ್‌ ಕೊಡಲ್ಲ? ಜಿಲ್ಲಾ ನ್ಯಾಯಾಧೀಶರ ಪ್ರಶ್ನೆ ‌

ವಸತಿ ಶಾಲೆಗೆ ಭೇಟಿ ನೀಡಿರುವ ಜಿಲ್ಲಾ ನ್ಯಾಯಾಧೀಶರು, ಮಕ್ಕಳಿಗೆ ಫೋನ್‌ ಕೊಡದ ವಿಷಯದ ಬಗ್ಗೆ ಅಸಮಾಧಾನಗೊಂಡರು. ಪ್ರಿನ್ಸಿಪಾಲ್‌ ಬಳಿ ಈ ಬಗ್ಗೆ ಪ್ರಶ್ನೆ ಕೇಳಿದ ಅವರು, ಮಕ್ಕಳಿಗೆ ಯಾಕೆ ಫೋನ್ ಕೊಡುವುದಿಲ್ಲ. ಜೈಲಿನಲ್ಲಿ ಕೈದಿಗಳಿಗೆ ಫೋನ್ ಬಳಕೆಗೆ ಕೊಡುತ್ತಾರೆ. ದಿನಕ್ಕೆ ಒಂದು ನಿಮಿಷ, ಎರಡು ನಿಮಿಷ ಮಾತಡಲು ಅವಕಾಶ ಕೊಡುತ್ತಾರೆ. ಮಕ್ಕಳಿಗೆ ಯಾಕೆ ಕೊಡಲ್ಲ? ಪೋಷಕರ ಜತೆ ಮಾತನಾಡುವುದಕ್ಕೆ ಅವಕಾಶ ನೀಡಬೇಕೆಂದು ಸೂಚನೆ ನೀಡಿದರು.

ಮೂವರ ಅಮಾನತು

ಮಕ್ಕಳನ್ನು ಶೌಚಾಲಯ ಗುಂಡಿ ಸ್ವಚ್ಛತೆಗೆ ಇಳಿಸಿದ್ದ ಕಾರಣದಿಂದ ಮೂವರು ಶಿಕ್ಷಕರನ್ನು ಅಮಾನತು ಮಾಡಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಪ್ರಾಂಶುಪಾಲರಾದ ಭಾರತಮ್ಮ, ಕಂಪ್ಯೂಟರ್ ಶಿಕ್ಷಕ ಮಂಜುನಾಥ್, ಚಿತ್ರಕಲಾ ಶಿಕ್ಷಕ ಮುನಿಯಪ್ಪ ಅಮಾನತಾಗಿದ್ದಾರೆ.

ಏನಿದು ಪ್ರಕರಣ?

ಯಲವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಪೋಷಕರು ಬೇಸರ ವ್ಯಕ್ತಪಡಿಸಿ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಈ ಕುರಿತ ವಿಡಿಯೊ ಹಾಗೂ ಫೊಟೊ ಎಲ್ಲೆಡೆ ಹರಿದಾಡಿ ವಿರೋಧ ವ್ಯಕ್ತಗೊಂಡಿತ್ತು. ದೂರು ನೀಡಿದ ಬಳಿಕ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ, ಶಿಕ್ಷಕರ ವಿರುದ್ಧ ಪೋಷಕರು ದೂರು ದಾಖಲಿಸಲಾಗಿದೆ.

ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಯು ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದರು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ಇದೇ ರೀತಿಯಲ್ಲಿ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ: Karnataka Weather : ಇಂದಿನಿಂದ ಡಿ.20ರ ತನಕ ಮಳೆ ಕಾಟ!

ಇದಲ್ಲದೆ, ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ಕೊಡಲಾಗುತ್ತಿದೆ ಎಂದು ದೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಜನ ಮಕ್ಕಳಿದ್ದು, ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

Exit mobile version