ಕೋಲಾರ : ಒಂದೇ ಕುಣಿಕೆಯಲ್ಲಿ ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲೂಕಿನ ಮಂಜಲಿ ಗ್ರಾಮದ ಬಳಿ ನಡೆದಿದೆ. ಮಾಲಾಶ್ರೀ (35), ಲಕ್ಷ್ಮಣ್ (38) ಆತ್ಮಹತ್ಯೆಗೆ ಶರಣಾದವರು.
ಮಾಲಾಶ್ರೀ ಮಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಪತಿ ಲಕ್ಷ್ಮಣ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ.
ದಂಪತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಮದ ಹೊರವಲಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ವೇಮಗಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಕ್ಕಳಿಬ್ಬರು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇದನ್ನೂ ಓದಿ: Road Accident : ಮಂಡ್ಯದಲ್ಲಿ ಜವರಾಯನ ಅಟ್ಟಹಾಸ; ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು
ಆನ್‌ಲೈನ್ ಗೇಮಿಂಗ್ ಚಟ; ಹಣ ಕಳೆದುಕೊಂಡ ವಿದ್ಯಾರ್ಥಿ ಸೂಸೈಡ್
ಹುಬ್ಬಳ್ಳಿ: ಆನ್‌ಲೈನ್ ಗೇಮಿಂಗ್‌ನಲ್ಲಿ (Self Harming) ಹಣ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ (Student Death) ಶರಣಾಗಿದ್ದಾನೆ. ಹುಬ್ಬಳ್ಳಿಯ ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ರಾಕೇಶ್ ಜಂಬಲದಿನ್ನಿ (21) ಮೃತ ದುರ್ದೈವಿ.
ಬಿಇ 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್ ಆನ್‌ಲೈನ್ ಗೇಮ್ ಚಟ ಹೊಂದಿದ್ದ. ದಿಢೀರ್ ಹಣ ಗಳಿಸುವ ಆಸೆಗೆ ಬಿದ್ದ ರಾಕೇಶ್ ಆನ್‌ಲೈನ್ ಗೇಮ್‌ಗೆ ಸಾವಿರಾರು ರೂ. ಹಾಕಿ ಎಲ್ಲವನ್ನೂ ಕಳೆದುಕೊಂಡಿದ್ದ. ಇದರಿಂದ ಮನನೊಂದ ರಾಕೇಶ್ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಸಾಲಭಾದೆ ತಾಳಲಾರದೇ ರೈತ ಆತ್ಮಹತ್ಯೆ
ಸಾಲಭಾದೆ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹನುಮಂತ ಭೀಮಪ್ಪ ಮುರನಾಳ (55) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು. ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಲಕ್ಕಸಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಗಳವಾರ ಜಮೀನಿನಲ್ಲಿ ವಿಷ ಸೇವಿಸಿದ್ದ ಹನುಮಂತರನ್ನು ಕುಟುಂಬಸ್ಥರು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೈತ ಎರಡೂವರೆ ಎಕರೆ ಸ್ವಂತ ಜಮೀನು ಹೊಂದಿದ್ದರು. 2 ಎಕರೆ ಜಮೀನಿನಲ್ಲಿ ಲಾವಣಿ ಮಾಡುತ್ತಿದ್ದರು. ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ