ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಮಾಜಿ ಸಿಎಂ ಘೋಷಣೆ ಮಾಡಿದ್ದಾರೆ. ಮತ್ತೆ ನಾಮಪತ್ರ ಸಲ್ಲಿಕೆ ಬರುತ್ತೇನೆ ಎಂದು ಹೇಳಿದ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರದಿಂದ ಜಯಿಸಿ ಮತ್ತೊಮ್ಮೆ ಯಾಕೆ ಸಿಎಂ ಆಗಬಾರದು ಎಂಬ ಕನಸನ್ನೂ ಬಿಚ್ಚಿಟ್ಟಿದ್ದಾರೆ.
ಇಡೀ ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅನೇಕ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಸಂಜೆ ವೇಳೆಗೆ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಭೈರೇಗೌಡ, ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು. ನಮ್ಮ ಒತ್ತಾಯಕ್ಕೆ ಸಿದ್ದರಾಮಯ್ಯ ಬಂದು ಜನರನ್ನು ಭೇಟಿ ಮಾಡಿದ್ದಾರೆ. ಅವರು ಆದಷ್ಟು ಬೇಗ ನಿರ್ಧಾರ ಮಾಡಬೇಕು, ವರಿಷ್ಠರು ಸಹ ತೀರ್ಮಾನ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರೋಣ ಎಂದರು.
ದಿವಂಗತ ಭೈರೇಗೌಡರ ಸಮಾಧಿಗೆ ಪುಷ್ಪಾರ್ಚನೆ ನಂತರ ಮಾತನಾಡಿದ ಸಿದ್ದರಾಮಯ್ಯ, ದಿವಂಗತ ಭೈರೇಗೌಡರ ಒಡನಾಟ ಬಗ್ಗೆ ಮೆಲುಕು ಹಾಕಿದರು. ಕ್ಷೇತ್ರದ ಜನತೆ ಕಾರ್ಯಕರ್ತರು ಕೋಲಾರದಲ್ಲಿ ನಿಲ್ಲಬೇಕು ಒತ್ತಾಯ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು. ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಶಾಸಕರ ಜವಾಬ್ದಾರಿ. ದೂರದ ಕ್ಷೇತ್ರಕ್ಕಿಂತ ಹತ್ತಿರದ ಕ್ಷೇತ್ರ ಬೇಕು ಎಂದು ಹೇಳಿದ್ದೆ. ಬಾದಾಮಿ, ವರುಣಾ, ಸೇರಿದಂತೆ ಎಲ್ಲ ಕಡೆ ಒತ್ತಾಯ ಕೇಳಿಬಂದಿದೆ.
ಕೋಲಾರದಲ್ಲಿ ಎಲ್ಲರೂ ಆತ್ಮೀಯರು. ಕೆ.ಹೆಚ್. ಮುನಿಯಪ್ಪ ಜತೆ ಮಾತನಾಡಿದೆ, ಅದಕ್ಕೆ ಬನ್ನಿ ನಿಂತುಕೊಳ್ಳಿ ಎಂದಿದ್ದಾರೆ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇಲ್ಲ. ಹಾಲಿ ಶಾಸಕರುಗಳು ಸಹ ಸ್ವಾಗತ ಮಾಡುತಿದ್ದಾರೆ. ಎಲ್ಲರ ಒತ್ತಾಯ, ಆಸೆಗೆ ಇಲ್ಲ ಅನ್ನೊಕ್ಕಾಗಲ್ಲ. ಅದಕ್ಕೆ ಒಪ್ಪಿದೆ.
ರಾಜ್ಯದಲ್ಲಿ ಓಡಾಡಬೇಕು, ಬೇರೆ ಕಡೆ ಪಕ್ಷದ ಕಡೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಬೇಕು. ನಾವೆಲ್ಲರೂ ಸೇರಿ ಗೆಲ್ಲಿಸುತ್ರೇವೆ ಎಂದು ಎಲ್ಲರೂ ಹೇಳಿದ್ದಾರೆ. ನನಗೆ ಎಲೆಕ್ಷನ್ ನಿಲ್ಲಲು ಅಂಜಿಕೆ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್‌ಗೆ ನಿಲ್ಲಬೇಕು. ಬಾದಾಮಿ ಕ್ಷೇತ್ರದ ಜನ, ಅಲ್ಲಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ದಾರೆ. ಆದರೆ ನನಗೆ ಬಾದಾಮಿ ದೂರ ಆಗುತ್ತದೆ. ಶಾಸಕರಾದವರು ಕ್ಷೇತ್ರದಲ್ಲಿರಬೇಕು. ವಾರಕೊಮ್ಮೆ ಅಲ್ಲಿ ಹೋಗಲು ಆಗಲ್ಲ. ಆದ್ದರಿಂದ ಹತ್ತಿರದಲ್ಲ ಸ್ಪರ್ಧೆ ಮಾಡಬೇಕು ಎಂದು ಹೇಳಿದಾಗ ಬಹಳ ಜನ ಕರೆಯುತ್ತಾರೆ. ವರುಣಾದಿಂದ ಗೆದ್ದು ಸಿಎಂ ಆಗಿದ್ದೆ, ಬಾದಾಮಿಯಿಂದ ಸ್ಪರ್ಧಿಸಿ ಪ್ರತಿಪಕ್ಷ ನಾಯಕನಾದೆ (Leader of Opposition-LOP), ಕೋಲಾರದಿಂದ ಸ್ಪರ್ಧಿಸಿ ಗೆದ್ದು ಯಾಕೆ ಸಿಎಂ ಆಗಬಾರದು? ಎಂದು ತಮ್ಮ ಕನಸನ್ನು ಬಿಚ್ಚಿಟ್ಟ ಸಿದ್ದರಾಮಯ್ಯ, ಎಲ್ಲ ನಿರ್ಧಾರವನ್ನೂ ಹೈ ಕಮಾಂಡ್‌ಗೆ ಬಿಟ್ಟಿದ್ದೇನೆ. ಹೈಕಮಾಂಡ್ ಎಲ್ಲಿ ಹೇಳಿದರೂ ನಿಂತುಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ | ಕು.ಮು.ದ. ಲೆಕ್ಕದಲ್ಲಿ ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ಗೆಲುವಿಗೆ ನೂರೆಂಟು ತೊಡಕು; ಹಾಗಾದರೆ ಯಾರಿಗೆ ಲಾಭ?