ಕೆ.ಜಿ.ಹಳ್ಳಿ (ಮಾಲೂರು): ಗ್ಯಾರಂಟಿ ಸಮಾವೇಶಗಳನ್ನು (Guarantee Samavesha) ನಾವು ಕಾಟಾಚಾರಕ್ಕೆ, ಕೇವಲ ಹೆಸರಿಗಾಗಿ ಮಾಡುತ್ತಿಲ್ಲ. ಯೋಜನೆಗಳು ಯಾರಿಗೆ ತಲುಪಲಿಲ್ಲ ಎಂದು ತಿಳಿದುಕೊಂಡು ಅವುಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶಕ್ಕಾಗಿ ಸಮಾವೇಶ ಮಾಡಲಾಗುತ್ತಿದೆ. ಯಾರಿಗೆ ತಲುಪಿಲ್ಲ ಎಂದು ತಿಳಿಸಿದರೆ ಅವರಿಗೆ ಖುದ್ದಾಗಿ ತಲುಪಿಸುವ ಕೆಲಸವನ್ನು ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಮಾಲೂರು ತಾಲೂಕಿನ ಕೆ.ಜಿ.ಹಳ್ಳಿಯಲ್ಲಿ ಸೋಮವಾರ ನಡೆದ ಟೆಕಲ್ ಹೋಬಳಿ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮದಿಂದ ಗ್ಯಾರಂಟಿ ಯೋಜನೆಗಳು (Guarantee Schemes) ಯಶಸ್ವಿಯಾಗಿವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಮಹಿಳೆಯರ ಏಳಿಗೆಗೆ ಕೆಲಸ ಮಾಡುತ್ತಿದೆ. ಬಿಜೆಪಿಯವರ ರೀತಿ ಬರೀ ಮಾತನಾಡದೆ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಐದು ಗ್ಯಾರಂಟಿಗಳ ಪೈಕಿ ನನ್ನ ಇಲಾಖೆಗೆ ಸಂಬಂಧಿಸಿದ ಗೃಹಲಕ್ಷ್ಮಿಗಾಗಿ ಮಾಲೂರಿನ ತಾಲೂಕಿನಲ್ಲಿ ಪ್ರತಿ ತಿಂಗಳು 10 ಕೋಟಿ ವ್ಯಯಿಸಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರಥ್ಯದ ಕಾಂಗ್ರೆಸ್ ಸರ್ಕಾರ ಸದಾ ಬಡವರ ಕಾಳಜಿ ಹೊಂದಿದೆ. ಬಡವರ ಬಗ್ಗೆ ಕಾಳಜಿ ಇರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಹೆಬ್ಬಾಳ್ಕರ್ ಹೇಳಿದರು. ಗ್ಯಾರಂಟಿ ಯೋಜನೆಗಳು ಫೇಲ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಯಾರಿಗೆ ಸಿಕ್ಕಿಲ್ಲ ಎಂದು ಕೇಳಿದರೆ ಉತ್ತರವಿಲ್ಲ. ಯಾರಿಗೆ ಸಿಕ್ಕಿಲ್ಲ ಎಂದು ತೋರಿಸಿ ನಾವು ಕೊಡಿಸುತ್ತೇವೆ ಎನ್ನುವ ಸವಾಲನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಾಕಿದರು.
ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದ ಹೆಬ್ಬಾಳ್ಕರ್
ಸ್ವಾರ್ಥಕ್ಕೋಸ್ಕರ ಗ್ಯಾರಂಟಿ ಯೋಜನೆಗಳನ್ನು ತಂದಿಲ್ಲ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಬಿಜೆಪಿ ಯವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲ್ಲ ಎಂದು ಸಚಿವರು ಭರವಸೆ ನೀಡಿದರು.
Lakshmi Hebbalkar : ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿ
ಬಿಜೆಪಿ 400 ಸೀಟುಗಳನ್ನು ಗೆದ್ದರೆ ಭಾರತದ ಸಂವಿಧಾನವನ್ನು ಬದಲಿಸುವುದಾಗಿ ಹೇಳಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಸಚಿವೆ ಕಿಡಿ ಕಾರಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಲೇ ಸ್ಥಳೀಯ ಬಿಜೆಪಿ ಸಂಸದ ಮುನಿಸ್ವಾಮಿ ಲೋಕಸಭೆಗೆ ಪ್ರವೇಶಿಸಿರುವುದು. ಇದನ್ನ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ : Lakshmi Hebbalkar : ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಪದ್ಧತಿ ಶೀಘ್ರ ಜಾರಿ; ಲಕ್ಷ್ಮೀ ಹೆಬ್ಬಾಳ್ಕರ್
ಅಭ್ಯರ್ಥಿಗಳ ಆಯ್ಕೆ: ಹೈಕಮಾಂಡ್ ತೀರ್ಮಾನವೇ ಅಂತಿಮ
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ. ಬೆಳಗಾವಿ ಕ್ಷೇತ್ರಕ್ಕೆ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಲಿ ಅನ್ನೋದು ಸ್ಥಳೀಯ ಮುಖಂಡರ ಆಶಯವಾಗಿದೆ. ಜಿಲ್ಲಾ ಮುಖಂಡರು ಹಾಗೂ ವರಿಷ್ಠರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.