ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಯತ್ನಗಳ ನಡುವೆಯೇ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮತ್ತೊಮ್ಮೆ ಸ್ಪೋಟವಾಗಿದೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದ ಕೈ ಮುಖಂಡರ ಸಭೆಯಲ್ಲಿ ೨ ಬಣದ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆಯಾಗಿದೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಸಭೆ ಆಯೋಜನೆಯಾಗಿತ್ತು. ಸಭೆ ಆರಂಭವಾಗಿ ಅನೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೊನೆಯದಾಗಿ ಮುನಿಯಪ್ಪ ಮಾತನಾಡುವ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯ ವಿಚಾರದಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ಸ್ಪರ್ಧೆ ನಿರ್ಧಾರವನ್ನು ಹೈ ಕಮಾಂಡ್‌ಗೆ ಬಿಡೋಣ. ಇಲ್ಲಿರುವ ನಾಯಕರು ಒತ್ತಡ ಹೇರುವುದು ಬೇಡ. ಬೇರೆ ಕ್ಷೇತ್ರದ ನಾಯಕರಿಗೆ ಕೋಲಾರ ಉಸಾಬರಿ ಬೇಡ ಎಂದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಕೆಲವರು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲಿ ಎಂದು ಕೂಗಿದರು. ಈ ವೇಳೆ ಕೆಲವರು ಮುನಿಯಪ್ಪ ಪರ ಘೋಷಣೆ ಕೂಗಿದರು.
ಮುನಿಯಪ್ಪ ಎದುರಲ್ಲೇ ಕಾರ್ಯಕರ್ತರ ಕೂಗಾಟ, ನೂಕಾಟ ನಡೆಯಿತು. ಕೆ.ಎಚ್. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿ, ನಿಮಿಬ್ಬರ ಜಗಳದಿಂದ ಸಿದ್ದರಾಮಯ್ಯ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಿಮ್ಮಿಬ್ಬರ ಬಣದಿಂದ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹಾಳಾಗುತ್ತಿದೆ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದಂತೆ ಮೈಕ್ ಕಿತ್ತುಕೊಂಡ ಕೆ.ಎಚ್.ಮುನಿಯಪ್ಪ, ಕಾರ್ಯಕರ್ತರು ಹಾಗೂ ಗಲಾಟೆ ಮಾಡಿದ ಮುಖಂಡರಿಗೆ ತಿರುಗೇಟು ನೀಡಿದರು. ಈ ರೀತಿ ಗಲಾಟೆ ಮಾಡುವವರು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸುತ್ತಾರ? ಎಂದು ಪ್ರಶ್ನೆ ಮಾಡಿದರು. ಒಗ್ಗಟಾಗಿ ಕೆಲಸ ಮಾಡೋಣ. ಅಲ್ಲದೆ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆ, ಗೊಂದಲಗಳನ್ನು ಬಗೆಹರಿಸಿದ ಬಳಿಕ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಅಲ್ಲದೆ ಇಷ್ಟು ದಿನ ಆಗಿದ್ದಾಯಿತು, ಗುಂಪುಗಾರಿಗೆ ಬೇಡ ಒಟ್ಟಿಗೆ ಹೋಗೋಣ ಎಂದು ಹೇಳಿದ್ದೇನೆ. ಇಬ್ಬರು ಮೂವರು ಗೊಂದಲ ಮಾಡಿದ್ದಾರೆ, ಯಾರೂ ತಲೆಡೆಸುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಗುಂಪುಗಾರಿಕೆ ಮುಂದುವರಿಯುವುದಾದರೆ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಅದರಂತೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ನಾವು ಸ್ವಾಗತ ಮಾಡಿ ಕೆಲಸ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.
ಸಿದ್ದರಾಮಯ್ಯ ಬರಲಿಲ್ಲ ಎನ್ನುವುದಾದರೆ ಸ್ಥಳೀಯರಿಗೆ ಅವಕಾಶ ನೀಡಬೇಕು. ಯಾರಿಗೆ ಟಿಕೆಟ್ ನೀಡಿದರೂ ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಸಭೆ ಸಮಾರಂಭಗಳನ್ನು ಯಾರೂ ಏಕಪಕ್ಷೀಯವಾಗಿ ಮಾಡಬಾರದು. ಹೈಕಮಾಂಡ್ ಸಹ ಇಲ್ಲಿರುವ ಭಿನ್ನಮತವನ್ನು ಅರ್ಥ ಮಾಡಿಕೊಂಡು ಶೀಘ್ರದಲ್ಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕುಮಾರ್ ಬಣದ ಮುಖಂಡರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬೇಕು. ಇಬ್ಬರೂ ಮುಖಂಡರು ಒಂದಾಗಿ ಹೋಗಬೇಕು. ಆದರೂ ನಾವೆಲ್ಲ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳು ಎನ್ನುವುದು ನಮ್ಮ ಮಾತು ಎಂದರು.
ಇದನ್ನೂ ಓದಿ | Siddaramaiah CM | ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧಿಸಬೇಕು, ವರಿಷ್ಠರು ಸಿಎಂ ಮಾಡ್ಲೇಬೇಕು: ರಮೇಶ್ ಕುಮಾರ್ ವಾದ