ಬೆಂಗಳೂರು: ಕೋಲ್ಕತಾದಲ್ಲಿ ವೈದ್ಯೆ ವಿದ್ಯಾರ್ಥಿನಿ (Kolkata Doctor murder, Kolkata horror) ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವೈದ್ಯರು ನೀಡಿರುವ ದೇಶವ್ಯಾಪಿ ಪ್ರತಿಭಟನೆಗೆ (Doctors Strike) ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (OPD) ಬಂದ್ ಆಗಿರಲಿವೆ.
ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ (freedom Park) ಇಂದು ಬೆಳಿಗ್ಗೆ 10 ಗಂಟೆಯಿಂದ ವೈದ್ಯರ ಪ್ರತಿಭಟನೆ (Doctors Strike) ಆರಂಭವಾಗಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿ ವೈದ್ಯ ಸಮೂಹ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಓಪಿಡಿ ಬಂದ್ ಇರಲಿದೆ.
ಪ್ರತಿಭಟನೆಗೆ ಸರ್ಕಾರಿ ವೈದ್ಯರು ಕೂಡ ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಫ್ರೀಡಂ ಪಾರ್ಕಿನಲ್ಲಿ ಇಂದು ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಪ್ರತಿಭಟನೆಗೆ ಸಂಸದ ಹಾಗೂ ಖ್ಯಾತ ವೈದ್ಯ ಸಿಎನ್ ಮಂಜುನಾಥ್ ಜೊತೆ ನೀಡಲಿದ್ದಾರೆ.
ಯಾವೆಲ್ಲ ಸಂಘಟನೆ ಬೆಂಬಲ?
1) ರಾಜ್ಯಾದ್ಯಂತ ಐಎಂಎ ವ್ಯಾಪ್ತಿಯಲ್ಲಿ 30 ಸಾವಿರ ವೈದ್ಯರು ಬೆಂಬಲ
2) (ಫನಾ) ಖಾಸಗಿ ಆಸ್ಫತ್ರೆಗಳ ಒಕ್ಕೂಟ
3) ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಶನ್
4) ಮಕ್ಕಳ ವೈದ್ಯರ ಅಸೋಸಿಯೇಶನ್
5) ಅರ್ಥೋಪಿಟಿಕ್ ಅಸೋಸಿಯೇಶನ್
6) ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್ ಬೆಂಬಲ
7) ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ
ನಿನ್ನೆ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ನೂರಾರು ವೈದ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ನಡೆಸಿದ್ದರು. ಅದು ಇಂದೂ ಮುಂದುವರಿಯಲಿದೆ. ವೈದ್ಯರಿಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ʼಜಸ್ಟಿಸ್ ಫಾರ್ ಆರ್ ಜೆ ಕರ್ʼ ಎಂಬ ಬೋರ್ಡ್‌ಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ.
ನಮಗೆ ಸೆಕ್ಯೂರಿಟಿ ಹಾಗೂ ಸ್ಟೈಫಂಡ್ ಹೆಚ್ಚಿಗೆ ಮಾಡಬೇಕು. ಅಡ್ಮಿಶನ್ ಫೀಸ್ ಕಡಿಮೆ ಮಾಡಬೇಕು. ಪ್ರಸ್ತುತ 1.13 ಲಕ್ಷ ರೂಪಾಯಿ ವಾರ್ಷಿಕ ಫೀಸ್ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2.27 ಲಕ್ಷ ರೂ. ಫೀಸ್ ಕಟ್ಟಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರುವವರಿಗೆ ಪ್ರತಿ ತಿಂಗಳು 60 ಸಾವಿರ ಸ್ಟೈಫಂಡ್ ಇದೆ. ಆದರೆ ಸಾಮಾನ್ಯ ಆಸ್ಪತ್ರೆಯಲ್ಲಿ 40 ಸಾವಿರ ರೂಪಾಯಿ ಸ್ಟೈಫಂಡ್ ಇದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಸ್ಟೈಫಂಡ್ ಇದ್ದು, ನಮಗೆ ಬೇರೆ ರಾಜ್ಯದಲ್ಲಿ ಇರುವ ಸ್ಟೈಫಂಡ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೆಸಿ ಜನರಲ್, ವಿಕ್ಟೋರಿಯಾ, ಜಯದೇವ, ಮಿಂಟೋ, ಬೌರಿಂಗ್ ಆಸ್ಪತ್ರೆಗಳ ವೈದ್ಯರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಲವು ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ