ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಕೊಳ್ಳೇಗಾಲ ನಗರಸಭೆ ಉಪಚುನಾವಣೆಯಲ್ಲಿ (Kollegala Election) ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಎಸ್ಪಿ ಹಾಗೂ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಬಿಜೆಪಿಗೆ 6 ಮತ್ತು ಕಾಂಗ್ರೆಸ್‌ಗೆ 1 ಸ್ಥಾನಗಳು ಲಭ್ಯವಾಗಿವೆ. ಈ ಮೂಲಕ ಶಾಸಕ ಎನ್. ಮಹೇಶ್ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಮುಂದಿನ ಚುನಾವಣೆಗೆ ಸಜ್ಜಾಗಿದ್ದಾರೆ.
ಕೊಳ್ಳೇಗಾಲ ನಗರಸಭೆಯ 7 ಸ್ಥಾನಗಳಿಗೆ ನಡೆದಿದ್ದ ಉಪ ಚುನಾವಣೆಯು ಸಾಕಷ್ಟು ಕಾವು ಪಡೆದುಕೊಂಡಿತ್ತು. ಹಿಂದೆ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಕಾರಣಕ್ಕೆ 7 ಮಂದಿ ಬಿಎಸ್ಪಿ ಸದಸ್ಯರು ಅನರ್ಹಗೊಂಡಿದ್ದರು. ಈ ಸದಸ್ಯರ ನಿರ್ಧಾರದ ಹಿಂದೆ ಶಾಸಕ ಎನ್. ಮಹೇಶ್ ಅವರ ಸೂಚನೆ ಇತ್ತು ಎಂದೂ ಹೇಳಲಾಗುತ್ತಿತ್ತು.
ಬಿಎಸ್‌ಪಿ ನಗರಸಭೆ ಸದಸ್ಯರ ಉಚ್ಚಾಟನೆಯಿಂದ ತೆರವುಗೊಂಡ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಇದನ್ನು ಬಿಜೆಪಿ ಶಾಸಕ ಎನ್. ಮಹೇಶ್ ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ರಣತಂತ್ರವನ್ನೂ ಹೆಣೆದಿದ್ದರು. ಇದಕ್ಕೆ ಪ್ರತಿಯಾಗಿ ಬಿಎಸ್‌ಪಿ ಹಾಗೂ ಕಾಂಗ್ರೆಸ್‌ನಿಂದಲೂ ಪ್ರತಿತಂತ್ರವನ್ನು ಹೆಣೆಯಲಾಗಿತ್ತು.
ಇದನ್ನೂ ಓದಿ | ನರಹಂತಕ ಸಿದ್ದರಾಮಯ್ಯ, ಖಳನಾಯಕ ಸಿದ್ದರಾಮಯ್ಯ: ತೀವ್ರ ವಾಗ್ದಾಳಿ ನಡೆಸಿದ ನಳಿನ್ ಕುಮಾರ್ ಕಟೀಲ್
ಬಿಎಸ್‌ಪಿಯಿಂದ ಅನರ್ಹಗೊಂಡಿದ್ದ ನಗರಸಭೆ ಸದಸ್ಯರು ಶಾಸಕ ಎನ್. ಮಹೇಶ್ ಬೆಂಬಲಿಗರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಏಳೂ ಮಂದಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಮಹೇಶ್ ಯಶಸ್ವಿಯಾಗಿದ್ದರು. ಅಲ್ಲದೆ, ಅವರನ್ನು ಗೆಲ್ಲಿಸಿಕೊಂಡೂ ಬಂದಿದ್ದಾರೆ.
ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಶಾಸಕ
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎನ್. ಮಹೇಶ್ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಅಲ್ಲದೆ, ಬಿಎಸ್‌ಪಿ ಸಹ ಈ ಭಾಗದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದೆ. ಈ ಮಧ್ಯೆ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಶಾಸಕ ಮಹೇಶ್ ಅವರು ಬಿಜೆಪಿ ಸೇರಿದ್ದರು. ಅಲ್ಲದೆ, ಬಿಜೆಪಿ ಸಂಘಟನೆಯಲ್ಲೂ ನಿರತರಾಗಿದ್ದರು. ಈಗ ನಡೆದ ಉಪಚುನಾವಣೆಯಲ್ಲಿ ಏಳರಲ್ಲಿ ಆರು ಮಂದಿಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಮ್ಮ ಬಲವನ್ನು ಸಾಬೀತು ಪಡಿಸಿದ್ದಾರೆ. ಈ ಮೂಲಕ ಬರುವ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.