Site icon Vistara News

ತಾನು ಬದುಕಲ್ಲವೆಂದು ಪತ್ನಿ, ಮಗನ ಕೊಂದು ಆತ್ಮಹತ್ಯೆ ಮಾಡಿಕೊಂಡ: ಕೋಣನಕುಂಟೆ ಪ್ರಕರಣದ ಸತ್ಯ

konanakunte family

ಬೆಂಗಳೂರು: ಕೋಣನಕುಂಟೆಯಲ್ಲಿ ಆಗಸ್ಟ್‌ ೧೮ರಂದು ನಡೆದಿದ್ದು ಒಂದೇ ಕುಟುಂಬದ ಮೂವರ ದಾರುಣ ಸಾವು ಸಾಮೂಹಿಕ ಆತ್ಮಹತ್ಯೆಯಲ್ಲ, ಅದು ಕೊಲೆ ಕಂ ಆತ್ಮಹತ್ಯೆ ಎಂದು ಸಾಬೀತಾಗಿದೆ.

ಅಂಬರೀಷ್‌ ಅಭಿಮಾನಿ ಎನ್ನಲಾದ ಮಹೇಶ್, ಆತನ ಪತ್ನಿ ಜ್ಯೋತಿ ಹಾಗೂ ಪುತ್ರ ನಂದೀಶ್ ಗೌಡ(9) ಆಗಸ್ಟ್‌ ೧೮ರಂದು ಮನೆಯಲ್ಲಿ ಸಾವನ್ನಪ್ಪಿದ್ದರು. ಮಹೇಶ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಸರಿಯಾದ ಉದ್ಯೋಗವಿರಲಿಲ್ಲ. ಹೀಗಾಗಿ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಕ್ಯಾನ್ಸರ್‌ನಿಂದ ತಾವು ಸಾವನ್ನಪ್ಪಿದರೆ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವುದು ಯಾರು ಎಂಬ ಆತಂಕದಲ್ಲಿ ಮಹೇಶ್‌ ಇದ್ದರು. ಹೀಗಾಗಿ ಮೂವರೂ ಒಪ್ಪಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾದರು ಎಂದು ಹೇಳಲಾಗಿತ್ತು. ಆದರೆ, ಅದರ ನಡುವೆಯೇ ಜ್ಯೋತಿ ಅವರ ಮನೆಯವರು ಇದೊಂದು ಕೊಲೆ ಎಂದು ದೂರು ನೀಡಿದ್ದರು.

ಈಗ ಬಂದಿರುವ ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಸ್ವತಃ ಮಹೇಶನೇ ಪತ್ನಿ ಮತ್ತು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ. ಪತ್ನಿ ಮತ್ತು ಮಗನ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ ಬಳಿಕ ಡೆತ್‌ ನೋಟ್‌ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ.

ಆಗಸ್ಟ್‌ ೧೮ರಂದು ಕೊಣನಕುಂಟೆಯ ಮೈಸೂರು ಬ್ಯಾಂಕ್ ಕಾಲೊನಿಯ ಆ ಮನೆಯಲ್ಲಿ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಪತ್ನಿ ಹಾಗೂ ಮಗು ಬೆಡ್ ಮೇಲೆ ಶವವಾಗಿ ಬಿದ್ದಿದ್ದರು. ಜ್ಯೋತಿ ಮತ್ತು ನಂದೀಶನ ಮೈಮೇಲೆ ಗಾಯಗಳೂ ಕಂಡುಬಂದಿದ್ದವು.

ಮೂಲತಃ ಮಂಡ್ಯದವರಾದ ಮಹೇಶ್‌ ಬೆಂಗಳೂರಿಗೆ ಬಂದು ಕೆಲವು ವರ್ಷಗಳೇ ಕಳೆದಿವೆ. ಇಲ್ಲಿ ಅವರಿಗೆ ಸರಿಯಾದ ಉದ್ಯೋಗವಿರಲಿಲ್ಲ ಎನ್ನಲಾಗಿದೆ. ಬಿಬಿಎಂಪಿಯ ಬಿಲ್‌ ಕಲೆಕ್ಟರ್‌ ಒಬ್ಬರ ಜತೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಆರೋಗ್ಯ ಹದಗೆಟ್ಟಿದ್ದು, ಪರೀಕ್ಷಿಸಿದಾಗ ಕ್ಯಾನ್ಸರ್‌ ಎಂದು ತಿಳಿದುಬಂದಿತ್ತು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಮಹೇಶ್‌ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಾದಷ್ಟು ಹಣ ಹೊಂದಿಸಿಕೊಳ್ಳುವುದು ಕಷ್ಟವಾಗಬಹುದು, ಒಂದೊಮ್ಮೆ ತಾನು ಸಾವನ್ನಪ್ಪಿದರೆ ಕುಟುಂಬಕ್ಕೆ ತೊಂದರೆ ಆಗಬಹುದು ಎಂದು ಭ್ರಮಿಸಿ ಆತ್ಮಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಅಷ್ಟಕ್ಕೇ ಬಿಡದೆ ಹೆಂಡತಿ ಮಕ್ಕಳನ್ನೂ ಕೊಂದು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ| Family suicide| ಕ್ಯಾನ್ಸರ್‌ ವಕ್ಕರಿಸಿದ ಚಿಂತೆ: ಪತ್ನಿ, ಮಗುವಿಗೆ ವಿಷ ನೀಡಿ ತಾನೂ ನೇಣಿಗೆ ಶರಣಾದ

Exit mobile version