ಕೊಪ್ಪಳ: ಮಂಗಳವಾರ ರಾತ್ರಿ ಕೊಪ್ಪಳದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಎರಡನೇ ಬಲಿ ಪಡೆದಿದೆ. ಕಿರಾಣಿ ಅಂಗಡಿಯೊಂದು ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾದ ಈ ಘಟನೆಯಲ್ಲಿ ಮಂಗಳವಾರ ರಾತ್ರಿ ಪುಟ್ಟ ಬಾಲಕ ಜಯರಾಜ್ (೫) ಪ್ರಾಣ ಕಳೆದುಕೊಂಡಿದ್ದರೆ, ಬುಧವಾರ ಮುಂಜಾನೆ ಅವನ ಅಣ್ಣ ವಿನೋದ್ ರಾಜ್ (೧೧) ಬೆಂಕಿಯಿಂದ ಬಸವಳಿದ ದೇಹದೊಂದಿಗೆ ಕೊನೆಯುಸಿರೆಳೆದಿದ್ದಾನೆ.
ಮಂಗಳವಾರ ರಾತ್ರಿ ಕೊಪ್ಪಳ ತಾಲೂಕಿನ ಕೋಮಲಾಪೂರ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿತ್ತು. ಹನುಮಪ್ಪ ಎಂಬವರು ಮನೆಗೆ ಹೊಂದಿಕೊಂಡಂತೆ ಕಿರಾಣಿ ಅಂಗಡಿಯನ್ನು ಇಟ್ಟಿದ್ದರು. ರಾತ್ರಿ ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿತ್ತು. ಅದು ಪಕ್ಕದಲ್ಲೇ ಇದ್ದ ಮನೆಗೂ ಹಬ್ಬಿತ್ತು. ಅಂಗಡಿ ಮತ್ತು ಮನೆಯಲ್ಲಿ ಹನುಮಪ್ಪ ಅವರ ಮಕ್ಕಳಾದ ೧೧ ವರ್ಷದ ವಿನೋದ್‌ರಾಜ್, ೯ ವರ್ಷದ ಶಂಕರ್ ರಾಜ್ ಮತ್ತು ಐದು ವರ್ಷದ ಜಯರಾಜ್ ಇದ್ದರು.
ಒಮ್ಮಿಂದೊಮ್ಮೆಗೇ ಹೊತ್ತಿಕೊಂಡ ಬೆಂಕಿ ಅಂಗಡಿಯಿಂದ ಮನೆಗೂ ಹಬ್ಬಿದ್ದರಿಂದ ಮಕ್ಕಳು ಬೆಂಕಿಯ ಕೆನ್ನಾಲಿಗೆ ನಡುವೆ ಸಿಲುಕಿದರು. ಈ ಬೆಂಕಿ ಎಷ್ಟೊಂದು ಪ್ರಖರವಾಗಿತ್ತೆಂದರೆ ಧಗಧಗಿಸುವ ಬೆಂಕಿಯ ನಡುವಿನಿಂದ ಮಕ್ಕಳನ್ನು ಪಾರು ಮಾಡುವುದು ಭಾರಿ ಕಷ್ಟವಾಗಿತ್ತು. ಅಷ್ಟಾದರೂ ಹನುಮಪ್ಪ ಅವರು ವಿನೋದ್ ರಾಜ್ ಮತ್ತು ಶಂಕರ್‌ನ್ನು ಹೇಗೋ ಎಳೆದುಕೊಂಡು ಹೊರಗೆ ಬಂದಿದ್ದರು. ಆದರೆ, ಜಯರಾಜ್ ಎಂಬ ಐದು ವರ್ಷದ ಆ ಪುಟ್ಟ ಬಾಲಕ ಮಾತ್ರ ತಂದೆಯ ಕಣ್ಣೆದುರೇ ಸುಟ್ಟು ಕರಕಲಾಗಿ ಹೋಗಿದ್ದ.
ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದರೂ ಅಷ್ಟು ಹೊತ್ತಿಗೆ ಸಾರ್ವಜನಿಕರೇ ಪ್ರಾಣ ರಕ್ಷಣೆಗೆ ಭಾರಿ ಸಾಹಸ ನಡೆಸಿದ್ದರು. ಜನರು ಸೇರಿ ಮಕ್ಕಳನ್ನು ರಕ್ಷಿಸಲು ನಡೆಸುತ್ತಿರುವ ಹರಸಾಹಸದ ವಿಡಿಯೋ ಕಣ್ಣೀರು ಬರಿಸುವಂತಿದೆ. ಎಲ್ಲಿವರೆಗೆ ಎಂದರೆ ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿದ್ದ ಮಕ್ಕಳನ್ನು ಕೋಲಿನಿಂದ ಎಳೆಯಲು ಪ್ರಯತ್ನಿಸುತ್ತಿರುವ ದೃಶ್ಯಗಳು ತುಂಬ ಕಾಡುತ್ತಿವೆ.
ಈ ನಡುವೆ ಪುಟ್ಟ ಹುಡುಗ ಜಯರಾಜ್ ಎಲ್ಲರ ಕಣ್ಣೆದುರೇ ಸುಟ್ಟು ಕರಕಲಾಗಿ ಹೋದರೆ ವಿನೋದ್ ಮತ್ತು ಶಂಕರ್ ಅವರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾರಿ ಪ್ರಮಾಣದಲ್ಲಿ ದೇಹ ಸುಟ್ಟಿದ್ದರಿಂದ ವಿನೋದ್ ಬುಧವಾರ ಬೆಳಗ್ಗಿನ ಹೊತ್ತಿಗೆ ಪ್ರಾಣ ಕಳೆದುಕೊಂಡಿದ್ದಾನೆ. ಇದರೊಂದಿಗೆ ಒಂದು ಕುಟುಂಬ ಇಬ್ಬರು ಪುಟಾಣಿ ಮಕ್ಕಳನ್ನು ಕಳೆದುಕೊಳ್ಳುವಂತೆ ಮಾಡಿದೆ ಅಗ್ನಿ ದುರಂತ. ಕುಟುಂಬದ ಕಣ್ಣೀರು, ರೋದನ ಎಲ್ಲರ ಮನಸು ಕಲಕುತ್ತಿದೆ.
ನಿನ್ನೆಯ ಸುದ್ದಿ| ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಬಾಲಕ ಸಾವು, ಮೂವರು ಪ್ರಾಣಾಪಾಯದಿಂದ ಪಾರು